• Home
  • »
  • News
  • »
  • sports
  • »
  • ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ಬೈ ಹೇಳಿದ ನ್ಯೂಜಿಲೆಂಡ್ ಕ್ರಿಕೆಟಿಗ: ಅಮೆರಿಕ ಪರ ಹೊಸ ಇನಿಂಗ್ಸ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ಬೈ ಹೇಳಿದ ನ್ಯೂಜಿಲೆಂಡ್ ಕ್ರಿಕೆಟಿಗ: ಅಮೆರಿಕ ಪರ ಹೊಸ ಇನಿಂಗ್ಸ್

Corey Anderson

Corey Anderson

Corey Anderson: ಇದೀಗ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಅಮೆರಿಕಾದ ಮೇಜರ್ ಲೀಗ್​ ಕ್ರಿಕೆಟ್​ನ ಭಾಗವಾಗಲಿದ್ದಾರೆ. ಇನ್ನು ಕೋರಿ ಆ್ಯಂಡರ್ಸನ್ ಪ್ರೇಯಸಿ ಕೂಡ ಯುಎಸ್​ಎ ಮೂಲದವರಾಗಿದ್ದು, ಹೀಗಾಗಿ ಮುಂದಿನ ಜೀವನವನ್ನು ಅಮೆರಿಕಾದಲ್ಲೇ ಕಳೆಯಲು ನಿರ್ಧರಿಸಿದ್ದಾರೆ.

  • Share this:

    ನ್ಯೂಜಿಲೆಂಡ್​ನ ಸ್ಟಾರ್ ಆಲ್​ರೌಂಡರ್ ಕೋರಿ ಆ್ಯಂಡರ್ಸನ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಕಿವೀಸ್ ಪರ 13 ಟೆಸ್ಟ್, 49 ಏಕದಿನ ಹಾಗೂ 31 ಟಿ20 ಪಂದ್ಯಗಳನ್ನಾಡಿರುವ ಆ್ಯಂಡರ್ಸನ್, 2 ಶತಕ, 10 ಅರ್ಧಶತಕಗಳೊಂದಿಗೆ ಒಟ್ಟು 2277 ರನ್​ ಕಲೆಹಾಕಿದ್ದಾರೆ. ಅಲ್ಲದೆ ತಮ್ಮ ಮೀಡಿಯಂ ಪೇಸ್ ಬೌಲಿಂಗ್ ಮೂಲಕ 90 ವಿಕೆಟ್ ಕಬಳಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕೋರಿ, ಕಳೆದ ಎರಡು ವರ್ಷಗಳಿಂದ ನ್ಯೂಜಿಲೆಂಡ್ ಪರ ಕಣಕ್ಕಿಳಿದಿರಲಿಲ್ಲ. ಇದೀಗ ನಿವೃತ್ತಿ ಘೋಷಿಸಿ ಅಮೆರಿಕಾದಲ್ಲಿ ನಡೆಯಲಿರುವ ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಈ ಲೀಗ್​ನಲ್ಲಿ ಭಾಗವಹಿಸಲು ಮೂರು ವರ್ಷಗಳ ಒಪ್ಪಂದವನ್ನು ಸಹ ಮಾಡಿಕೊಂಡಿದ್ದಾರೆ.


    ನಿವೃತ್ತಿ ಬಗ್ಗೆ ಮಾತನಾಡಿರುವ ಆ್ಯಂಡರ್ಸನ್, ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವುದೇ ದೊಡ್ಡ ಗೌರವದ ವಿಷಯ. ಆದರೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡುವ ಅವಕಾಶ ದೊರಕಿಲಿಲ್ಲ. ಹೀಗಾಗಿ ಸಿಗುವ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇನೆ. ಹಾಗೆಯೇ ಅವಕಾಶ ನೀಡಿದ ನ್ಯೂಜಿಲೆಂಡ್ ಕ್ರಿಕೆಟ್​ಗೆ ಸದಾ ಋಣಿಯಾಗಿರುವೆ ಎಂದು 29 ಹರೆಯದ ಕೋರಿ ಆ್ಯಂಡರ್ಸನ್ ತಿಳಿಸಿದ್ದಾರೆ.


    ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೆಲವೇ ಪಂದ್ಯಗಳನ್ನಾಡಿರುವ ಆ್ಯಂಡರ್ಸನ್ ವಿಶ್ವ ದಾಖಲೆ ನಿರ್ಮಿಸಲು ಯಶಸ್ವಿಯಾಗಿದ್ದರು. 2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 36 ಎಸೆತಗಳಿಗೆ ಶತಕ ಸಿಡಿಸಿ ಅತೀ ವೇಗದ ಸೆಂಚುರಿ ಬಾರಿಸಿ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದರು. ಆದರೆ 2015ರಲ್ಲಿ ಎಬಿ ಡಿವಿಲಿಯರ್ಸ್‌ 31 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಈ ದಾಖಲೆ ಹಿಂದಿಕ್ಕಿದ್ದರು. ಸದ್ಯ ಅತಿವೇಗದ 2ನೇ ಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಆ್ಯಂಡರ್ಸನ್ ಹೆಸರಿನಲ್ಲಿದೆ.


    ಇನ್ನು ಐಪಿಎಲ್‌ನಲ್ಲೂ ಕೋರಿ ಆ್ಯಂಡರ್ಸನ್ ಕಾಣಿಸಿಕೊಂಡಿದ್ದರು. ಡೆಲ್ಲಿ ಡೇರ್‌ಡೆವಿಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. 2018ರಲ್ಲಿ ಕೊನೆಯ ಬಾರಿ ನ್ಯೂಜಿಲೆಂಡ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಆ್ಯಂಡರ್ಸನ್ ಬಳಿಕ ಲೀಗ್​ ಕ್ರಿಕೆಟ್​ನತ್ತ ಮುಖ ಮಾಡಿದ್ದರು.


    Corey Anderson


    ಇದೀಗ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಅಮೆರಿಕಾದ ಮೇಜರ್ ಲೀಗ್​ ಕ್ರಿಕೆಟ್​ನ ಭಾಗವಾಗಲಿದ್ದಾರೆ. ಇನ್ನು ಕೋರಿ ಆ್ಯಂಡರ್ಸನ್ ಪ್ರೇಯಸಿ ಕೂಡ ಯುಎಸ್​ಎ ಮೂಲದವರಾಗಿದ್ದು, ಹೀಗಾಗಿ ಮುಂದಿನ ಜೀವನವನ್ನು ಅಮೆರಿಕಾದಲ್ಲೇ ಕಳೆಯಲು ನಿರ್ಧರಿಸಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಅಮೆರಿಕಾ ಕ್ರಿಕೆಟ್ ತಂಡವನ್ನು ಆ್ಯಂಡರ್ಸನ್ ಪ್ರತಿನಿಧಿಸಲಿದ್ದಾರೆ ಎನ್ನಲಾಗಿದೆ. ಐಸಿಸಿ ನಿಯಮದ ಪ್ರಕಾರ ಒಂದು ದೇಶಕ್ಕೆ ಆಡಿದ ಕ್ರಿಕೆಟಿಗ 4 ವರ್ಷಗಳ ಬಳಿಕ ಮತ್ತೊಂದು ದೇಶವನ್ನು ಪ್ರತಿನಿಧಿಸಬಹುದು. ಕಳೆದ ಒಂದು ವರ್ಷದಿಂದ ಕೋರಿ ಆ್ಯಂಡರ್ಸನ್ ನ್ಯೂಜಿಲೆಂಡ್ ಕ್ರಿಕೆಟ್​ನ ಯಾವುದೇ ಭಾಗವಾಗಿರಲಿಲ್ಲ. ಹೀಗಾಗಿ ಮೇಜರ್ ಲೀಗ್ ಬಳಿಕ 29ರ ಹರೆಯದ ಕೋರಿ ಆ್ಯಂಡರ್ಸನ್ ಅಮೆರಿಕಾ ಕ್ರಿಕೆಟ್​ ತಂಡದ ಭಾಗವಾಗುವುದು ಬಹುತೇಕ ಖಚಿತ ಎನ್ನಲಾಗಿದೆ.


    ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!

    Published by:zahir
    First published: