ಒಂದೆಡೆ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಅನ್ನು ಎದುರು ನೋಡುತ್ತಿದ್ದರೆ, ಮತ್ತೊಂದೆಡೆ ಕ್ರಿಕೆಟ್ ಅಂಗಳದಿಂದ ಖ್ಯಾತ ಕ್ರಿಕೆಟಿಗನೊಬ್ಬ ಗುಡ್ ಬೈ ಹೇಳಲು ಹೊರಟಿದ್ದಾರೆ ಎಂಬ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಐಪಿಎಲ್ನ ಉಳಿದ ಪಂದ್ಯಗಳು ಸೆಪ್ಟೆಂಬರ್ - ಅಕ್ಟೋಬರ್ ನಡುವೆ ಯುಎಇನಲ್ಲಿ ನಡೆಯಲಿದೆ. ಉಳಿದ 31 ಪಂದ್ಯಗಳನ್ನು ಮೂರು ಸ್ಟೇಡಿಯಂನಲ್ಲಿ ಆಯೋಜಿಸಲು ಸಿದ್ಧತೆಗಳು ಶುರುವಾಗಿದೆ. ಆದರೆ ಅತ್ತ ಈ ಮೂರು ಸ್ಟೇಡಿಯಂಗಳಲ್ಲಿ ಒಂದರಿಂದ ಕ್ರಿಕೆಟ್ಗೆ ಗುಡ್ ಬೈ ಹೇಳಲು ಖ್ಯಾತ ಕ್ರಿಕೆಟಿಗರೊಬ್ಬರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ದಕ್ಷಿಣ ಆಫ್ರಿಕಾ ತಂಡದ ಪರ್ಫಾರ್ಮೆನ್ಸ್ ಅನಾಲಿಸ್ಟ್ ಪ್ರಸನ್ನ ಅವರು.
ಕಳೆದ 2 ದಶಕಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿದ್ದ ಶ್ರೇಷ್ಠ ಬ್ಯಾಟ್ಸ್ಮನ್ ಒಬ್ಬರು ಯುಎಇಯಲ್ಲಿ ನಡೆಯಲಿರುವ ಐಪಿಎಲ್ನ ಉಳಿದ ಪಂದ್ಯದ ವೇಳೆ ಕೊನೆಯ ಬಾರಿ ಪ್ಯಾಡ್ ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅಂದರೆ ಶ್ರೇಷ್ಠ ಬ್ಯಾಟ್ಸ್ಮನ್ ಒಬ್ಬರು ಕೊನೆಯ ಬಾರಿ ಐಪಿಎಲ್ ಆಡಲಿದ್ದಾರೆ. ಆದರೆ ಅದು ಯಾರು ಎಂಬುದನ್ನು ಪ್ರಸನ್ನ ಅವರು ಬಹಿರಂಗಪಡಿಸಿಲ್ಲ. ಹೀಗಾಗಿ ಐಪಿಎಲ್ ಮೂಲಕ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳುವ ಆಟಗಾರ ಯಾರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಪ್ರಶ್ನೆಗಳಿಗೆ ಸದ್ಯ ಮೂವರ ಹೆಸರು ಉತ್ತರವಾಗಿ ಸಿಗುತ್ತಿವೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವೆ ಟಿ20 ಸರಣಿ ನಡೆದಿದೆ. ಹೀಗಾಗಿ ಪ್ರಸನ್ನ ಅವರು ಕೂಡ ತಂಡದ ಸಂಪರ್ಕದಲ್ಲಿದ್ದರು. ಈ ವೇಳೆ ತಂಡ ಅಥವಾ ಎದುರಾಳಿ ತಂಡದಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಯಾರು ಎಂದು ನೋಡುವುದಾದರೆ ಕ್ರಿಸ್ ಗೇಲ್ ಹೆಸರು ಕಾಣ ಸಿಗುತ್ತದೆ. ಹೌದು, ಗೇಲ್ 2 ದಶಕಗಳ ಕಾಲ ಕ್ರಿಕೆಟ್ ಆಡಿದ್ದು, ಇದೀಗ ಅವರ ವಯಸ್ಸು ಕೂಡ 40ನ್ನು ದಾಟಿದೆ. ಹೀಗಾಗಿ ಗೇಲ್ ಅವರು ಯುಎಇನಲ್ಲಿ ಅಂತಿಮ ಪಂದ್ಯವಾಡಲಿದ್ದೇನೆ ಎಂಬ ಮಾಹಿತಿಯನ್ನು ಪ್ರಸನ್ನ ಅವರಿಗೆ ಟಿ20 ಸರಣಿ ವೇಳೆ ನೀಡಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಮತ್ತೊಂದೆಡೆ ಪ್ರಸನ್ನ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರ್ಫಾರ್ಮೆನ್ಸ್ ಅನಾಲಿಸ್ಟ್ ಆಗಿರುವ ಕಾರಣ ಈ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಹೆಸರು ಕೂಡ ಕೇಳಿ ಬರುತ್ತಿವೆ. ಎಬಿಡಿ ಕೂಡ 2 ದಶಕಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಧೂಳೆಬ್ಭಿಸಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿ ಐಪಿಎಲ್ನಲ್ಲಿ ಮುಂದುವರೆಯುತ್ತಿದ್ದಾರೆ. ಇದೀಗ ಎಬಿಡಿಗೆ 37 ವರ್ಷ. ಹೀಗಾಗಿ ಸಂಪೂರ್ಣವಾಗಿ ಕ್ರಿಕೆಟ್ಗೆ ವಿದಾಯ ಹೇಳಲು ಎಬಿಡಿ ಮುಂದಾಗಿದ್ದಾರಾ ಎಂಬ ಅನುಮಾನಗಳು ಮೂಡಿವೆ.
ಇನ್ನು ಈ ಪಟ್ಟಿಯಲ್ಲಿರುವ ಮತ್ತೋರ್ವ ಶ್ರೇಷ್ಠ ಕ್ರಿಕೆಟಿಗನೆಂದರೆ ಮಹೇಂದ್ರ ಸಿಂಗ್ ಧೋನಿ. ಈ ಹಿಂದೆಯೇ ಧೋನಿ 2021 ರ ಬಳಿಕ ಐಪಿಎಲ್ಗೆ ವಿದಾಯ ಹೇಳುವುದಾಗಿ ತಿಳಿಸಿದ್ದರು. ಇನ್ನು ಪ್ರಸನ್ನ ಅವರೊಂದಿಗೆ ಧೋನಿ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿ ಮಾಹಿ ಕಡೆಯಿಂದ ನಿವೃತ್ತಿ ವಿಚಾರ ಪ್ರಸನ್ನ ಅವರಿಗೆ ಲಭಿಸಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಒಟ್ಟಿನಲ್ಲಿ ಪ್ರಸನ್ನ ಅವರು ಮಾಡಿರುವ ಒಂದು ಟ್ವೀಟ್ನಿಂದ ಇದೀಗ ವಿದಾಯ ಹೇಳಲಿರುವ ಒಬ್ಬ ಶ್ರೇಷ್ಠ ಕ್ರಿಕೆಟಿಗ ಯಾರಾಗಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆ ಐಪಿಎಲ್ ಪ್ರೇಮಿಗಳಲ್ಲಿದೆ.
(
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ