ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಆಟದ ಸೇರ್ಪಡೆಯ ಕನಸು ನನಸಾಗುವ ಸಾಧ್ಯತೆ ತೋರುತ್ತಿದೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಗಂಭೀರ ಹೆಜ್ಜೆಗಳನ್ನ ಇಡುತ್ತಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಕೂಡ ಕ್ರಿಕೆಟ್ ಸ್ವಾಗತಕ್ಕೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡ ವೇಗದಲ್ಲಿ ಕಾರ್ಯಗತವಾದಲ್ಲಿ ಬ್ರಿಸ್ಬೇನ್ನಲ್ಲಿ 2023ರಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಆಟವನ್ನೂ ವೀಕ್ಷಿಸಲು ಸಾಧ್ಯವಾಗಬಹುದು. 2023ರಲ್ಲಿ ಆಗದಿದ್ದರೆ 2028ರಲ್ಲಿ ಅಮೆರಿಕದ ಲಾಸ್ ಏಂಜಲಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಾದರೂ ಕ್ರಿಕೆಟ್ ಭಾಗ್ಯ ಸಿಗುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದರೆ, ಒಲಿಂಪಿಕ್ಸ್ನಲ್ಲಿ ಯಾವ ಮಾದರಿಯ ಕ್ರಿಕೆಟ್ ಆಡಿಸಬೇಕು ಎಂಬುದು ಇನ್ನೂ ಇತ್ಯರ್ಥವಾಗದ ಅಂಶವಾಗಿದೆ. ಐಸಿಸಿ ಮೂಲಗಳ ಪ್ರಕಾರ ಟಿ10 ಮಾದರಿ ಕ್ರಿಕೆಟ್ ಅನ್ನು ಒಲಿಂಪಿಕ್ಸ್ನಲ್ಲಿ ಬಳಸುವ ಸಾಧ್ಯತೆ ದಟ್ಟವಾಗಿದೆ.
ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲಿ ಟಿ10 ಕ್ರಿಕೆಟ್ಗೆ ಇನ್ನೂ ಮಾನ್ಯತೆ ಇಲ್ಲ. ಜಾಗತಿಕವಾಗಿ ಅಲ್ಲೊಂದು ಇಲ್ಲೊಂದು ಟಿ10 ಕ್ರಿಕೆಟ್ ಟೂರ್ನಿಗಳು ನಡೆಯುತ್ತವೆ. ಸದ್ಯ ಟೆಸ್ಟ್ ಕ್ರಿಕೆಟ್, ಓಡಿಐ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್ ಹೀಗೆ ಮೂರು ಮಾದರಿ ಕ್ರಿಕೆಟ್ಗೆ ಅಧಿಕೃತ ಮಾನ್ಯತೆ ಇದೆ. ಆದರೆ, ಒಲಿಂಪಿಕ್ಸ್ನಲ್ಲಿ ಒಂದು ಕ್ರೀಡೆಯನ್ನ ಸೇರಿಸಬೇಕಾದರೆ ಅದಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಇರುವ ಮಾದರಿಯ ಕೂಟಗಳು ನಡೆಯಬೇಕಾಗುತ್ತದೆ. ಹೀಗಾಗಿ, ಟಿ10 ಕ್ರಿಕೆಟ್ ಅನ್ನು ಅಧಿಕೃತ ಎಂದು ಮಾನ್ಯ ಮಾಡಿ ಅದಕ್ಕೆ ಪ್ರತ್ಯೇಕ ಟೂರ್ನಮೆಂಟ್ಗಳನ್ನ ಆಯೋಜಿಸಬೇಕಾಗುತ್ತದೆ. ಆಗ ಟಿ20 ಕ್ರಿಕೆಟ್ಗೆ ಇರುವ ಪ್ರಾಶಸ್ತ್ಯ ಕಡಿಮೆ ಆಗಬಹುದು ಎಂಬ ಆತಂಕ ಇದೆ.
ಇದನ್ನೂ ಓದಿ: MS Dhoni: ಹೊಸ ವಿಶ್ವ ದಾಖಲೆ ಬರೆದ ಮಹೇಂದ್ರ ಸಿಂಗ್ ಧೋನಿ..!
ಇನ್ನು, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಟದ ಸೇರ್ಪಡೆಗೆ ಇಷ್ಟು ವರ್ಷ ವಿಳಂಬವಾಗಲು ಕಾರಣ ಬಿಸಿಸಿಐ ಮತ್ತು ಎಸಿಬಿ ಸಂಸ್ಥೆಗಳು. ಬಹಳ ಶ್ರೀಮಂತ ಹಾಗೂ ಪ್ರಭಾವಿ ಎನಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಒಪ್ಪಿಗೆ ಇಲ್ಲದೇ ಐಸಿಸಿ ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ ಎಂಬುದು ಅಘೋಷಿತ ವಿಚಾರ. ಒಲಿಂಪಿಕ್ಸ್ಗೆ ಕ್ರಿಕೆಟ್ ಕ್ರೀಡೆಯನ್ನ ಸೇರಿಸುವ ಔಚಿತ್ಯ ಏನು ಎಂಬುದು ಬಿಸಿಸಿಐನ ಪ್ರಶ್ನೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯದ್ದೂ ಇದೇ ಅಭಿಪ್ರಾಯ. ಬಿಸಿಸಿಐನ ಭಯ ಏನೆಂದರೆ ಕ್ರಿಕೆಟ್ ಏನಾದರೂ ಒಲಿಂಪಿಕ್ಸ್ಗೆ ಸೇರ್ಪಡೆಯಾದರೆ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಸಿ) ಜೊತೆ ಕ್ರಿಕೆಟ್ ಮೇಲಿನ ಅಧಿಕಾರ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂಬುದು. ಅಂದರೆ ಕ್ರಿಕೆಟ್ ಮೇಲೆ ತನಗಿರುವ ಪರಮಾಧಿಕಾರ ಕುಂಠಿತಗೊಳ್ಳಬಹುದು ಎಂಬುದು ಬಿಸಿಸಿಐ ಆತಂಕ.
ಹಾಗೇನೂ ಆಗೋದಿಲ್ಲ ಎಂದು ಐಸಿಸಿ ಸಮಾಧಾನ ಮಾಡಿದೆ. ಇಸಿಬಿ ಕೂಡ ಹೇಗೋ ಒಪ್ಪಿಕೊಂಡಿದೆ. ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆ ಮಾಡಲು ಇಸಿಬಿ ಮತ್ತು ಬಿಸಿಸಿಐ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಆ ಪ್ರಕ್ರಿಯೆ ಇನ್ಮುಂದೆ ಸುಗಮವಾಗಿ ನೆರವೇರುವ ಸಾಧ್ಯತೆಯೇ ಹೆಚ್ಚು. ಆದರೆ, ಯಾವ ಮಾದರಿಯ ಕ್ರಿಕೆಟ್ ಅನ್ನು ಒಲಿಂಪಿಕ್ಸ್ನಲ್ಲಿ ಆಡಿಸಬೇಕು ಎಂಬುದಷ್ಟೇ ನಿರ್ಧಾರವಾಗಬೇಕು. ಟಿ10 ಮಾದರಿ ಕ್ರಿಕೆಟ್ ಆಡಿಸಿದರೆ ಅದಕ್ಕೆ ಪೂರಕವಾಗಿ ಅಂತರರಾಷ್ಟ್ರೀಯ ಟಿ10 ಕ್ರಿಕೆಟ್ ಟೂರ್ನಿಗಳನ್ನ ಆಯೋಜಿಸಬೇಕಾಗುತ್ತದೆ. ಆ ಟೂರ್ನಿಗಳ ಮೂಲಕ ದೇಶಗಳು ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸುವ ಅವಕಾಶ ಒದಗಿಸಬೇಕಾಗುತ್ತದೆ. ಹಾಗಾದಲ್ಲಿ ಟಿ20ಗಿಂತ ಟಿ10 ಕ್ರಿಕೆಟ್ ಹೆಚ್ಚು ಮಾನ್ಯತೆ ಪಡೆದು ಜನಪ್ರಿಯತೆಯನ್ನೂ ಗಳಿಸಬಹುದು. ಮೇಲಾಗಿ ಟಿ10 ಕ್ರಿಕೆಟ್ನಲ್ಲಿ ಒಂದು ಆಟ ಕೇವಲ ಒಂದೂವರೆ ತಾಸು, ಅಂದರೆ 90 ನಿಮಿಷದಲ್ಲಿ ಮುಗಿಯುತ್ತದೆ.
ಇದನ್ನೂ ಓದಿ: Andre Russel - ಅಂಡ್ರೆ ರಸೆಲ್ ಯಾಕೆ ಆರ್ಸಿಬಿ ಬ್ಯಾಟುಗಾರನ ರನೌಟ್ ಮಾಡಲಿಲ್ಲ? ಕ್ರಿಕೆಟ್ ಪ್ರಿಯರಿಗೆ ಶಾಕ್
ಒಂದು ವೇಳೆ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಿದ್ದೇ ಆದಲ್ಲಿ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದಂಥ ದೇಶಗಳು ಚಿನ್ನದ ಪದಕ ಗೆಲ್ಲುವ ಕನಸು ಕಾಣಲು ಸಾಧ್ಯವಾಗುತ್ತದೆ.
ಇನ್ನು, 1998ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಆಡಿಸಲಾಗಿತ್ತು. 2010 ಮತ್ತು 2014ರ ಏಷ್ಯನ್ ಗೇಮ್ಸ್ನಲ್ಲೂ ಕ್ರಿಕೆಟ್ ಇತ್ತು. 2022ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಇರಲಿದೆ. ಈ ಕ್ರೀಡಾಕೂಟದಲ್ಲಿ ಟಿ20 ಮಾದರಿ ಕ್ರಿಕೆಟ್ ಆಡಿಸಲಾಗುತ್ತಿದೆ. ಹೀಗಾಗಿ, ಒಲಿಂಪಿಕ್ಸ್ಗೆ ಯಾವ ಮಾದರಿ ಕ್ರಿಕೆಟ್ ಆಡಿಸುತ್ತಾರೆಂಬುದು ಸದ್ಯದ ಕುತೂಹಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ