HOME » NEWS » Sports » CRICKET NEW ZEALAND VS AUSTRALIA 1ST T20I IN CHRISTCHURCH HIGHLIGHTS ZP

New Zealand vs Australia: ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್​ಗೆ ಭರ್ಜರಿ ಜಯ

ಈ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ನೀಡುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಯಿತು. ಕ್ಯಾಪ್ಟನ್ ಆರನ್ ಫಿಂಚ್ 1 ರನ್ ಗಳಿಸಿ ಹೊರನಡೆದರೆ, ಚೊಚ್ಚಲ ಟಿ20 ಟೂರ್ನಿ ಆಡುತ್ತಿರುವ ಜೋಶ್ ಫಿಲಿಪೆ ಕೇವಲ 2 ರನ್ ಗಳಿಸಿ ನಿರ್ಗಮಿಸಿದರು.

news18-kannada
Updated:February 22, 2021, 5:29 PM IST
New Zealand vs Australia: ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್​ಗೆ ಭರ್ಜರಿ ಜಯ
NZ
  • Share this:
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ 53 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲ ನಾಲ್ಕು ಓವರ್‌ಗಳಲ್ಲಿ ವೇಗದ ಬೌಲರ್‌ಗಳು ಕೂಡ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ್ದರು. ಎಡಗೈ ವೇಗದ ಬೌಲರ್ ಡೇನಿಯಲ್ ಸ್ಯಾಮ್ಸ್​ ಮೊದಲ ಓವರ್‌ನಲ್ಲಿ ಮಾರ್ಟಿನ್ ಗುಪ್ಟಿಲ್ ಅವರನ್ನು ಔಟ್ ಮಾಡಿದರೆ, ಜೇ ರಿಚರ್ಡ್‌ಸನ್ ವಿಕೆಟ್‌ಕೀಪರ್ ಟಿಮ್ ಸಿಫೆರ್ಟ್‌ರನ್ನು 1 ರನ್‌ಗೆ ಪೆವಿಲಿಯನ್​ ಕಡೆ ಕಳುಹಿಸಿದರು. ಇನ್ನು ನಾಲ್ಕನೇ ಓವರ್‌ನಲ್ಲಿ ನಾಯಕ ಕೇನ್ ವಿಲಿಯಮ್ಸನ್ (12) ಅವರಿಗೂ ಡೇನಿಯಲ್ ಸ್ಯಾಮ್ಸ್​ ಪೆವಿಲಿಯನ್ ಹಾದಿ ತೋರಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಎಡಗೈ ಬ್ಯಾಟ್ಸ್​ಮನ್​ ಡೆವೊನ್ ಕಾನ್ವೇ ಹಾಗೂ ಗ್ಲೆನ್ ಫಿಲಿಪ್ಸ್ ನಾಲ್ಕನೇ ವಿಕೆಟ್‌ಗೆ 74 ಎಸೆತಗಳಲ್ಲಿ 52 ರನ್‌ಗಳ ಜೊತೆಯಾಟವಾಡಿದರು. ಅಲ್ಲದೆ ನ್ಯೂಜಿಲೆಂಡ್ 8.5 ಓವರ್‌ಗಳಲ್ಲಿ ತಮ್ಮ 50 ರನ್‌ಗಳನ್ನು ಪೂರ್ಣಗೊಳಿಸಿತು. ಕಾನ್ವೇ 36 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು.

10 ಓವರ್‌ಗಳ ನಂತರ ಗೇರ್ ಬದಲಿಸಿದ ಕಾನ್ವೇ ಬಿರುಸಿನ ಆಟಕ್ಕೆ ಮುಂದಾದರು. ಪರಿಣಾಮ 13.2 ಓವರ್‌ಗಳಲ್ಲಿ ನ್ಯೂಜಿಲೆಂಡ್ ತಂಡದ ಸ್ಕೋರ್ 100 ಕ್ಕೆ ಬಂದು ನಿಂತಿತು. ಈ ಹಂತದಲ್ಲಿ ಫಿಲಿಪ್ಸ್ 30 ರನ್‌ಗಳಿಸಿ ಔಟ್ ಆದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಾನ್ವೇ, ಜೇಮ್ಸ್ ನೀಶಮ್ ಜೊತೆಗೂಡಿ ಕೊನೆಯ 20 ಎಸೆತಗಳಲ್ಲಿ 44 ರನ್​ ಚಚ್ಚಿದರು. ಅಲ್ಲದೆ 59 ಎಸೆತಗಳಲ್ಲಿ ಅಜೇಯ 99 ರನ್​ಗಳಿಸುವ ಮೂಲಕ ಕಾನ್ವೇ ನ್ಯೂಜಿಲೆಂಡ್​ ತಂಡದ ಮೊತ್ತವನ್ನು 184 ಕ್ಕೆ ತಂದು ನಿಲ್ಲಿಸಿದರು. ಕಾನ್ವೇಯ ಈ ಸ್ಪೋಟಕ ಇನಿಂಗ್ಸ್​ನಲ್ಲಿ 3 ಸಿಕ್ಸರ್ ಹಾಗೂ 10 ಬೌಂಡರಿಗಳು ಒಳಗೊಂಡಿದ್ದವು.

ಈ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ನೀಡುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಯಿತು. ಕ್ಯಾಪ್ಟನ್ ಆರನ್ ಫಿಂಚ್ 1 ರನ್ ಗಳಿಸಿ ಹೊರನಡೆದರೆ, ಚೊಚ್ಚಲ ಟಿ20 ಟೂರ್ನಿ ಆಡುತ್ತಿರುವ ಜೋಶ್ ಫಿಲಿಪೆ ಕೇವಲ 2 ರನ್ ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಮ್ಯಾಥ್ಯೂ ವೇಡ್ (12) ವಿಕೆಟ್ ಒಪ್ಪಿಸಿದರು. 5 ನೇ ಓವರ್ ವೇಳೆಗೆ ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸ್‌ವೆಲ್ (1) ಅವರ ವಿಕೆಟ್ ಕಳೆದುಕೊಂಡಿತು.

ಬಳಿಕ ಬಂದ ಮಾರ್ಕಸ್ ಸ್ಟೋನಿಸ್ ಕೂಡ 8 ರನ್ ಗಳಿಸಿ ಸೋಧಿಗೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಮಾರ್ಷ್ ಮತ್ತು ಆಷ್ಟನ್ ಎಗ್ಗರ್ 25 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾಗೆ ಈ ಹಂತದಲ್ಲಿ ಆಸರೆಯಾದರು. ಆದರೆ ಕೈಲ್ ಜೇಮಿಸನ್, ಮಿಚೆಲ್ ಮಾರ್ಷ್ ಅವರನ್ನು ಔಟ್ ಮಾಡುವ ಮೂಲಕ ಗೆಲುವಿನ ಹಾದಿ ಸುಗಮಗೊಳಿಸಿದರು. 17.3 ಓವರ್​ನಲ್ಲಿ 131 ರನ್​ಗೆ ಆಸ್ಟ್ರೇಲಿಯಾವನ್ನು ಆಲೌಟ್ ಮಾಡಿದ ನ್ಯೂಜಿಲೆಂಡ್ 53 ರನ್​ಗಳ ಭರ್ಜರಿ ಜಯ ಸಾಧಿಸಿತು. ನ್ಯೂಜಿಲೆಂಡ್ ಪರ ಇಶ್ ಸೋಧಿ 4 ವಿಕೆಟ್ ಉರುಳಿಸಿ ಮಿಂಚಿದರೆ, ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ತಲಾ 2 ವಿಕೆಟ್ ಕಬಳಿಸಿದರು.
Published by: zahir
First published: February 22, 2021, 5:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories