T20 World Cup- ಭಾರತ ಆಯ್ತು, ಶಾರ್ಜಾದಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಪಾಕಿಸ್ತಾನ ಗೆಲುವು

Pak beat NZ in T20 World Cup- ಟಿ20 ವಿಶ್ವಕಪ್​ನ ಸೂಪರ್-12 ಹಂತದಲ್ಲಿ ಪಾಕಿಸ್ತಾನ ಸತತ ಎರಡನೇ ಗೆಲುವು ಸಾಧಿಸಿದೆ. ಮೊನ್ನೆ ಭಾರತವನ್ನು ಸೋಲಿಸಿದ ಪಾಕಿಸ್ತಾನ ಇಂದು ನ್ಯೂಜಿಲೆಂಡ್ ವಿರುದ್ಧವೂ ಗೆದ್ದು ಬೀಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡ

ಪಾಕಿಸ್ತಾನ ಕ್ರಿಕೆಟ್ ತಂಡ

  • Share this:
    ಶಾರ್ಜಾ, ಅ. 26: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನದ ಶುಭಾರಂಭ ಮುಂದುವರಿದಿದೆ. ದುಬೈನಲ್ಲಿ ಮೊನ್ನೆ ಭಾರತವನ್ನ ಸಲೀಸಾಗಿ ಬಗ್ಗುಬಡಿದಿದ್ದ ಪಾಕಿಸ್ತಾನ ತಂಡ ಇಂದು ಶಾರ್ಜಾದಲ್ಲಿ ನ್ಯೂಜಿಲೆಂಡ್ ವಿರುದ್ಧ ತುಸು ಪ್ರಯಾಸಕರ ಗೆಲುವು ದಾಖಲಿಸಿದೆ. ಗೆಲ್ಲಲು ಸಾಧಾರಣವೆನಿಸುವ 135 ರನ್ ಗುರಿ ಪಡೆದ ಪಾಕಿಸ್ತಾನ 19ನೇ ಓವರ್​ನಲ್ಲಿ ಐದು ವಿಕೆಟ್ ನಷ್ಟಕ್ಕೆ ಗೆಲುವು ಪಡೆಯಿತು.

    ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಆಡಿದ್ದ ಮೊಹಮ್ಮದ್ ರಿಜ್ವಾನ್ ಇಂದು ನ್ಯೂಜಿಲೆಂಡ್ ವಿರುದ್ಧ 33 ರನ್ ಗಳಿಸಿ ಪಾಕಿಸ್ತಾನದ ಚೇಸಿಂಗ್​ಗೆ ಬಲ ನೀಡಿದರು. 40 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಾಗ ಪಂದ್ಯ ಕುತೂಹಲಕಾರಿ ತಿರುವು ಪಡೆಯಿತು. ಆದರೆ, ಕೊನೆಯಲ್ಲಿ ಶೋಯಬ್ ಮಲಿಕ್ ಮತ್ತು ಅಸಿಫ್ ಅಲಿ ಅವರು ಪಂದ್ಯ ಕೊನೆಯ ಓವರ್​ವರೆಗೂ ಹೋಗದಂತೆ ಬೇಗನೇ ಮುಕ್ತಾಯಗೊಳ್ಳುವಂತೆ ಆಡಿದರು. ಅಸಿಫ್ ಅಲಿ 12 ಬಾಲ್​ನಲ್ಲಿ 27 ರನ್ ಗಳಿಸಿ ಬೆಸ್ಟ್ ಫಿನಿಶರ್ ಎನಿಸಿದರು.

    ರೌಫ್​ಗೆ 4 ವಿಕೆಟ್:

    ಇದಕ್ಕೆ ಮುನ್ನ ಪಾಕಿಸ್ತಾನದ ಬೌಲರ್​ಗಳು ನ್ಯೂಜಿಲೆಂಡ್ ತಂಡದ ಇನ್ನಿಂಗ್ಸನ್ನು 134 ರನ್​ಗೆ ಸೀಮಿತಗೊಳಿಸಿದರು. ಡೆರಿಲ್ ಮಿಶೆಲ್, ಕೇನ್ ವಿಲಿಯಮ್ಸನ್ ಮತ್ತು ಡೆವೋನ್ ಕಾನ್ವೇ ಅವರನ್ನ ಬಿಟ್ಟರೆ ಉಳಿದವರು ಬಹುತೇಕ ವಿಫಲರಾದರು. ಪಾಕಿಸ್ತಾನದ ಬಹುತೇಕ ಎಲ್ಲಾ ಬೌಲರ್​ಗಳು ಪರಿಣಾಮಕಾರಿ ಎನಿಸಿದರು. ಅದರಲ್ಲೂ ಹ್ಯಾರಿಸ್ ರೌಫ್ 22 ರನ್​ಗೆ 4 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾದರು.

    ಪಾಕಿಸ್ತಾನ ನಾಕೌಟ್ ಪ್ರವೇಶದ ಹೊಸ್ತಿಲಲ್ಲಿ:

    ಪಾಕಿಸ್ತಾನ ಈಗ ಸತತ ಎರಡು ಗೆಲುವಿನೊಂದಿಗೆ ಸೂಪರ್-12 ಮೊದಲ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿ ಭದ್ರವಾಗಿ ಕೂತಿದೆ. ಗುಂಪಿನಲ್ಲಿ ತಮ್ಮ ಎದುರಾಳಿಗಳ ಪೈಕಿ ಪ್ರಬಲವೆನಿಸಿದ ಎರಡೂ ತಂಡಗಳನ್ನ ಮಣಿಸಿರುವ ಪಾಕಿಸ್ತಾನಕ್ಕೆ ಇದೀಗ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳ ಸವಾಲು ಮಾತ್ರ ಉಳಿದಿದೆ. ಈ ಲೆಕ್ಕದಲ್ಲಿ ಪಾಕಿಸ್ತಾನದ ನಾಕೌಟ್ ಪ್ರವೇಶ ಬಹುತೇಕ ಖಚಿತ ಎಂದು ಭಾವಿಸಲಾಗಿದೆ.

    ಇದನ್ನೂ ಓದಿ: SA vs WI- ಹರಿಣಗಳ ದಾಳಿಗೆ ವಿಂಡೀಸ್ ಧೂಳೀಪಟ; ಒಂದೇ ವಿಕೆಟ್ ಪಡೆದರೂ ನೋರ್ಟಿಯಾ ಪಂದ್ಯಶ್ರೇಷ್ಠ

    ಮುಂದಿನ ಪಂದ್ಯಗಳು:

    ಇತ್ತ ನ್ಯೂಜಿಲೆಂಡ್ ತಂಡಕ್ಕೆ ಇದು ಮೊದಲ ಪಂದ್ಯವಾಗಿದೆ. ಅದು ತನ್ನ ಮುಂದಿನ ಪಂದ್ಯವನ್ನು ಭಾರತ ವಿರುದ್ಧ ಆಡಲಿದೆ. ಅದು ಅ. 31ರಂದು ದುಬೈನಲ್ಲಿ ಪಂದ್ಯ ನಡೆಯಲಿದೆ. ಇದಕ್ಕೆ ಮುನ್ನ ಪಾಕಿಸ್ತಾನ ತನ್ನ ಮೂರನೇ ಪಂದ್ಯವನ್ನ ಅ. 29ರಂದು ದುಬೈನಲ್ಲೇ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯವನ್ನ ಪಾಕಿಸ್ತಾನ ಗೆದ್ದರೆ ಸೆಮಿಫೈನಲ್ ಪ್ರವೇಶ ಬಹುತೇಕ ಖಾತ್ರಿಗೊಂಡಂತೆ.

    ನ್ಯೂಜಿಲೆಂಡ್ ವಿರುದ್ಧ ಸೇಡು:

    ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನಕ್ಕೆ ಕ್ರಿಕೆಟ್ ಪ್ರವಾಸ ಹೋಗಿದ್ದ ನ್ಯೂಜಿಲೆಂಡ್ ತಂಡ ದಿಢೀರನೇ ಪ್ರವಾಸ ರದ್ದುಗೊಳಿಸಿ ತವರಿಗೆ ಹೊರಟು ಹೋಗಿತ್ತು. ಭದ್ರತಾ ಅಪಾಯ ಇದೆ ಎಂಬ ಕಾರಣಕ್ಕೆ ನ್ಯೂಜಿಲೆಂಡ್ ದೇಶದ ಸರ್ಕಾರದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಆ ತಂಡ ಪಾಕ್ ವಿರುದ್ಧದ ಕ್ರಿಕೆಟ್ ಸರಣಿಯನ್ನು ಸ್ಥಗಿತಗೊಳಿಸಿತ್ತು. ನ್ಯೂಜಿಲೆಂಡ್​ನ ಈ ಕ್ರಮ ಪಾಕಿಸ್ತಾನ ಕ್ರಿಕೆಟ್​ಗೆ ಆಘಾತಕಾರಿ ಆಗಿದೆ ಎಂದು ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಅಲವತ್ತುಕೊಂಡಿತು. ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ತಮ್ಮ ಆಕ್ರೋಶಕ್ಕೆ ಇನ್ನೊಂದು ರೂಪ ಕೊಟ್ಟಿದ್ದಾರೆ.

    ಇದನ್ನೂ ಓದಿ: ಪಾಕಿಸ್ತಾನದ ಗಲ್ಲಿಗಲ್ಲಿಯಲ್ಲೂ ಇಂಥವರು ಇದ್ದಾರೆ: ಭಾರತೀಯ ಬೌಲರ್ ಅಣಕಿಸಿದ ಮಾಜಿ ಆಟಗಾರ

    ಸ್ಕೋರು ವಿವರ:

    ನ್ಯೂಜಿಲೆಂಡ್ 20 ಓವರ್ 134/8
    (ಡರಿಲ್ ಮಿಶೆಲ್ 27, ಡೆವೋನ್ ಕಾನ್ವೇ 27, ಕೇನ್ ವಿಲಿಯಮ್ಸನ್ 25, ಮಾರ್ಟಿಕ್ ಗಪ್ಟಿಲ್ 17 ರನ್- ಹ್ಯಾರಿಸ್ ರೌಫ್ 22/4)

    ಪಾಕಿಸ್ತಾನ 18.4 ಓವರ್ 135/5
    (ಮೊಹಮ್ಮದ್ ರಿಜ್ವಾನ್ 33, ಶೋಯಬ್ ಮಲಿಕ್ ಅಜೇಯ 26, ಅಸಿಫ್ ಅಲಿ ಅಜೇಯ 27 ರನ್- ಈಶ್ ಸೋಧಿ 29/2)
    Published by:Vijayasarthy SN
    First published: