ರಾವಲ್ಪಿಂಡಿ (ನ. 03): ಪಾಕಿಸ್ತಾನ ಪ್ರವಾಸದಲ್ಲಿರುವ ಜಿಂಬಾಬ್ವೆ ತಂಡ ಏಕದಿನ ಸರಣಿ ಆಡುತ್ತಿದೆ. ಮಂಗಳವಾರ ರಾವಲ್ಪಿಂಡಿಯಲ್ಲಿ ನಡೆದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲಿ ಬಲಿಷ್ಠ ಪಾಕ್ ವಿರುದ್ಧ ಜಿಂಬಾಬ್ವೆ ತಂಡ ಸೂಪರ್ ಓವರ್ನಲ್ಲಿ ರೋಚಕ ಜಯ ಸಾಧಿಸಿತು. ಈ ಮೂಲಕ ಜಿಂಬಾಬ್ವೆ ಅಂತಿಮ ಏಕದಿನ ಪಂದ್ಯ ಗೆದ್ದು ಬೀಗಿದರೆ, ಪಾಕ್ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ ಉತ್ತಮ ಆರಂಭ ಪಡೆದುಕೊಂಡಿಲ್ಲವಾದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ನೆರವಿನಿಂದ ಕಮ್ಬ್ಯಾಕ್ ಮಾಡಿತು. 22 ರನ್ಗೆ 3 ವಿಕೆಟ್ ಕಳೆದುಕೊಂಡಾಗ ಜೊತೆಯಾದ ವಿಕೆಟ್ ಕೀಪರ್ ಬ್ರೆಂಡನ್ ಟೇಲರ್ ಹಾಗೂ ಸಿಯಾನ್ ವಿಲಿಯಮ್ಸ್ ತಂಡಕ್ಕೆ ಆಸರೆಯಾಗಿ ನಿಂತು 84 ರನ್ಗಳ ಕಾಣಿಕೆ ನೀಡಿದರು. ಟೇಲರ್ 56 ರನ್ ಗಳಿಸಿ ಔಟ್ ಆದರು.
ಬಳಿಕ ವಿಲಿಯಮ್ಸ್ ಜೊತೆಯಾದ ಮಧೆವ್ರೆ(33) ಹಾಗೂ ರಾಜಾ(45) ಭರ್ಜರಿ ಜೊತೆಯಾಟ ಆಡಿದರು. ಅದರಲ್ಲೂ ವಿಲಿಯಮ್ಸ್ 135 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 118 ರನ್ ಗಳಿಸಿದರು. ಪರಿಣಾಮ ಜಿಂಬಾಬ್ವೆ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 278 ರನ್ ಕಲೆಹಾಕಿತು.
ಸವಾಲಿನ ಮೊತ್ತ ಬೆನ್ನಟ್ಟಿದ ಪಾಕ್ ಕೂಡ 100 ರನ್ಗೂ ಮೊದಲೇ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಆದರೆ, ಕ್ರೀಸ್ ಕಚ್ಚಿ ನಿಂತ ನಾಯಕ ಬಾಬರ್ ಅಜಾಂ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ಇವರಿಗೆ ಖುಷ್ದಿಲ್(33) ಹಾಗೂ ವಹಾಬ್ ರಿಜಾಜ್(52) ಸಾತ್ ನೀಡಿದರು.
ಅಂತಿಮ ಹಂತದವರೆಗೆ ಬ್ಯಾಟ್ ಬೀಸಿದ ಬಾಬರ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಆದರೆ, ವಿನ್ನಿಂಗ್ ಶಾಟ್ ಹೊಡೆಯುವ ತನಕ ಕ್ರೀಸ್ನಲ್ಲಿ ನಿಲ್ಲಲಿಲ್ಲ. 125 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಬಾರಿಸಿ 125 ರನ್ಗೆ 49ನೇ ಓವರ್ನ ಕೊನೆಯ ಎಸೆತದಲ್ಲಿ ಔಟ್ ಆದರು. ಪರಿಣಾಮ ಪಾಕ್ಗೆ ಕೊನೆಯ 6 ಎಸೆತಗಳಲ್ಲಿ ಗೆಲ್ಲಲು 13 ರನ್ಗಳು ಬೇಕಾಗಿತ್ತು. ಕೊನೆಯ ಒಂದು ಎಸೆತದಲ್ಲಿ 5 ರನ್ ಬೇಕಾಗಿತ್ತು. ಈ ಸಂದರ್ಭ ಮೊಹಮ್ಮದ್ ಮೂಸಾ ಚೆಂಡನ್ನು ಬೌಂಡರಿಗೆ ಅಟ್ಟಿದ ಪರಿಣಾಮ ಪಂದ್ಯ ಟೈ ಆಯಿತು.
ಪಾಕಿಸ್ತಾನ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿತು. ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರಬನಿ 5 ವಿಕೆಟ್ ಕಿತ್ತು ಮಿಂಚಿದರು.
ಸೂಪರ್ ಓವರ್:
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಕೇವಲ 2 ರನ್ಗೆ 2 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಜಿಂಬಾಬ್ವೆ ಮೊದಲ 3 ಎಸೆತಗಳಲ್ಲಿ ಗುರಿ ಮುಟ್ಟಿ ಸೂಪರ್ ಓವರ್ನಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ಒಂದು ಗೆಲುವು ಸಾಧಿಸಿದರೆ, ಪಾಕ್ 2 ಜಯದೊಂದಿಗೆ ಸರಣಿ ವಶಪಡಿಸಿಕೊಂಡಿತು.
Published by:Vinay Bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ