ಪಾಕಿಸ್ತಾನದಲ್ಲಿ 889 ಕಮಾಂಡೋಗಳಿಂದ ವಿಂಡೀಸ್ ತಂಡಕ್ಕೆ ಭದ್ರತೆ

PAK vs WI Cricket Series- 2009ರಿಂದ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ನಡೆಯುವುದು ತೀರಾ ಅಪರೂಪಕ್ಕೆ ಎಂಬಂತಾಗಿದೆ. ಈಗ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸಕ್ಕೆ ಬಂದಿದೆ. ಯಾವುದೇ ಲೋಪ ಇಲ್ಲದಂತೆ ಪಾಕಿಸ್ತಾನ ಭದ್ರತಾ ವ್ಯವಸ್ಥೆ ರೂಪಿಸಿದೆ.

ವೆಸ್ಟ್ ಇಂಡೀಸ್ ಆಟಗಾರರು

ವೆಸ್ಟ್ ಇಂಡೀಸ್ ಆಟಗಾರರು

  • Share this:
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಳೆದ 10-12 ವರ್ಷಗಳಿಂದ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆಯುವುದು ಬಹಳ ಅಪರೂಪ. 2009ರಲ್ಲಿ ಲಾಹೋರ್​ನ ಕ್ರಿಕೆಟ್ ಸ್ಟೇಡಿಯಂ ಬಳಿ ಶ್ರೀಲಂಕಾ ಆಟಗಾರರಿದ್ದ ಬಸ್ ಮೇಲೆ ಬಾಂಬ್ ದಾಳಿ ನಡೆದ ಘಟನೆ ಸಂಭವಿಸಿದ ಬಳಿಕ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವುದೇ ದುಸ್ತರವಾಗಿದೆ. ಜಿಂಬಾಬ್ವೆ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮಾತ್ರ ಪಾಕಿಸ್ತಾನಕ್ಕೆ ಹೋಗಿ ಆಡುವ ಧೈರ್ಯ ಮಾಡಿವೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಆಡಬೇಕಿದ್ದ ನ್ಯೂಜಿಲೆಂಡ್ ಮೊದಲಾದ ತಂಡಗಳು ಭದ್ರತೆಯ ಕಾರಣವೊಡ್ಡಿ ಸರಣಿ ರದ್ದು ಮಾಡಿಕೊಂಡವು. ಅಂತರರಾಷ್ಟ್ರೀಯ ಪಂದ್ಯಗಳಿಲ್ಲದೇ ಆರ್ಥಿಕವಾಗಿ ಸೊರಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಅಂತರರಾಷ್ಟ್ರೀಯ ಪಂದ್ಯಗಳ ಆಯೋಜನೆಗೆ ಹಾತೊರೆಯುತ್ತಿದೆ. ಇದೀಗ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ ಬಂದಿದೆ. ಪಾಕಿಸ್ತಾನ ಬಹಳ ಜಾಗ್ರತೆಯಿಂದ ಕೆರಿಬಿಯನ್ನರಿಗೆ ಭದ್ರತೆ ಒದಗಿಸಲು ಮುಂದಾಗಿದೆ.

ಡಿಸೆಂಬರ್ 13ರಿಂದ ಪಾಕಿಸ್ತಾನದಲ್ಲಿ ವೆಸ್ಟ್ ಇಂಡೀಸ್ 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನ ಆಡಲಿದೆ. ಕರಾಚಿಯಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ.

ಬಹಳ ಅಪರೂಪಕ್ಕೆ ಅಂತರರಾಷ್ಟ್ರೀಯ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯುತ್ತಿರುವುದರಿಂದ ಆಟಗಾರರ ಭದ್ರತೆಗೆ ಅಪಾಯವಾಗುವಂಥ ಘಟನೆ ಸಂಭವಿಸಿದರೆ ಮತ್ತೊಮ್ಮೆ ಯಾವುದೇ ತಂಡವೂ ಪಾಕಿಸ್ತಾನಕ್ಕೆ ಬರಲು ಹಿಂದೇಟು ಹಾಕಬಹುದು ಎಂಬ ಅರಿವು ಪಾಕಿಸ್ತಾನಕ್ಕೆ ಇದೆ. ಅಲ್ಲದೇ ಇತ್ತೀಚೆಗೆ ಪಾಕಿಸ್ತಾನದಲ್ಲಿ ಶ್ರೀಲಂಕನ್ ನಾಗರಿಕನೊಬ್ಬನನ್ನು ಜನರ ಗುಂಪೊಂದು ಬಡಿದು ಕೊಂದು ಸುಟ್ಟುಹಾಕಿದ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಕುಖ್ಯಾತಿ ತಂದುಕೊಟ್ಟಿತ್ತು. ಹೀಗಾಗಿ, ಪಾಕಿಸ್ತಾನ ಸರ್ಕಾರ ವೆಸ್ಟ್ ಇಂಡೀಸ್ ತಂಡಕ್ಕೆ ಯಾವುದೇ ಲೋಪವಿಲ್ಲದಂತೆ ಭದ್ರತೆ ಒದಗಿಸಲು ಯೋಜಿಸಿದೆ.

ಇದನ್ನೂ ಓದಿ: ಎಜಾಜ್ ಸಾಧನೆ ಹಿಂದೆ ಮಾಜಿ ಕರ್ನಾಟಕ ಕ್ರಿಕೆಟಿಗ; ಸ್ನೇಹ, ಗುರು-ಶಿಷ್ಯರಂತಿದೆ ಅವರಿಬ್ಬರ ಸಂಬಂಧ

ಭದ್ರತಾ ವ್ಯವಸ್ಥೆಯಲ್ಲಿ 889 ಟಾಪ್ ಕಮಾಂಡೋಗಳು:

ಮೊದಲ ಪಂದ್ಯ ನಡೆಯಲಿರುವ ಕರಾಚಿಯಲ್ಲಿ ಸಮರೋಪಾದಿಯ ರೀತಿಯಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕರಾಚಿ ನಗರದ ಪೊಲೀಸ್ ವಿಭಾಗದ 13 ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ 46 ಡಿಎಸ್​ಪಿ ಮಟ್ಟದ ಅಧಿಕಾರಿಗಳು ಭದ್ರತಾ ವ್ಯವಸ್ಥೆಯಲ್ಲಿದ್ದಾರೆ. ಪಾಕಿಸ್ತಾನದ ವಿಶೇಷ ಭದ್ರತಾ ವಿಭಾಗದ 889 ಕಮಾಂಡೋಗಳು, ಕ್ಷಿಪ್ರ ಕಾರ್ಯಾಚರಣೆ ಪಡೆಯ 500 ಸಿಬ್ಬಂದಿ, 3822 ಪೊಲೀಸ್ ಸಿಬ್ಬಂದಿ, 50 ಮಹಿಳಾ ಪೊಲೀಸ್, 315 ಎನ್​ಜಿಓ ಅವರುಗಳು ಕರಾಚಿಯಲ್ಲಿ ಬಿಗಿ ಪಹರೆ ನಡೆಸಲಿದ್ದಾರೆ.

ಕರಾಚಿಯ ಟ್ರಾಫಿಕ್ ವಿಭಾಗದ ಪೊಲೀಸರನ್ನೂ ನಿಯೋಜಿಸಲಾಗಿದೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂ, ಆಟಗಾರರ ಹೋಟೆಲ್​ನಿಂದ ಸ್ಟೇಡಿಯಂವರೆಗಿನ ದಾರಿ, ಪ್ರಾಕ್ಟೀಸ್ ಗ್ರೌಂಡ್, ಪಾರ್ಕಿಂಗ್ ಪ್ರದೇಶ, ಹೋಟೆಲ್ ಮತ್ತಿತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿದೆ.

ಸ್ಪೆಷಲ್ ಬ್ರ್ಯಾಂಚ್​ನ ಸಿಬ್ಬಂದಿ ಸಮವಸ್ತ್ರದ ಬದಲು ನಾಗರಿಕ ಉಡುಪು ಧರಿಸಿ ಸ್ಟೇಡಿಯಂ ಮತ್ತು ಹೋಟೆಲ್​ಗಳಲ್ಲಿ ಕಣ್ಗಾವಲು ನಡೆಸಲಿದ್ದಾರೆ. ವಿಶೇಷ ಶಸ್ತ್ರ ಮತ್ತು ಕಾರ್ಯತಂತ್ರ (Special Weapons and Tactics Team) ತಂಡವನ್ನು ತುರ್ತು ಪರಿಸ್ಥಿತಿ ಬಂದರೆ ಎದುರಿಸಲು ಸಜ್ಜಾಗಿ ಇರಿಸಲಾಗಿದೆ.

ಇದನ್ನೂ ಓದಿ: ‘ತಂಡಕ್ಕೆ ಈ ಗುಣ ಇರಬೇಕು’- ಕ್ಯಾಪ್ಟನ್ಸಿ ಬಗ್ಗೆ ರೋಹಿತ್ ಶರ್ಮಾದ್ದು ವಿಭಿನ್ನ ದೃಷ್ಟಿಕೋನ

ಕರಾಚಿಯಲ್ಲೇ ಎಲ್ಲಾ ಪಂದ್ಯಗಳು: 

ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಸರಣಿಗಳ ಎಲ್ಲಾ ಪಂದ್ಯಗಳೂ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲೇ ನಡೆಯಲಿವೆ. ಡಿಸೆಂಬರ್ 13, 14 ಮತ್ತು 16ರಂದು ಮೂರು ಟಿ20 ಪಂದ್ಯಗಳು ನಡೆಯಲಿವೆ. ಡಿಸೆಂಬರ್ 18, 20 ಮತ್ತು 22ರಂದು ಮೂರು ಏಕದಿನ ಪಂದ್ಯಗಳು ನಿಗದಿಯಾಗಿವೆ.

ಈಗ ಈ ಸರಣಿಯನ್ನ ಅಚ್ಚುಕಟ್ಟಾಗಿ ಆಯೋಜಿಸಿ ಇತರ ಅಂತರರಾಷ್ಟ್ರೀಯ ತಂಡಗಳಿಗೆ ಒಂದು ಪಾಸಿಟಿವ್ ಸಂದೇಶ ತಲುಪಿಸುವುದು ಪಾಕಿಸ್ತಾನದ ಗುರಿಯಾಗಿದೆ. ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯಾವಳಿಯಲ್ಲಿ ಅಂತರರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳುತ್ತಾರೆ. ಈವರೆಗೂ ಆ ಆಟಗಾರರಿಗೆ ಅಪಾಯವಾಗುವಂಥ ಯಾವ ಘಟನೆಯೂ ಆಗಿದ್ದಿಲ್ಲ. ಆದರೆ, ಅಂತರರಾಷ್ಟ್ರೀಯ ಟೂರ್ನಿ ಅಥವಾ ದ್ವಿರಾಷ್ಟ್ರ ಸರಣಿಗಳು ಪಾಕಿಸ್ತಾನದಲ್ಲಿ ಮತ್ತೆ ಸರಾಗವಾಗಿ ನಡೆಯಬೇಕೆಂದರೆ ವಿಂಡೀಸ್ ತಂಡದ ಪ್ರವಾಸ ಯಾವುದೇ ಅವಘಡ ಇಲ್ಲದೇ ನಡೆದು ಮುಗಿಯಬೇಕಿದೆ.
Published by:Vijayasarthy SN
First published: