T20 World Cup- ಕೆಎಲ್ ರಾಹುಲ್, ಧೋನಿ, ಪಂತ್ ಬಗ್ಗೆ ಪಾಕಿಸ್ತಾನ್ ಕೋಚ್ ಹೇಡನ್ ಹೇಳಿದ್ದಿದು
Pakistan Coach Mathew Hayden speaks on Dangerous Indian Batters: ಭಾನುವಾರ ನಡೆಯುವ ಭಾರತ-ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ಪಾಕಿಸ್ತಾನಕ್ಕೆ ಮಾರಕವಾಗಿ ಪರಿಣಮಿಸಬಹುದು ಎಂಬುದು ಪಾಕಿಸ್ತಾನ್ ಕೋಚ್ ಹೇಡನ್ ಅನಿಸಿಕೆ.
ದುಬೈ, ಅ. 23: ನಾಳೆ ಭಾನುವಾರ ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವೆ ಟಿ20 ವಿಶ್ವಕಪ್ ಪಂದ್ಯಕ್ಕೆ ಬಹಳ ಹೈಪ್ ಸೃಷ್ಟಿಯಾಗಿದೆ. ಏಕದಿನ ಮತ್ತು ಟಿ20 ವಿಶ್ವಕಪ್ಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಮ್ಮೆಯೂ ಗೆದ್ದಿಲ್ಲ ಎಂಬ ಒಂದು ಅಂಶವೇ ಪಾಕಿಸ್ತಾನ ಕ್ರಿಕೆಟ್ ತಂಡದ ಮೇಲೆ ಅಪರಿಮಿತ ಒತ್ತಡ ಸೃಷ್ಟಿಸುತ್ತದೆ. ಹಿಂದಿನೆಲ್ಲಾ ವಿಶ್ವಕಪ್ಗಳಿಗೆ ಹೋಲಿಸಿದರೆ ಈ ಬಾರಿ ಭಾರತ ತಂಡ ಬಹಳ ಸಮರ್ಥವಾಗಿದೆ. ಅತಿ ಹೆಚ್ಚು ಬಲಿಷ್ಠವಾಗಿದೆ. ಭರ್ಜರಿ ಫಾರ್ಮ್ನಲ್ಲಿರುವ ಆಟಗಾರರಿದ್ದಾರೆ. ಪಾಕಿಸ್ತಾನ ತಂಡದ ಆಟಗಾರರೂ ಒಳ್ಳೆಯ ಫಾರ್ಮ್ನಲ್ಲಿದ್ಧಾರಾದರೂ ಸದ್ಯದ ಸಂದರ್ಭದಲ್ಲಿ ಭಾರತವನ್ನು ಸೋಲಿಸುವುದು ಪಾಕಿಸ್ತಾನಕ್ಕೆ ತುಸು ಕಬ್ಬಿಣದ ಕಡಲೆ ಎನಿಸಬಹುದು. ಪಾಕಿಸ್ತಾನದ ಕೋಚ್ ಹಾಗೂ ಮಾಜಿ ಆಸ್ಟ್ರೇಲಿಯನ್ ಆಟಗಾರ ಮ್ಯಾಥ್ಯೂ ಹೇಡನ್ ಅವರೂ ಈ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ನಾಳೆ ಭಾರತ ಮತ್ತು ಪಾಕಿಸ್ತಾನದ ಪಂದ್ಯದಲ್ಲಿ ನಾಯಕತ್ವ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಡನ್ ಅಭಿಪ್ರಾಯಪಟ್ಟಿದ್ಧಾರೆ.
ಭಾರತ ಪಾಕಿಸ್ತಾನ ಪಂದ್ಯದಲ್ಲಿ ದೊಡ್ಡ ತಪ್ಪುಗಳಿಗೆ ಅವಕಾಶ ಇರಬಾರದು. ತಂಡದ ನಾಯಕತ್ವ ಹೇಗಿರುತ್ತದೆ ಎಂಬುದು ಮುಖ್ಯ ಎಂದ ಅವರು ಎಂಎಸ್ ಧೋನಿ ಮತ್ತು ಇಯಾನ್ ಮಾರ್ಗನ್ ಅವರ ಉದಾಹರಣೆ ನೀಡಿದ್ಧಾರೆ.
ಎಂಎಸ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಯಿತು. ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ ಫೈನಲ್ ತಲುಪಿತ್ತು. ಧೋನಿ ಮತ್ತು ಮಾರ್ಗನ್ ಇಬ್ಬರೂ ವೈಯಕ್ತಿಕವಾಗಿ ಹೆಚ್ಚು ಸಫಲರಾಗದಿದ್ದರೂ ಸಮರ್ಥ ನಾಯಕತ್ವದಿಂದ ತಮ್ಮ ತಂಡವನ್ನ ಮುನ್ನಡೆಸಿದ್ದರು. ಈ ವಿಚಾರವನ್ನು ಹೇಡನ್ ಉಲ್ಲೇಖಿಸಿ ನಾಯಕತ್ವದ ಪ್ರಾಮುಖ್ಯತೆಯನ್ನ ಒತ್ತಿಹೇಳಿದ್ಧಾರೆ.
“ಯುಎಇಯಲ್ಲಿನ ಪಿಚ್ಗಳನ್ನ ಗಮನಿಸಿದರೆ ಇಲ್ಲಿ ತಪ್ಪುಗಳಿಗೆ ಆಸ್ಪದ ಇರಬಾರದು. ಇಂಥ ಸಂದರ್ಭದಲ್ಲಿ ನಾಯಕತ್ವ ಬಹಳ ಮುಖ್ಯ ಆಗುತ್ತದೆ” ಎಂದಿದ್ದಾರೆ ಪಾಕಿಸ್ತಾನದ ಕ್ರಿಕೆಟ್ ಕೋಚ್ ಹೇಡನ್.
ಪಾಕಿಸ್ತಾನಕ್ಕೆ ಕೆಎಲ್ ರಾಹುಲ್ ಡೇಂಜರಸ್:
ನಾಳೆ ಪಾಕಿಸ್ತಾನ ತಂಡ ಭಾರತದ ಬ್ಯಾಟರ್ ಕೆಎಲ್ ರಾಹುಲ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮ್ಯಾಥ್ಯೂ ಹೇಡನ್ ಸಲಹೆ ನೀಡಿದ್ಧಾರೆ. ”ನಾನು ಕೆಎಲ್ ರಾಹುಲ್ ಬೆಳವಣಿಗೆಯನ್ನ ನೋಡಿದ್ದೇನೆ. ಅವರು ಪಾಕಿಸ್ತಾನಕ್ಕೆ ದೊಡ್ಡ ಅಪಾಯ ಆಗಿದ್ಧಾರೆ. ರಾಹುಲ್ ಹುಡುಗನಾಗಿದ್ದಾಗಿನಿಂದಲೂ ಬೆಳವಣಿಗೆಯನ್ನ ನೋಡುತ್ತಾ ಬಂದಿದ್ದೇನೆ. ಅವರ ಕಳಪೆ ದಿನಗಳು ಹಾಗೂ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅವರ ಆರ್ಭಟವನ್ನ ಗಮನಿಸಿದ್ದೇನೆ…” ಎಂದು ಹೇಡನ್ ತಿಳಿಸಿದ್ಧಾರೆ.
“…ರಿಷಭ್ ಪಂತ್ ಆಟವನ್ನೂ ಗಮನಿಸಿದ್ಧೇನೆ. ಆತನದ್ದು ಆಕ್ರಮಣಕಾರಿ ಪ್ರವೃತ್ತಿ. ಕ್ರಿಕೆಟ್ ಆಟದ ಬಗ್ಗೆ ಅದ್ಭುತ ದೃಷ್ಟಿಕೋನ ಹೊಂದಿದ್ದಾರೆ. ಅವಕಾಶ ಸಿಕ್ಕಾಗೆಲ್ಲಾ ಬೌಲಿಂಗ್ ದಾಳಿಗಳನ್ನ ಚೆಂಡಾಡುತ್ತಾರೆ. ಅದೇ ಅವರ ಪ್ರವೃತ್ತಿ” ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮ್ಯಾಥ್ಯೂ ಹೇಡನ್ ಹೇಳಿದ್ಧಾರೆ.
ಏಕದಿನ ಮತ್ತು ಟಿ20 ಕ್ರಿಕೆಟ್ನ ವಿಶ್ವಕಪ್ಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಒಮ್ಮೆಯೂ ಗೆದ್ದಿಲ್ಲ. ಪಾಕಿಸ್ತಾನ ವಿರುದ್ಧ ಭಾರತ 12 ಪಂದ್ಯಗಳನ್ನ ಗೆದ್ದಿದೆ. ಟಿ20 ವಿಶ್ವಕಪ್ಗಳಲ್ಲಿ ಐದು ಬಾರಿ ಭಾರತ ಗೆದ್ದಿದೆ. ಐಸಿಸಿ ಟೂರ್ನಿಗಳಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ ಜಯ ಸಿಕ್ಕಿರುವುದು ಒಮ್ಮೆ ಮಾತ್ರ. ಅದು 2019ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮಾತ್ರ ಪಾಕಿಸ್ತಾನ ಗೆಲುವಿನ ನಗೆ ಬೀರಿರುವುದು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ