ತಂಡ ಉತ್ತಮ ಪ್ರದರ್ಶನ ನೀಡುವವರೆಗೂ ಕೊಹ್ಲಿ ಕ್ಯಾಪ್ಟನ್ಸಿ ಬದಲಾವಣೆ ಇಲ್ಲ: ಬಿಸಿಸಿಐ ಕಾರ್ಯದರ್ಶಿ

No Leadership Change- ಟೀಮ್ ಇಂಡಿಯಾಗೆ ಇಬ್ಬರು ನಾಯಕರಿರುತ್ತಾರೆ ಎಂಬಂತಹ ಸುದ್ದಿಯನ್ನು ಬಿಸಿಸಿಐ ಮತ್ತೊಮ್ಮೆ ತಳ್ಳಿಹಾಕಿದೆ. ತಂಡ ಉತ್ತಮ ಪ್ರದರ್ಶನ ನೀಡುವವರೆಗೂ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಜಯ್ ಶಾ ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Cricketnext
 • Last Updated :
 • Share this:
  ಮುಂಬೈ, ಸೆ. 14: ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ (Virat Kohli stepping down from Captaincy) ಎಂಬಂತಹ ಸುದ್ದಿ ಕ್ರಿಕೆಟ್ ವಲಯದಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ ಸುದ್ದಿಯನ್ನ ಬಿಸಿಸಿಐ (BCCI) ಅಲ್ಲಗಳೆದಿದೆ. ಭಾರತ ಕ್ರಿಕೆಟ್ ತಂಡದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಸದ್ಯಕ್ಕಂತೂ ಇಲ್ಲ. ವಿರಾಟ್ ಕೊಹ್ಲಿಯೇ ನಾಯಕರಾಗಿ ಮುಂದುವರಿಯುತ್ತಾರೆ ಎಂದು ಮೊನ್ನೆಯೇ ಬಿಸಿಸಿಐ ಹೇಳಿದೆ. ಇವತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (BCCI Secretary Jay Shah) ಕೂಡ ಅದನ್ನೇ ಪುನರುಚ್ಚರಿಸಿದ್ಧಾರೆ. ಟೀಮ್ ಇಂಡಿಯಾ ಎಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡುತ್ತಾ ಹೋಗುತ್ತದೋ ಅಲ್ಲಿಯವರೆಗೆ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಯ್ ಶಾ ಹೇಳಿದ್ದಾರೆ. ವಿರಾಟ್ ಕೊಹ್ಲಿಯನ್ನು ಕೇವಲ ಟೆಸ್ಟ್ ತಂಡದ ನಾಯಕತ್ವಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತದೆ ಎಂದು ಕೇಳಿಬರುತ್ತಿರುವ ಸುದ್ದಿಗೆ ಬಿಸಿಸಿಐ ಕಾರ್ಯದರ್ಶಿ ಪ್ರತಿಕ್ರಿಯಿಸಿ ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ.

  ಭಾರತ ತಂಡದಲ್ಲಿ ಸ್ಪ್ಲಿಟ್ ಕ್ಯಾಪ್ಟನ್ಸಿ ಇರಲಿ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಸ್ಪ್ಲಿಟ್ ಕ್ಯಾಪ್ಟನ್ಸಿ ಎಂದರೆ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಒಬ್ಬರು ನಾಯಕರಾದರೆ, ಚುಟುಕು ಕ್ರಿಕೆಟ್ ತಂಡಗಳಿಗೆ ಬೇರೊಬ್ಬರು ನಾಯಕರಾಗುವುದು ಉತ್ತಮ ಎನ್ನಲಾಗುತ್ತಿದೆ. ಮಾಜಿ ಕ್ರಿಕೆಟಿಗ ಮದನ್ ಲಾಲ್ ಮೊದಲಾದವರು ಇಂಥ ವಿಭಜಿತ ನಾಯಕತ್ವ ಸೂತ್ರಕ್ಕೆ ಬೆಂಬಲ ಕೊಟ್ಟಿದ್ದಾರೆ. ರೋಹಿತ್ ಶರ್ಮಾ ಅವರನ್ನ ಟಿ20 ಹಾಗೂ ಏಕದಿನ ಕ್ರಿಕೆಟ್ ತಂಡಗಳಿಗೆ ನಾಯಕರನ್ನಾಗಿ ಮಾಡಬಹುದು. ವಿರಾಟ್ ಕೊಹ್ಲಿಯನ್ನ ಟೆಸ್ಟ್ ತಂಡಕ್ಕೆ ಕ್ಯಾಪ್ಟನ್ಸಿಯಾಗಿ ಮುಂದುವರಿಸಬಹುದು ಎಂಬುದು ಇವರ ವಾದ.

  “ವಿಭಜಿತ ನಾಯಕತ್ವ ಒಳ್ಳೆಯ ಸಲಹೆ. ಭಾರತ ತಂಡ ಸದ್ಯ ಉತ್ತಮ ಸ್ಥಿತಿಯಲ್ಲಿದೆ. ತಂಡದಲ್ಲಿ ರೋಹಿತ್ ಶರ್ಮಾ ಇರುವುದು ನಮ್ಮ ಅದೃಷ್ಟ. ವಿರಾಟ್ ಕೊಹ್ಲಿ ಅವರಿಗೆ ಯಾವುದಾದರೂ ಒಂದರಡು ಮಾದರಿ ಕ್ರಿಕೆಟ್​ನಲ್ಲಿ ಆಟಕ್ಕೆ ಗಮನ ಕೊಡಬೇಕು ಎಂದನಿಸಿದರೆ ರೋಹಿತ್ ಶರ್ಮಾ ಅವರು ಕ್ಯಾಪ್ಟನ್ಸಿಯ ಹೊರೆ ಹೊರಬಲ್ಲರು. ಇದರಿಂದ ಭಾರತ ತಂಡಕ್ಕೆ ಒಳಿತಾಗುತ್ತದೆ. ವಿರಾಟ್ ಕೊಹ್ಲಿ ಓಡಿಐ ಮತ್ತು ಟಿ20 ಕ್ರಿಕೆಟ್​ನ ನಾಯಕ ಸ್ಥಾನದಿಂದ ಕೆಳಗಿಳಿದು ತಮ್ಮ ಬ್ಯಾಟಿಂಗ್ ಮೇಲೆ ಗಮನ ಕೊಡುತ್ತಾರೆಂಬ ಸುದ್ದಿ ಕೇಳಲ್ಪಟ್ಟೆ. ಹಾಗೆ ಅವರು ನಿರ್ಧರಿಸಿದರೆ ಒಳ್ಳೆಯದೇ… ಇದು ಊಹಾಪೋಹದ ಸುದ್ದಿಯೋ ಗೊತ್ತಿಲ್ಲ. ಆದರೆ, ಸ್ಪ್ಲಿಟ್ ಕ್ಯಾಪ್ಟನ್ಸಿ ಭಾರತಕ್ಕೆ ಒಳ್ಳೆಯದಂತೂ ಹೌದು. ಸದ್ಯ ವಿರಾಟ್ ಕೊಹ್ಲಿ ಮನದಲ್ಲಿ ಏನಿದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ…” ಎಂದು 1983ರ ವಿಶ್ವಕಪ್ ಹೀರೋಗಳಲ್ಲೊಬ್ಬರಾದ ಮದನ್ ಲಾಲ್ ಅಭಿಪ್ರಾಯಪಟ್ಟಿದ್ದರು. ಮಹೇಂದ್ರ ಸಿಂಗ್ ಧೋನಿ ಅವರನ್ನ ಟೀಮ್ ಇಂಡಿಯಾದ ಮೆಂಟರ್ ಆಗಿ ಕರೆದುಕೊಂಡು ಬರುತ್ತಿರುವುದೂ ನಾಯಕತ್ವ ಬದಲಾವಣೆಯ ಒಂದು ಭಾಗ ಎಂದೂ ಹೇಳಲಾಗುತ್ತಿದೆ.

  ಇದನ್ನೂ ಓದಿ: Virat Kohli| ವಿರಾಟ್​ ಕೊಹ್ಲಿಯೇ ನಿವೃತ್ತಿ ಘೋಷಿಸುವವರೆಗೆ ಅವರನ್ನೇ ನಾಯಕತ್ವದಲ್ಲಿ ಮುಂದುವರೆಸಬೇಕು; ರಿತೀಂದರ್​ ಸೋಧಿ

  ನಾಯಕತ್ವದಲ್ಲಿ ಬದಲಾವಣೆ ಆಗುತ್ತದೆ ಎಂಬಂತಹ ಸುದ್ದಿಯನ್ನು ಬಿಸಿಸಿಐ ಬಲವಾಗಿ ತಳ್ಳಿಹಾಕಿದೆ. ಇದು ಕೇವಲ ಮಾಧ್ಯಮದ ಸೃಷ್ಟಿ ಅಷ್ಟೇ. ಸ್ಪ್ಲಿಟ್ ಕ್ಯಾಪ್ಟನ್ಸಿ ಬಗ್ಗೆ ಬಿಸಿಸಿಐನಲ್ಲಿ ಯಾವ ಚರ್ಚೆಯೂ ಆಗಿಲ್ಲ. ವಿರಾಟ್ ಕೊಹ್ಲಿಯೇ ಎಲ್ಲಾ ಮಾದರಿ ಕ್ರಿಕೆಟ್​ನ ತಂಡಗಳಿಗೂ ನಾಯಕರಾಗಿ ಮುಂದುವರಿಯುತ್ತಾರೆ ಎಂದು ನಿನ್ನೆಯೇ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದರು. ಇವತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೂ ಇದನ್ನ ಒತ್ತಿ ಹೇಳಿದ್ದಾರೆ.

  ವಿರಾಟ್ ಕೊಹ್ಲಿ ಭಾರತದ ಮೂರು ಮಾದರಿಯ ಕ್ರಿಕೆಟ್ ತಂಡಗಳ ನಾಯಕತ್ವ ವಹಿಸಿ ಯಶಸ್ವಿಯಾಗಿದ್ಧಾರೆ. ಅವರ ಕ್ಯಾಪ್ಟನ್ಸಿಯಲ್ಲಿ ಟೀಮ್ ಇಂಡಿಯಾ ಅಗ್ರೆಸಿವ್ ಆಗಿದೆ. ಸಂಕಷ್ಟದ ಸಂದರ್ಭದಲ್ಲೂ ಕಂಬ್ಯಾಕ್ ಮಾಡುವ ಛಾತಿ ಬೆಳೆಸಿಕೊಂಡಿದೆ.
  Published by:Vijayasarthy SN
  First published: