ಮ್ಯಾಂಚೆಸ್ಟರ್ (ಸೆಪ್ಟೆಂಬರ್ 09); ಇಂಗ್ಲೆಂಡ್ ಕ್ರಿಕೆಟ್ (Test Tour of England) ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಕೋವಿಡ್ ಕಂಟಕ ಕಾಡುತ್ತಿದೆ. ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ (Ravi Shastri) ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದ ಬೆನ್ನಿಗೆ ಇದೀಗ ಮತ್ತೋರ್ವ ಸಹಾಯಕ ಸಿಬ್ಬಂದಿಗೂ ಸಹ ಸೊಂಕು (CoronaVirus) ಧೃಡವಾಗಿದೆ. ಹೀಗಾಗಿ ಅವರನ್ನೂ ಸಹ ಐಸೋಲೇಶನ್ ಮಾಡಲಾಗಿದ್ದು, ಭಾರತ ತಂಡದ (Team India) ಇಂದಿನ ಅಭ್ಯಾಸವನ್ನೂ ಸಹ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಬುಧವಾರ ಸಂಜೆ ಕೊನೆಯ ಸುತ್ತಿನ ಪರೀಕ್ಷೆಯ ನಂತರ ಸಹಾಯಕ ಸಿಬ್ಬಂದಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಭಾರತೀಯ ತಂಡದ ಎಲ್ಲಾ ಸದಸ್ಯರಿಗೂ ಮುಂದಿನ ಸೂಚನೆ ಬರುವವರೆಗೂ ತಮ್ಮ ಹೋಟೆಲ್ ಕೊಠಡಿ ಗಳಲ್ಲಿಯೇ ಉಳಿಯುವಂತೆ ಸೂಚನೆ ನೀಡಲಾಗಿದೆ. ಆಂಗ್ಲರ ವಿರುದ್ಧಕೊನೆಯ ಟೆಸ್ಟ್ ಪಂದ್ಯದಕ್ಕೆ ಸಜ್ಜಾಗುತ್ತಿದ್ದ ಭಾರತ ತಂಡಕ್ಕೆ ಈ ಸುದ್ದ ಭಾರೀ ದೊಡ್ಡ ಆಘಾತ ನೀಡಿದೆ ಎನ್ನಲಾಗಿದೆ.
ಕೊರೋನಾ ಸೋಂಕಿಗೆ ತುತ್ತಾಗಿದ್ದ ಮುಖ್ಯ ಕೋಚ್ ರವಿಶಾಸ್ತ್ರಿ ಅವರನ್ನು ಈಗಾಗಲೇ ಐಸೋಲೇಶನ್ಗೆ ಒಳಪಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರವಿಶಾಸ್ತ್ರಿ ಜೊತೆ ನಿಕಟ ಸಂಪರ್ಕದಲ್ಲಿದ್ದ ಸಪೋರ್ಟ್ ಸ್ಟಾಫ್ನ ಮೂವರನ್ನೂ ಐಸೋಲೇಶನ್ಗೆ ಕಳುಹಿಸಲಾಗಿದೆ. ಇವರಲ್ಲಿ ಬೌಲಿಂಗ್ ಕೋಚ್ ಆಗಿರುವ ಭರತ್ ಅರುಣ್ ಕೂಡ ಇದ್ದಾರೆ. ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಮತ್ತು ಪ್ರಧಾನ ಫಿಸಿಯೋ ಥೆರಪಿಸ್ಟ್ ನಿತಿನ್ ಪಟೇಲ್ ಅವರು ಕೂಡ ಐಸೋಲೇಶನ್ನಲ್ಲಿ ಇದ್ದಾರೆ. ಬಿಸಿಸಿಐ ಈ ವಿಚಾರವನ್ನು ದೃಢಪಡಿಸಿದೆ.
ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ನಲ್ಲಿ ರವಿಶಾಸ್ತ್ರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಭಾರತ ತಂಡದ ಎಲ್ಲಾ ಸದಸ್ಯರಿಗೆ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಲಾಗಿದೆ. ಆ ವರದಿಗಳು ಬರುವವರೆಗೂ ರವಿಶಾಸ್ತ್ರಿ ಹಾಗೂ ಇತರ ಮೂವರು ಕೂಡ ಐಸೋಲೇಶನ್ನಲ್ಲಿ ಇರಲಿದ್ದಾರೆ. ಭರತ್ ಅರುಣ್ ಅವರಿಗೆ ಸೋಂಕು ದೃಢಪಡದಿದ್ದರೂ ಐಸೋಲೇಶನ್ನಲ್ಲಿ ಇರಬೇಕಾದ ಸಂದರ್ಭ ಬಂದದ್ದು ಇದು ಎರಡನೇ ಬಾರಿ.
ಸದ್ಯ ಯಾವ ಆಟಗಾರರಿಗೂ ರ್ಯಾಪಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದಿಲ್ಲ. ಆರ್ಟಿ-ಪಿಸಿಆರ್ ಪರೀಕ್ಷೆ ಮುನ್ನ ಎರಡು ಬಾರಿ ನಡೆಸಲಾದ ರ್ಯಾಪಿಡ್ ಟೆಸ್ಟ್ನಲ್ಲಿ ಬೇರೆಲ್ಲಾ ಆಟಗಾರರು ಮತ್ತು ಸಿಬ್ಬಂದಿಗೆ ನೆಗಟಿವ್ ರಿಪೋರ್ಟ್ ಬಂದಿದೆ. ಈಗ ರವಿಶಾಸ್ತ್ರಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಸ್ಯಾಂಪಲ್ ಪಡೆದು ಆರ್ಟಿ ಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿದೆ.
ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯ ಮುಗಿದ ಬಳಿಕ ಕಳೆದ ಮಂಗಳವಾರದಂದು ಭಾರತ ಕ್ರಿಕೆಟ್ ತಂಡ ಮ್ಯಾಂಚೆಸ್ಟರ್ಗೆ ಆಗಮಿಸಿತ್ತು. ಒಂದು ವೇಳೆ ಈಗ ಐಸೋಲೇಶನ್ನಲ್ಲಿರುವ ರವಿಶಾಸ್ತ್ರಿ ಹಾಗೂ ನಾಲ್ವರಿಗೆ ಆರ್ಟಿ ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟರೆ 10 ದಿನ ರೂಮ್ ಐಸೋಲೇಶನ್ನಲ್ಲಿ ಇರಬೇಕಾಗುತ್ತದೆ. ಎರಡು ಬಾರಿ ಆರ್ ಟಿ ಪಿಸಿಆರ್ ಪರೀಕ್ಷೆಗಳಲ್ಲಿ ನೆಗಟಿವ್ ರಿಪೋರ್ಟ್ ಬರುವವರೆಗೂ ಅವರು ಐಸೋಲೇಶನ್ನಲ್ಲಿ ಇರಬೇಕಾಗುತ್ತದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ