HOME » NEWS » Sports » CRICKET NZ VS AUSTRALIA 2ND T20 GUPTILL AND NEESHAM SHOW HELP KIWIS EKE OUT WIN ZP

Nz vs Aus: ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್​ಗೆ ರೋಚಕ ಜಯ: RCB ಆಟಗಾರರು ಮತ್ತೆ ವಿಫಲ..!

ಈ ಪಂದ್ಯದಲ್ಲೂ ಆರ್​ಸಿಬಿ ತಂಡವನ್ನು ಪ್ರತಿನಿಧಿಸಲಿರುವ 6 ಆಟಗಾರರು ಕಣಕ್ಕಿಳಿದಿದ್ದರು. ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಆಡಿದ್ದ ಜೋಶ್ ಫಿಲಿಪ್, ಗ್ಲೆನ್ ಮ್ಯಾಕ್ಸವೆಲ್, ಆ್ಯಡಂ ಝಂಪಾ, ಕೇನ್ ರಿಚರ್ಡ್ಸನ್ ಹಾಗೂ ಆಲ್​ರೌಂಡರ್ ಡೇನಿಯಲ್ ಸ್ಯಾಮ್ಸ್​ 2ನೇ ಮ್ಯಾಚ್​ನಲ್ಲೂ ಸ್ಥಾನ ಪಡೆದಿದ್ದರು.

news18-kannada
Updated:February 25, 2021, 8:47 PM IST
Nz vs Aus: ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್​ಗೆ ರೋಚಕ ಜಯ: RCB ಆಟಗಾರರು ಮತ್ತೆ ವಿಫಲ..!
New Zealand
  • Share this:
ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟಿ20 ಸರಣಿಯ 2ನೇ ಪಂದ್ಯದಲ್ಲೂ ಕೇನ್ ವಿಲಿಯಮ್ಸನ್ ಪಡೆ ಜಯ ಸಾಧಿಸಿದೆ. ಇದರೊಂದಿಗೆ ಮತ್ತೆ ಆರ್​ಸಿಬಿ ಆಟಗಾರರ ನೀರಸ ಪ್ರದರ್ಶನ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಲೆಕ್ಕಚಾರಗಳನ್ನು ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ತಲೆಕೆಳಗಾಗಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಗಪ್ಟಿಲ್ ಸಿಕ್ಸ್-ಫೋರ್​ಗಳ ಸುರಿಮಳೆ ಸುರಿಸಿದರು.

ಪರಿಣಾಮ 10 ಓವರ್ ಆಗುವಷ್ಟರಲ್ಲೇ ನ್ಯೂಜಿಲೆಂಡ್ ಮೊತ್ತ 100ರ ಗಡಿದಾಟಿತು. ಅಲ್ಲದೆ ಆಸೀಸ್ ಬೌಲರುಗಳನ್ನು ಚೆಂಡಾಡಿದ ಗಪ್ಟಿಲ್ 8 ಭರ್ಜರಿ ಸಿಕ್ಸರ್​ ಹಾಗೂ 6 ಬೌಂಡರಿಗಳೊಂದಿಗೆ 50 ಎಸೆತಗಳಲ್ಲಿ 97 ರನ್​ ಚಚ್ಚಿದರು. ಸಿಕ್ಸರ್​ ಸಿಡಿಸಿ ಶತಕ ಪೂರೈಸಿರುವ ಇರಾದೆಯಲ್ಲಿದ್ದ ಗಪ್ಟಿಲ್ ಬೌಂಡರಿ ಲೈನ್​ನಲ್ಲಿ ಸ್ಟೋಯ್ನಿಸ್ ಹಿಡಿದ ಕ್ಯಾಚ್​ಗೆ ಬಲಿಯಾಗಬೇಕಾಯಿತು.

ಇತ್ತ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕೇನ್ ವಿಲಿಯಮ್ಸನ್ ಸಹ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 35 ಎಸೆತಗಳಲ್ಲಿ 53 ರನ್ ಬಾರಿಸಿ ವಿಲಿಯಮ್ಸನ್ ಝಂಪಾಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಆಲ್​ರೌಂಡರ್ ಜಿಮ್ಮಿ ನೀಶಮ್ ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದರು. ಕೇವಲ 16 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ 45 ರನ್​ ಬಾರಿಸಿದರು. ಪರಿಣಾಮ ನ್ಯೂಜಿಲೆಂಡ್ ಮೊತ್ತ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 219ಕ್ಕೆ ಬಂದು ನಿಂತಿತು.

ಈ ಬೃಹತ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರಾದ ಆರೋನ್ ಫಿಂಚ್ ಹಾಗೂ ಮಾಥ್ಯೂ ವೇಡ್ 3 ಓವರ್​ನಲ್ಲಿ ತಂಡದ ಮೊತ್ತವನ್ನು 30 ರನ್ ದಾಟಿಸಿದ್ದರು. ಈ ಹಂತದಲ್ಲಿ ಟಿಮ್ ಸೌಥಿ ಎಸೆತದಲ್ಲಿ ವೇಡ್ ( 24) ವಿಕೆಟ್ ಒಪ್ಪಿಸಿದರು. ಈ ವೇಳೆ ಕಣಕ್ಕಿಳಿದ ಜೋಶ್ ಫಿಲಿಪೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ನ್ಯೂಜಿಲೆಂಡ್ ವೇಗಿಗಳಿಗೆ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ ಫಿಲಿಪೆ 3 ಸಿಕ್ಸರ್ ಹಾಗೂ 2 ಬೌಂಡರಿಯೊಂದಿಗೆ 32 ಎಸೆತಗಳಲ್ಲಿ 45 ರನ್ ಬಾರಿಸಿದರು. ಇದರ ನಡುವೆ ಫಿಂಚ್ (14) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (3) ವಿಕೆಟ್ ಒಪ್ಪಿಸಿ ಹೊರನಡೆದರು. ತಂಡದ ಮೊತ್ತ 112 ರನ್ ಇದ್ದ ವೇಳೆ ಫಿಲಿಪೆ ಸಹ ನಿರ್ಗಮಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಮಾರ್ಕಸ್ ಸ್ಟೊಯ್ನಿಸ್ ಹಾಗೂ ಡೇನಿಯಲ್ ಸ್ಯಾಮ್ಸ್ ಪಂದ್ಯದ ಗತಿಯನ್ನೇ ಬದಲಿಸಿದರು. ಒಂದೆಡೆ ಸ್ಟೊಯ್ನಿಸ್ ಅಬ್ಬರಿಸಿದರೆ, ಮತ್ತೊಂದೆಡೆ ಸ್ಯಾಮ್ಸ್​ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ನ್ಯೂಜಿಲೆಂಡ್ ಪರ ವಾಲಿದ್ದ ಪಂದ್ಯವು ಮತ್ತೆ ಆಸ್ಟ್ರೇಲಿಯಾ ತೆಕ್ಕೆಗೆ ಬಂತು.

ಕೊನೆಯ ಓವರ್​ನಲ್ಲಿ 15 ರನ್​ ಬೇಕಿದ್ದ ವೇಳೆ ಸ್ಯಾಮ್ಸ್ ನೀಶಮ್ ಎಸೆತದಲ್ಲಿ ಕ್ಯಾಚ್ ನೀಡಿದರು. ಇದಕ್ಕೂ ಮುನ್ನ ಸ್ಯಾಮ್ಸ್​ ಕೇವಲ 15 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿಯೊಂದಿಗೆ 41 ರನ್​ ಚಚ್ಚಿದ್ದರು. ಇನ್ನು ಕೊನೆಯ ಓವರ್​ನಲ್ಲಿ 37 ಎಸೆತಗಳಲ್ಲಿ 78 ರನ್​ ಬಾರಿಸಿದ್ದ ಸ್ಟೊಯ್ನಿಸ್ ಕೂಡ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ನ್ಯೂಜಿಲೆಂಡ್ ತಂಡವು 4 ರನ್​ಗಳ ರೋಚಕ ಜಯ ಸಾಧಿಸಿತು.ಈ ಪಂದ್ಯದಲ್ಲೂ ಆರ್​ಸಿಬಿ ತಂಡವನ್ನು ಪ್ರತಿನಿಧಿಸಲಿರುವ 6 ಆಟಗಾರರು ಕಣಕ್ಕಿಳಿದಿದ್ದರು. ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಆಡಿದ್ದ ಜೋಶ್ ಫಿಲಿಪ್, ಗ್ಲೆನ್ ಮ್ಯಾಕ್ಸವೆಲ್, ಆ್ಯಡಂ ಝಂಪಾ, ಕೇನ್ ರಿಚರ್ಡ್ಸನ್ ಹಾಗೂ ಆಲ್​ರೌಂಡರ್ ಡೇನಿಯಲ್ ಸ್ಯಾಮ್ಸ್​ 2ನೇ ಮ್ಯಾಚ್​ನಲ್ಲೂ ಸ್ಥಾನ ಪಡೆದಿದ್ದರು.

ಇದರಲ್ಲಿ ಫಿಲಿಪೆ ಹಾಗೂ ಸ್ಯಾಮ್ಸ್ ಮಿಂಚಿದ್ದು ಬಿಟ್ಟರೆ ಉಳಿದ ಆರ್​ಸಿಬಿ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಸ್ಯಾಮ್ಸ್ ಬ್ಯಾಟಿಂಗ್​ನಲ್ಲಿ 41 ರನ್ ಸಿಡಿಸಿ ಮಿಂಚಿದರೆ, ಬೌಲಿಂಗ್​ನಲ್ಲಿ 4 ಓವರ್​ನಲ್ಲಿ 46 ರನ್​ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು. ಇನ್ನು ಕೇನ್ ರಿಚರ್ಡ್ಸನ್ 3 ವಿಕೆಟ್ ಕಬಳಿಸಿ ಗಮನ ಸೆಳೆದರೂ 4 ಓವರ್​ನಲ್ಲಿ 43 ರನ್​ ಬಿಟ್ಟುಕೊಟ್ಟಿದ್ದರು. ಆ್ಯಡಂ ಝಂಪಾ ಈ ಪಂದ್ಯದಲ್ಲಿ 1 ವಿಕೆಟ್ ಕಬಳಿಸಿದರೆ 4 ಓವರ್​ನಲ್ಲಿ ನೀಡಿದ್ದು ಬರೋಬ್ಬರಿ 43 ರನ್​ಗಳು.

ಇನ್ನು ಆರ್​ಸಿಬಿ ಆಟಗಾರರ ಬ್ಯಾಟಿಂಗ್ ನೋಡುವುದಾದರೆ ಜೋಶ್ ಫಿಲಿಪೆ 45 ರನ್ ಸಿಡಿಸಿ ಮಿಂಚಿದರು. ಹಾಗೆಯೇ ಸ್ಯಾಮ್ಸ್​ 41 ರನ್​ಗಳೊಂದಿಗೆ ಅಬ್ಬರಿಸಿದ್ದರು. ಇದಾಗ್ಯೂ ಕಳೆದ ಪಂದ್ಯದಲ್ಲಿ 1 ರನ್ ಗಳಿಸಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಈ ಬಾರಿ ಕೂಡ ಕೇವಲ 3 ರನ್​ಗಳಿಸಿ ನಿರಾಸೆ ಮೂಡಿಸಿದರು. ಇನ್ನು ನ್ಯೂಜಿಲೆಂಡ್ ಪರ ಕಣಕ್ಕಿಳಿದ ಆರ್​ಸಿಬಿ ವೇಗಿ ಕೈಲ್ ಜೇಮಿಸನ್ 4 ಓವರ್​ನಲ್ಲಿ 56 ರನ್​ ನೀಡಿ ದುಬಾರಿ ಎನಿಸಿಕೊಂಡರು. ಅಲ್ಲದೆ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾಗಿಲ್ಲ.

ಅಂದಹಾಗೆ ಆರ್​ಸಿಬಿ ಗ್ಲೆನ್ ಮ್ಯಾಕ್ಸ್​ವೆಲ್​ನ್ನು 14.25 ಕೋಟಿ ನೀಡಿ, ಹಾಗೂ ಕೈಲ್ ಜೇಮಿಸನ್​ನ್ನು 15 ಕೋಟಿ ನೀಡಿ ಖರೀದಿಸಿತ್ತು. ಇದೀಗ ಮುಗಿದ 2 ಪಂದ್ಯದಲ್ಲೂ ಈ ಇಬ್ಬರು ದುಬಾರಿ ಆಟಗಾರರು ವಿಫಲರಾಗಿರೋದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಹಾಗೆಯೇ 2ನೇ ಟಿ20 ಪಂದ್ಯದಲ್ಲೂ RCB ತಂಡದ 4 ಆಟಗಾರರು ವಿಫಲರಾಗಿರೋದು ಆರ್​ಸಿಬಿ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಇನ್ನೂ 3 ಟಿ20‌ ಪಂದ್ಯಗಳಿದ್ದು, ಅದರಲ್ಲಿ ಆರ್​ಸಿಬಿ ಆಟಗಾರರ ಪ್ರದರ್ಶನ ಹೇಗಿರುತ್ತೇ ಕಾದು ನೋಡಬೇಕಿದೆ.
Published by: zahir
First published: February 25, 2021, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories