ಭಾರತವನ್ನು ಪಾಕ್ ಸೋಲಿಸಿದರೆ ಎಷ್ಟು ಬೇಕಾದರೂ ಹಣ; ಬ್ಲ್ಯಾಂಕ್ ಚೆಕ್ ಕೊಟ್ಟ ಉದ್ಯಮಿ

2021 T20 World Cup- ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪಾಕಿಸ್ತಾನ ಕ್ರಿಕೆಟ್​ಗೆ ಅಲ್ಲಿನ ಉದ್ಯಮಿಯೊಬ್ಬರು ಧನಸಹಾಯಕ್ಕೆ ಮುಂದಾಗಿದ್ಧಾರೆ. ಭಾರತವನ್ನು ಪಾಕ್ ಸೋಲಿಸಿದರೆ ಬ್ಲ್ಯಾಂಕ್ ಚೆಕ್ ಬರೆದುಕೊಡಲು ಮುಂದಾಗಿದ್ದಾರಂತೆ.

ರಮೀಜ್ ರಾಜಾ

ರಮೀಜ್ ರಾಜಾ

 • Share this:
  ಇಸ್ಲಾಮಾಬಾದ್, ಅ. 07: ಯಾವುದೇ ವಿಶ್ವಕಪ್​ನಲ್ಲಿ ಭಾರತವನ್ನು ಪಾಕಿಸ್ತಾನಕ್ಕೆ ಸೋಲಿಸಲು ಸಾಧ್ಯವಾಗಿಲ್ಲ. ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಚೊಚ್ಚಲ ಗೆಲುವಿಗೆ ಹಪಹಪಿಸುತ್ತಿರುವ ಪಾಕಿಸ್ತಾನಕ್ಕೆ ಹುರಿದುಂಬಿಸಲು ಅಲ್ಲಿನ ಉದ್ಯಮಿಯೊಬ್ಬರು ಹಣದ ಪ್ರಲೋಬನೆ ಒಡ್ಡಿದ್ದಾರೆ. ಭಾರತ ತಂಡವನ್ನು ಪಾಕಿಸ್ತಾನೀಯರು ಸೋಲಿಸಿದರೆ ಬ್ಲ್ಯಾಂಕ್ ಚೆಕ್ ಬರೆದುಕೊಡುವುದಾಗಿ ಅವರು ಹೇಳಿದ್ದಾರಂತೆ. ಈ ವಿಚಾರವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಛೇರ್ಮನ್ ರಮೀಜ್ ರಾಜಾ ಅವರೇ ಬಹಿರಂಗಪಡಿಸಿದ್ಧಾರೆ.

  ಟಿ20 ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆದ್ದರೆ ಬ್ಲ್ಯಾಂಕ್ ಚೆಕ್ ಕೊಡಲು ಉದ್ಯಮಿಯೊಬ್ಬರು ಸಿದ್ಧರಾಗಿದ್ದಾರೆ ಎಂದು ರಮೀಜ್ ರಾಜಾ ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಮಿತಿಯೊಂದರ ಸಭೆಯಲ್ಲಿ ರಮೀಜ್ ರಾಜಾ ಈ ವಿಚಾರವನ್ನು ತಿಳಿಸಿರುವುದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.

  ಐಸಿಸಿಯ ವಿವಿಧ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ 13 ಬಾರಿ ಗೆಲುವು ಸಾಧಿಸಿದೆ. ಆದರೆ, ಪಾಕಿಸ್ತಾನಕ್ಕೆ ಒಂದೂ ಜಯ ದಕ್ಕಿಲ್ಲ. 50 ಓವರ್​ಗಳ ವಿಶ್ವಕಪ್​ಗಳಲ್ಲಿ ಭಾರತ ಏಳು ಬಾರಿ ಗೆದ್ದಿದೆ. ಟಿ20 ವಿಶ್ವಕಪ್​ಗಳಲ್ಲಿ ಪಾಕ್ ವಿರುದ್ಧ ಆಡಿರುವ ಎಲ್ಲಾ ಐದು ಪಂದ್ಯಗಳನ್ನೂ ಭಾರತವೇ ಜಯಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿರಾಷ್ಟ್ರ ಕ್ರಿಕೆಟ್ ಸರಣಿ ನಡೆದು ಹಲವು ವರ್ಷಗಳೇ ಆಗಿವೆ. ಈ ಎರಡು ತಂಡಗಳು ಸಂಧಿಸುವುದು ವಿಶ್ವಕಪ್ ಇತ್ಯಾದಿ ಯಾವುದಾದರೂ ಬಹುತಂಡಗಳ ಟೂರ್ನಿಗಳಲ್ಲಿ ಮಾತ್ರ. ಹೀಗಾಗಿ, ಈ ಎರಡು ದೇಶಗಳ ನಡುವಿನ ಹಣಾಹಣಿ ಸದಾ ಕುತೂಹಲ ಮೂಡಿಸುತ್ತವೆ. ಈಗ ಈ ಟಿ20 ವಿಶ್ವಕಪ್​ನಲ್ಲಿ ಸೂಪರ್-12 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ. ಅಕ್ಟೋಬರ್ 24ರಂದು ನಡೆಯುವ ಈ ಪಂದ್ಯದ ಟಿಕೆಟ್​ಗಳು ಎರಡೇ ದಿನಕ್ಕೆ ಸೋಲ್ಡ್ ಔಟ್ ಆಗಿವೆ.

  ಪಾಕಿಸ್ತಾನ ಈ ಬಾರಿ ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ. ವಿಶ್ವಕಪ್​ಗೆ ಮುಂಚಿನ ಕೆಲ ಟೂರ್ನಿಗಳಲ್ಲಿ ಅದು ಉತ್ತಮ ಪ್ರದರ್ಶನ ನೀಡಿದೆ. ಅದರ ಬೌಲರ್ ದಾಳಿ ಅತ್ಯುತ್ತಮ ಎಂದ ಅಭಿಪ್ರಾಯ ಬಹಳ ಕೇಳಿಬರುತ್ತಿದೆ. ಆದರೆ, ತಂಡದ ಆಯ್ಕೆ ಬಗ್ಗೆಯೂ ಸಾಕಷ್ಟು ಅಸಮಾಧಾನಗಳು ಇವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಅವರಿಗೆ ಗುರುತರ ಜವಾಬ್ದಾರಿ ಇದೆ.

  ಇದನ್ನೂ ಓದಿ: T20 World Cup: ವಿಶ್ವಕಪ್​ಗೆ ಅಂಪೈರ್, ರೆಫರಿಗಳ ಘೋಷಣೆ; ಶ್ರೀನಾಥ್ ಸೇರಿ ಇಬ್ಬರು ಭಾರತೀಯರು

  ಭಾರತದ ಫಂಡಿಂಗ್ ಮೇಲೆ ನಿಂತಿದೆ ಪಾಕಿಸ್ತಾನ:

  ಇದೇ ವೇಳೆ, ರಮೀಜ್ ರಾಜಾ ಅವರು ಪಾಕ್ ಕ್ರಿಕೆಟ್ ಮಂಡಳಿಯ ದುರವಸ್ಥೆ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಕ್ರಿಕೆಟ್ ಅನ್ನು ಆರ್ಥಿಕವಾಗಿ ಬಲಪಡಿಸುವ ಸಂಕಲ್ಪ ತೊಟ್ಟಿದ್ಧಾರೆ. ಪಾಕಿಸ್ತಾನದ ಕ್ರಿಕೆಟ್​ನ ಧನಬಲ ಚೆನ್ನಾಗಿದ್ದಿದ್ದರೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ತಮ್ಮ ಪಾಕ್ ಪ್ರವಾಸವನ್ನು ರದ್ದು ಮಾಡುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಶೇ. 50ರಷ್ಟು ಹಣಕಾಸು ನೆರವು ಐಸಿಸಿಯಿಂದಲೇ ಬರುತ್ತದೆ. ಐಸಿಸಿಗೆ ಶೇ. 90ರಷ್ಟು ಫಂಡಿಂಗ್ ಭಾರತದಿಂದಲೇ ಬರುತ್ತದೆ. ಒಂದು ವೇಳೆ ಐಸಿಸಿಗೆ ಭಾರತ ಹಣ ನೀಡುವುದು ನಿಂತರೆ ಪಾಕ್ ಕ್ರಿಕೆಟ್ ಮಂಡಳಿಯ ಸ್ಥಿತಿ ಚಿಂತಾಜನಕವಾಗುತ್ತದೆ” ಎಂದು ರಮೀಜ್ ರಾಜಾ ಹೇಳಿದ್ಧಾರೆ.

  ಪಾಕಿಸ್ತಾನ್ ಕ್ರಿಕೆಟ್ ಅನ್ನು ಬಲಾಢ್ಯಗೊಳಿಸಲು ನಾನು ಬದ್ಧನಾಗಿದ್ದೇನೆ. ನಮ್ಮ ಕ್ರಿಕೆಟ್ ಆರ್ಥಿಕತೆ ಪ್ರಬಲವಾಗಿದ್ದರೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್​ನಂಥ ತಂಡಗಳಿಂದ ನಮಗೆ ಅವಮಾನ ಆಗುತ್ತಿರಲಿಲ್ಲ. ಅತ್ಯುತ್ತಮ ಕ್ರಿಕೆಟ್ ತಂಡ ರೂಪಿಸುವುದು ಮತ್ತು ಅತ್ಯುತ್ತಮ ಕ್ರಿಕೆಟ್ ಆರ್ಥಿಕತೆ ಬೆಳೆಸುವುದು ಎರಡೂ ದೊಡ್ಡ ಸವಾಲುಗಳೇ ಎಂದು ಮಾಜಿ ಕ್ರಿಕೆಟಿಗರೂ ಆದ ಅವರ ತಿಳಿಸಿದ್ಧಾರೆ.
  Published by:Vijayasarthy SN
  First published: