ಬೆಂಗಳೂರು (ಜೂ. 01): ಕಾರ್ಡಿಫ್ನಲ್ಲಿ ನಡೆದ ವಿಶ್ವಕಪ್ನ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡ 10 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ. ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಮಿಂಚಿದ ಕಿವೀಸ್ ಪಡೆ ಮೊದಲ ಪಂದ್ಯದಲ್ಲೇ ಭರ್ಜರಿ ಜಯಭೇರಿ ಬಾರಿಸಿದ್ದು, ಸಿಂಹಳೀಯರಿಗೆ ಭಾರೀ ಹಿನ್ನಡೆಯಾಗಿದೆ.
ಮೊದಲಿಗೆ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಅದರಂತೆ ಬ್ಯಾಟಿಂಗ್ಗೆ ಇಳಿದ ಶ್ರೀಲಂಕಾ ಆರಂಭದಲ್ಲೇ ಆಘಾತ ಅನುಭಿಸಿತು. ಕ್ರೀಸ್ ಕಚ್ಚಿ ಆಡುವಲ್ಲಿ ವಿಫಲವಾದ ಲಹಿರು ತಿರುಮನೆ(4) ಮೊದಲ ಓವರ್ನ ಎರಡನೇ ಎಸೆತದಲ್ಲೇ ಔಟ್ ಆದರು. ಈ ಸಂದರ್ಭ ನಾಯಕ ದಿಮುತ್ ಕರುಣರತ್ನೆ ಹಾಗೂ ಕುಸಲ್ ಪೆರೆರಾ ಎಚ್ಚರಿಕೆಯ ಆಟಕ್ಕೆ ಮುಂದಾದರಾದರು 29 ರನ್ ಗಳಿಸಿರುವಾಗ ಪೆರೆರಾ ಔಟ್ ಆದರು. ಕುಸಲ್ ಮೆಂಡಿಸ್ ಹಾಗೂ ಅನುಭವಿ ಆ್ಯಂಜಲೋ ಮ್ಯಾಥ್ಯುಸ್ ಸೊನ್ನೆ ಸುತ್ತಿದರೆ, ಧನಂಜಯ್ ಡಿ ಸಿಲ್ವಾ 4 ರನ್ಗೆ ಬ್ಯಾಟ್ ಕೆಳಗಿಟ್ಟರು. ಜೀವನ್ ಮೆಂಡಿಸ್ ಕೂಡ 1 ರನ್ಗೆ ಸುಸ್ತಾದರು. ತಿಸಾರ ಪೆರೆರಾ ಕೊಂಚ ಸಮಯ ಬ್ಯಾಟ್ ಬೀಸಿ 23 ರನ್ ಗಳಿಸಿ ನಿರ್ಗಮಿಸಿದರು.
ಹೀಗೆ ಇಂದು ಕಡೆ ವಿಕೆಟ್ ಉರಳುತ್ತಿದ್ದರೆ ನಾಯಕ ಕರುಣರತ್ನೆ ಏಕಾಂಗಿಯಾಗಿ ರನ್ ಕಲೆಹಾಕಿದರು. ಕೊನೆಯ ವರೆಗೂ 52 ರನ್ಗಳಿಸಿ ಅಜೇಯರಾಗಿ ಉಳಿದ ಕರುಣರತ್ನೆ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಉಳಿದ ಬ್ಯಾಟ್ಸ್ಮನ್ಗಳು ಇವರಿಗೆ ಸಾತ್ ನೀಡದ ಪರಿಣಾಮ 29.2 ಓವರ್ನಲ್ಲೆ 136 ರನ್ಗಳಿಗೆ ಆಲೌಟ್ ಆಯಿತು.
ನ್ಯೂಜಿಲೆಂಡ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಮ್ಯಾಟ್ ಹೆನ್ರಿ ಹಾಗೂ ಫರ್ಗುಸನ್ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ಟ್ರೆಂಟ್ ಬೌಲ್ಟ್, ಗ್ರ್ಯಾಂಡ್ಹೋಮ್, ನೀಶಮ್ ಹಾಗೂ ಸ್ಯಾಂಟನರ್ ತಲಾ 1 ವಿಕೆಟ್ ಪಡೆದರು.
137 ರನ್ಗಳ ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ಗೆ ಓಪನರ್ಗಳೇ ಗೆಲುವು ತಂದಿಟ್ಟರು. ಸ್ಫೋಟಕ ಆಟ ಪ್ರದರ್ಶಿಸಿದ ಕಾಲಿನ್ ಮುನ್ರೊ ಹಾಗೂ ಮಾರ್ಟಿನ್ ಗಪ್ಟಿಲ್ 16.1 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಗಪ್ಟಿಲ್ 53 ಎಸೆತಗಳಲ್ಲಿ 73 ಸಿಡಿಸಿದರೆ, ಮುನ್ರೊ 47 ಎಸೆತಗಳಲ್ಲಿ 58 ರನ್ ಬಾರಿಸಿ ಅಜೇಯರಾಗಿ ಉಳಿದರು. ಕೇನ್ ಪಡೆಯ ಒಂದೂ ವಿಕೆಟ್ ಕೀಳಲಾಗದೆ ಲಂಕಾನ್ನರು ಹೀನಾಯಕ ಸೋಲು ಕಂಡಿದ್ದಾರೆ. ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ನ್ಯೂಜಿಲೆಂಡ್ ಬೌಲರ್ ಮ್ಯಟ್ ಹೆನ್ರಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.