KL Rahul: ಧೋನಿ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ..!

ಏಕದಿನ, ಟಿ20 ಹಾಗೂ ಟೆಸ್ಟ್​ ತಂಡಗಳಲ್ಲಿ ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ರಿಷಭ್ ಪಂತ್ ಹಾಗೂ ವೃದ್ಧಿಮಾನ್ ಸಾಹ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ.

Dhoni - KL Rahul

Dhoni - KL Rahul

 • Share this:
  ಆಗಸ್ಟ್ 15, 2020 ರಂದು ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಆ ಬಳಿಕ ಟೀಮ್ ಇಂಡಿಯಾ ಯಾವುದೇ ಟೂರ್ನಿ ಆಡದಿದ್ದರೂ, ಭವಿಷ್ಯದ ವಿಕೆಟ್ ಕೀಪರ್ ಯಾರು ಎಂಬ ಚರ್ಚೆಯೊಂದು ಚಾಲ್ತಿಯಲ್ಲಿತ್ತು. ಆರಂಭದಲ್ಲಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಧೋನಿ ಸ್ಥಾನವನ್ನು ರಿಷಭ್ ಪಂತ್ ತುಂಬಲಿದ್ದಾರೆ ಎಂದು ಹೇಳಲಾಗಿತ್ತು. ಅತ್ತ ಧೋನಿ ಕೂಡ ಯುವ ಕ್ರಿಕೆಟಿಗನ ಬೆಂಬಲಕ್ಕೆ ನಿಂತಿದ್ದರು. ಆದರೆ ಸತತ ವೈಫಲ್ಯ ಪಂತ್ ಅವರನ್ನು ತಂಡದಿಂದ ಕೈ ಬಿಡುವಂತೆ ಮಾಡಿತು. ಈ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಕೆಎಲ್ ರಾಹುಲ್ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್​ನಲ್ಲೂ ಮಿಂಚಿದ್ದರು. ಹೀಗಾಗಿ ಧೋನಿ ಸ್ಥಾನವನ್ನು ತುಂಬುವ ವಿಕೆಟ್ ಕೀಪರ್ ರಾಹುಲ್ ಎಂದು ಬಣ್ಣಿಸಲಾಗಿತ್ತು.

  ಆದರೆ ಇದೀಗ ಟೀಮ್ ಇಂಡಿಯಾದಲ್ಲಿ ನಾಲ್ವರು ವಿಕೆಟ್ ಕೀಪರ್​ಗಳಿದ್ದಾರೆ. ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಮಾಡಲಾದ ಏಕದಿನ, ಟಿ20 ಹಾಗೂ ಟೆಸ್ಟ್​ ತಂಡಗಳಲ್ಲಿ ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ರಿಷಭ್ ಪಂತ್ ಹಾಗೂ ವೃದ್ಧಿಮಾನ್ ಸಾಹ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ. ಇದಾಗ್ಯೂ ಮೂರು ಮಾದರಿ ಕ್ರಿಕೆಟ್​ನಲ್ಲೂ ತಂಡದಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್ ಅವರೇ ಕೀಪಿಂಗ್ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ವಿಕೆಟ್ ಕೀಪರ್ ಜವಾಬ್ದಾರಿ ವಹಿಸಿಕೊಂಡರೂ, ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಖುದ್ದು ಕೆಎಲ್​ಆರ್ ತಿಳಿಸಿದ್ದಾರೆ.

  ಧೋನಿ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರು ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಸ್ಥಾನದ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕೆಂದು ತೋರಿಸಿಕೊಟ್ಟಿದ್ದಾರೆ. ನನ್ನಿಂದ ಸ್ಪಿನ್ನರ್‌ಗಳಿಗೆ ಯಾವ ರೀತಿ ಬೌಲಿಂಗ್‌ ಮಾಡಬೇಕು ಎಂಬುದನ್ನು ಹೇಳಿಕೊಡಲು ಸಾಧ್ಯ. ನ್ಯೂಜಿಲೆಂಡ್ ಪ್ರವಾಸದಲ್ಲೂ ನಾನು ಇದನ್ನು ಮಾಡಿದ್ದೆ. ಆಸ್ಟ್ರೇಲಿಯಾದಲ್ಲೂ ಅದನ್ನೇ ಮುಂದುವರಿಸುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

  ರಾಹುಲ್ ಅವರ ಈ ಹೇಳಿಕೆಯಿಂದ ಆಸ್ಟ್ರೇಲಿಯಾ ವಿರುದ್ಧ ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಜವಾಬ್ದಾರಿಯನ್ನು ಅವರೇ ನಿರ್ವಹಿಸಲಿದ್ದಾರೆ ಎಂಬ ಸುಳಿವು ಸಿಕ್ಕಂತಾಗಿದೆ. ಇದಾಗ್ಯೂ ತಂಡದಲ್ಲಿ ಸಂಜು ಸ್ಯಾಮ್ಸನ್ ಕೂಡ ಇದ್ದು, ಆಡುವ ಬಳಗದಲ್ಲಿ ಯುವ ಕ್ರಿಕೆಟಿಗ ಸ್ಥಾನ ಪಡೆದರೆ ಅವರೇ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅಂತರಾಷ್ಟ್ರೀಯ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಸ್ ಬಟ್ಲರ್ ಇದ್ದರೂ, ಸಂಜು ಸ್ಯಾಮ್ಸನ್ ಹೆಚ್ಚಿನ ಪಂದ್ಯಗಳಲ್ಲಿ ಗ್ಲೌಸ್ ಧರಿಸಿದ್ದರು.

  ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
  Published by:zahir
  First published: