Sunil Narine- ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ತಂಡದಲ್ಲಿ ಸುನೀಲ್ ನರೈನ್​ಗೆ ಇಲ್ಲ ಸ್ಥಾನ; ಕಾರಣ ಏನು?

West Indies T20 World Cup Squad- ಆರ್​ಸಿಬಿ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಬಹುತೇಕ ಏಕಾಂಗಿಯಾಗಿ ಕೆಕೆಆರ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಸುನೀಲ್ ನರೈನ್ ಅವರನ್ನ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡದಿರಲು ನಿರ್ಧರಿಸಲಾಗಿದೆ. ತಂಡದ ನಾಯಕ ಕೀರಾನ್ ಪೊಲಾರ್ಡ್ ಕೂಡ ಇದನ್ನ ಸ್ಪಷ್ಟಪಡಿಸಿದ್ಧಾರೆ.

ಕೀರಾನ್ ಪೊಲಾರ್ಡ್ ಮತ್ತು ಸುನೀಲ್ ನರೈನ್

ಕೀರಾನ್ ಪೊಲಾರ್ಡ್ ಮತ್ತು ಸುನೀಲ್ ನರೈನ್

 • Share this:
  ದುಬೈ, ಅ. 13: ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ (West Indies T20 Team) ತಂಡದಲ್ಲಿ ಸುನೀಲ್ ನರೈನ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಸುನೀಲ್ ನರೈನ್ (Sunil Narine) ತಾನೆಂಥ ಆಟಗಾರ ಎನ್ನುವುದನ್ನ ಮೊನ್ನೆ ಆರ್​ಸಿಬಿ ವಿರುದ್ಧದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದಾರೆ. ಬೌಲಿಂಗ್​ನಲ್ಲಿ ನಾಲ್ಕು ಪ್ರಮುಖ ವಿಕೆಟ್​ಗಳನ್ನ ಉರುಳಿಸಿದ್ದಲ್ಲದೇ ಬ್ಯಾಟಿಂಗ್​ನಲ್ಲಿ ಸ್ಫೋಟಕ ಆಟ ಆಡಿ ಕೆಕೆಆರ್ (KKR) ತಂಡಕ್ಕೆ ಗೆಲುವಿನ ತಿರುವು ಕೊಟ್ಟಿದ್ದು ಅವರೆಯೇ. ಆದರೂ ವೆಸ್ಟ್ ಇಂಡೀಸ್ ಟಿ20 ತಂಡದಲ್ಲಿ ಅವರಿಗೆ ಸ್ಥಾನ ಸಿಗದೇ ಹೋಗಿರುವುದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ವೆಸ್ಟ್ ಇಂಡೀಸ್ ತಂಡದ ಮ್ಯಾನೇಜ್ಮೆಂಟ್ ಈ ವಿಚಾರದಲ್ಲಿ ಬಹಳ ಸ್ಪಷ್ಟ ನಿಲುವು ಹೊಂದಿದೆ. ಸುನೀಲ್ ನರೈನ್ ಅವರನ್ನ ಸೇರಿಸಿಕೊಳ್ಳದ ತಮ್ಮ ನಿರ್ಧಾರಕ್ಕೆ ಈಗಲೂ ಬದ್ಧವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಹಾಗೂ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರಾನ್ ಪೊಲಾರ್ಡ್ (Kieron Pollard) ಕೂಡ ಸುನೀಲ್ ನರೈನ್ ಸೇರ್ಪಡೆ ಸಾಧ್ಯತೆಯನ್ನ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

  “ಐಪಿಎಲ್​ನಲ್ಲಿ ಆಡುವ ಆಟದ ಆಧಾರದ ಮೇಲೆ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ. ವೆಸ್ಟ್ ಇಂಡೀಸ್ ತಂಡದಲ್ಲಿರುವ ಯಾವುದೇ ಆಟಗಾರ ಗಾಯಗೊಂಡರೆ ಅಥವಾ ಅಸ್ವಸ್ಥನಾದರೆ ಮಾತ್ರ ಯೋಚಿಸಬಹುದು. ಇದನ್ನ ಸ್ಪಷ್ಟಪಡಿಸಿದ್ದೇವೆ. ಸುನಿಲ್​ರನ್ನ ಯಾಕೆ ಆಯ್ಕೆ ಮಾಡಿಲ್ಲ ಎಂದು ನಾನು ಏನಾದರೂ ಕಾರಣ ಹೇಳಿದರೆ ಅದು ಶಾರ್ಜಾ ಪಿಚ್​ನಲ್ಲಿ ಸುನೀಲ್ ಎಸೆಯುವ ಚೆಂಡು ಸ್ಪಿನ್ ಆದಂತೆ ಹೇಳಿಕೆಗಳು ಇನ್ನೇನೋ ತಿರುವು ಪಡೆಯಬಹುದು.

  ತಂಡದಲ್ಲಿ ಈಗ ಇರುವ 15 ಮಂದಿ ಬಗ್ಗೆ ನಾವು ಯೋಚಿಸುವುದು ಹೆಚ್ಚು ಮುಖ್ಯ. ಈ ಆಟಗಾರರನ್ನ ಇಟ್ಟುಕೊಂಡು ನಾವು ಮತ್ತೆ ಟಿ20 ವಿಶ್ವಕಪ್ ಎತ್ತಿಹಿಡಿಯುವುದರತ್ತ ಗಮನ ಕೊಡಬೇಕು” ಎಂದು ಕೀರಾನ್ ಪೊಲಾರ್ಡ್ ಬಹಳ ಕಡ್ಡಿತುಂಡುಮಾಡಿದಂತೆ ಹೇಳಿದ್ದಾರೆ.

  ಸುನೀಲ್ ನರೈನ್ ಆಯ್ಕೆಯಾಗದೇ ಇರಲು ಏನು ಕಾರಣ?

  2019, ಆಗಸ್ಟ್​ನಿಂದಲೂ ಸುನೀಲ್ ನರೈನ್ ಅವರು ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಮೊದಲು ಪ್ರಮುಖ ಕಾರಣ ಅವರ ಬೌಲಿಂಗ್ ಆ್ಯಕ್ಷನ್. ಸರಿಯಾದ ವಿಧಾನದಲ್ಲಿ ಅವರು ಚೆಂಡನ್ನು ಎಸೆಯುತ್ತಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಂಡು ವಿವಾದವಾಯಿತು. ಆಗ ಅವರು ವಿಂಡೀಸ್ ತಂಡಕ್ಕೆ ಆಯ್ಕೆಯಾಗಲಿಲ್ಲ. ಈಗ ಟಿ20 ವಿಶ್ವಕಪ್​ಗೆ ಅವರು ಆಯ್ಕೆಯಾಗದೇ ಇರಲು ಫಿಟ್ನೆಸ್ ಕಾರಣವೆನ್ನಲಾಗಿದೆ. ಅವರು ವೆಸ್ಟ್ ಇಂಡೀಸ್ ತಂಡಕ್ಕೆ ನಿಗದಿ ಮಾಡಲಾಗಿರುವ ಕನಿಷ್ಠ ಫಿಟ್ನೆಸ್ ಮಾನದಂಡದಲ್ಲಿ ಸುನೀಲ್ ನರೈನ್ ವಿಫಲರಾಗಿದ್ಧಾರೆ. ಅದಕ್ಕೆ ಅವರನ್ನ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ ಎಂಬುದು ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆಯ ಹೇಳಿಕೆ.

  ಇದನ್ನೂ ಓದಿ: Michael Jackson & Gandhi- ಒಂದೇ ಕ್ಲಬ್​ನಲ್ಲಿ ಮಹಾತ್ಮ ಗಾಂಧಿ, ಮೈಕೇಲ್ ಜ್ಯಾಕ್ಸನ್; ಅದ್ಹೇಗೆ?

  “ಇಂಥ ದೊಡ್ಡ ಟೂರ್ನಿಯಲ್ಲಿ ನರೈನ್ ತಂಡದಲ್ಲಿ ಇಲ್ಲದಿರುವುದು ದೊಡ್ ಕೊರತೆಯೇ. ಅವರಂಥ ಬೌಲರ್ ಯಾವುದೇ ತಂಡಕ್ಕೂ ದೊಡ್ಡ ಶಕ್ತಿ ಆಗಿರುತ್ತಾರೆ. ಆದರೆ, ಅವರು ನಮ್ಮ ಫಿಟ್ನೆಸ್ ಪ್ರಮಾಣವನ್ನು ತಲುಪಲು ವಿಫಲರಾಗಿದ್ಧಾರೆ” ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಹಾಗೂ ಮಾಜಿ ವೇಗದ ಬೌಲರ್ ರೋಜರ್ ಹಾರ್ಪರ್ ಹೇಳಿದ್ದಾರೆ.

  ಪೊಲಾರ್ಡ್ ಹೇಳಿಕೆ: ಇನ್ನು, ಸುನೀಲ್ ನರೈನ್ ಬಗ್ಗೆ ಮಾತನಾಡಿ ನಾಯಕ ಕೀರಾನ್ ಪೊಲಾರ್ಡ್, “…ಸುನೀಲ್ ನರೈನ್ ಅಂತರರಾಷ್ಟ್ರೀಯ ಕ್ರಿಕೆಟಿಗನಾಗುವ ಮುನ್ನ ಸುನೀಲ್ ನರೈನ್ ನನ್ನ ಸ್ನೇಹಿತನಾಗಿ ಗೊತ್ತು. ನಾವಿಬ್ಬರೂ ಒಟ್ಟಿಗೆ ಕ್ರಿಕೆಟ್ ಆಡುತ್ತಾ ಬೆಳೆದವರು. ಅವರು ವಿಶ್ವದರ್ಜೆ ಕ್ರಿಕೆಟ್ ಆಟಗಾರ” ಎಂದು ಹೊಗಳಿದ್ದಾರೆ.

  ರಸೆಲ್ ಫಿಟ್ನೆಸ್ ಸಮಸ್ಯೆ: ವೆಸ್ಟ್ ಇಂಡೀಸ್ ತಂಡದಲ್ಲಿ ಕೆಲ ಆಟಗಾರರಿಗೆ ಫಿಟ್ನೆಸ್ ಸಮಸ್ಯೆ ಇದೆ. ತಂಡದ ಪ್ರಮುಖ ಆಲ್​ರೌಂಡರ್ ಆಂಡ್ರೆ ರಸೆಲ್ ಇನ್ನೂ ಪೂರ್ಣ ಫಿಟ್ ಆಗಿಲ್ಲದಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ. ಇದರ ಜೊತೆಗೆ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಸಂಪೂರ್ಣ ಫಿಟ್ ಆಗಿಲ್ಲ ಎಂಬ ವದಂತಿಯೂ ಇದೆ. ಗೇಲ್ ಮತ್ತು ಮಾಜಿ ಕ್ರಿಕೆಟಿಗ ಕರ್ಟ್ಲಿ ಆಂಬ್ರೋಸ್ ನಡುವೆ ವಾಗ್ಯುದ್ಧವೇ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ವೆಸ್ಟ್ ಇಂಡೀಸ್ ತಂಡ ತನ್ನ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುತ್ತಾ ಕಾದುನೋಡಬೇಕು.

  ವೆಸ್ಟ್ ಇಂಡೀಸ್ ಟಿ20 ತಂಡ: ಕೀರಾನ್ ಪೊಲಾರ್ಡ್ (ನಾಯಕ), ನಿಕೋಲಾಸ್ ಪೂರನ್, ಫೇಬಿಯನ್ ಅಲನ್, ಡ್ವೇನ್ ಬ್ರಾವೋ, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್ (ವಿ.ಕೀ.), ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೆಯರ್, ಎವಿನ್ ಲೆವಿಸ್, ಒಬೆದ್ ಮೆಕ್​ಕಾಯ್, ರವಿ ರಾಮಪಾಲ್, ಆಂಡ್ರೆ ರಸೆಲ್, ಲೆಂಡಲ್ ಸಿಮಾನ್ಸ್, ಒಶಾನೆ ಥಾಮಸ್, ಹೇಡನ್ ವಾಲ್ಷ್ ಜೂನಿಯರ್.

  ರಿಸರ್ವ್ ಆಟಗಾರರು: ಜೇಸನ್ ಹೋಲ್ಡರ್, ಅಕೀಲ್ ಹುಸೇನ್, ಶೆಲ್ಡಾನ್ ಕಾಟ್ರೆಲ್, ಡರೆನ್ ಬ್ರಾವೋ.
  Published by:Vijayasarthy SN
  First published: