ಪಂದ್ಯ ಶುರುವಾಗುವ ಕೆಲವೇ ಕ್ಷಣ ಮೊದಲು ಇಡೀ ಪಾಕ್ ಪ್ರವಾಸವನ್ನೇ ರದ್ದುಗೊಳಿಸಿದ ಕಿವೀಸ್

Pakistan vs New Zealand- ಪಾಕಿಸ್ತಾನದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಭದ್ರತಾ ಅಪಾಯ ಎದುರಾಗಬಹುದು ಎಂದು ಗುಪ್ತಚರರಿಂದ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ ಇವತ್ತು ಆರಂಭವಾಗಬೇಕಿದ್ದ ಪಾಕ್ ಪ್ರವಾಸವನ್ನು ನ್ಯೂಜಿಲೆಂಡ್ ರದ್ದುಗೊಳಿಸಿದೆ.

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಾಯಕರು

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಾಯಕರು

 • Cricketnext
 • Last Updated :
 • Share this:
  ನವದೆಹಲಿ, ಸೆ. 17: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರದಿ ಬರೆಯುವ ವೇಳೆಗೆ ಪಾಕಿಸ್ತಾನದ ರಾವಲ್​ಪಿಂಡಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮಧ್ಯೆ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಆರಂಭವಾಗಬೇಕಿತ್ತು. ಪಂದ್ಯ ಶುರುವಾಗಲು ಕೆಲವೇ ನಿಮಿಷಗಳು ಇರುವಾಗ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ತನ್ನ ಇಡೀ ಪಾಕ್ ಪ್ರವಾಸವನ್ನೇ ರದ್ದುಗಳಿಸಿದೆ. ಪಾಕಿಸ್ತಾನದಲ್ಲಿ ಭದ್ರತಾ ಅಪಾಯ ಇದೆ ಎಂದು ನ್ಯೂಜಿಲೆಂಡ್ ಸರ್ಕಾರ ಹಾಗೂ ಕ್ರಿಕೆಟ್ ಮಂಡಳಿಯ ಭದ್ರತಾ ಸಲಹೆಗಾರರು ಎಚ್ಚರಿಸಿದ ಹಿನ್ನೆಲೆಯಲ್ಲಿ ಕ್ರಿಕೆಟ್ ಪ್ರವಾಸ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪಾಕಿಸ್ತಾನಕ್ಕೆ ಆಗಮಿಸಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಈಗ ಪಾಕಿಸ್ತಾನದಿಂದ ಹೊರಗೆ ಹೋಗಲು ತಯಾರಿ ನಡೆಸಿದೆ.

  ನ್ಯೂಜಿಲೆಂಡ್​ನ ಈ ನಿರ್ಧಾರ ತೀರಾ ದಿಢೀರನೇ ತೆಗೆದುಕೊಂಡದ್ದಲ್ಲ. ಎರಡೂ ತಂಡಗಳ ಆಟಗಾರರು ತಂತಮ್ಮ ಹೋಟೆಲ್ ರೂಮುಗಳಿಂದ ಹೊರಗೆ ಬರದಂತೆ ಸೂಚನೆ ನೀಡಲಾಯಿತು. ಪ್ರೇಕ್ಷಕರಿಗೂ ಸ್ಟೇಡಿಯಂನೊಳಗೆ ಪ್ರವೇಶ ನಿರಾಕರಿಸಲಾಗಿತ್ತು. ಆಗಲೇ ಏನೋ ವಿಶೇಷವೊಂದು ಘಟಿಸುವ ಸೂಚನೆ ಇತ್ತು. ನಂತರ ಪಾಕ್ ಪ್ರವಾಸದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಹೇಳಿಕೆ ಕೊಟ್ಟ ಬಳಿಕ ವಿಚಾರ ಸ್ಪಷ್ಟವಾಯಿತು. “ಪಾಕಿಸ್ತಾನ ಒಳ್ಳೆಯ ಆತಿಥೇಯ ಕ್ರಿಕೆಟ್ ದೇಶವಾಗಿದೆ. ನಮ್ಮ ಈ ನಿರ್ಧಾರದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಹೊಡೆ ಬೀಳುತ್ತದೆ ಎಂದು ನಮಗೆ ಗೊತ್ತು. ಆದರೆ, ನಮ್ಮ ಆಟಗಾರರ ಸುರಕ್ಷತೆ ನಮಗೆ ಹೆಚ್ಚು ಮುಖ್ಯ. ಇದು ಬಿಟ್ಟರೆ ಬೇರೆ ಉತ್ತಮ ಆಯ್ಕೆ ಇರಲಿಲ್ಲ ಎಂಬುದು ನಮ್ಮ ಭಾವನೆ” ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಚೀಫ್ ಎಕ್ಸಿಕ್ಯೂಟಿವ್ ಡೇವಿಡ್ ವೈಟ್ ತಿಳಿಸಿದ್ದಾರೆ.

  ಟಿ20 ವಿಶ್ವಕಪ್​ಗೆ ತಯಾರಾಗುವ ನಿಟ್ಟಿನಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಮಧ್ಯೆ ಸರಣಿ ಏರ್ಪಡಿಸಲಾಗಿತ್ತು. ಈ ಕಿವೀಸ್ ಪ್ರವಾಸದಲ್ಲಿ ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳು ನಿಗದಿಯಾಗಿದ್ದವು. ಇವತ್ತು ರಾವಲ್​ಪಿಂಡಿಯಲ್ಲಿ ಏಕದಿನ ಸರಣಿ ಆರಂಭವಾಗಬೇಕಿತ್ತು. ಆದರೆ, ನ್ಯೂಜಿಲೆಂಡ್ ಏಕಾಏಕಿ ಪ್ರವಾಸ ಕೈಬಿಟ್ಟಿದ್ದು ಪಾಕಿಸ್ತಾನಕ್ಕೆ ಶಾಕ್ ಕೊಟ್ಟಿರುವುದು ಹೌದು. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಏಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಪಿಸಿಬಿ ಆಘಾತ ವ್ಯಕ್ತಪಡಿಸಿದೆ.

  ಇದನ್ನೂ ಓದಿ: PM Modi birthday- ಪ್ರಧಾನಿ ನರೇಂದ್ರ ಮೋದಿ 71ನೇ ಜನ್ಮದಿನಕ್ಕೆ ಕ್ರೀಡಾಪಟುಗಳ ಶುಭಕೋರಿಕೆ

  “ಭದ್ರತಾ ಅಪಾಯ ಇದೆ ಎಂದು ಇವತ್ತು ಬೆಳಗ್ಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನಮಗೆ ಮಾಹಿತಿ ನೀಡಿತು. ಸರಣಿಯನ್ನ ಮುಂದೂಡಲು ನಿರ್ಧರಿಸಿದ್ದೇವೆ ಎಂದು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ… ಪಿಸಿಬಿ ಮತ್ತು ಪಾಕಿಸ್ತಾನ ಸರ್ಕಾರ ಎಲ್ಲಾ ಪ್ರವಾಸೀ ತಂಡಗಳಿಗೂ ಭಾರೀ ಬಿಗಿ ಭದ್ರತೆಗಳನ್ನ ಒದಗಿಸುತ್ತವೆ. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಗೂ ನಾವು ಸಂಪೂರ್ಣ ಭದ್ರತೆಯ ವ್ಯವಸ್ಥೆ ಮಾಡಿದ್ದೆವು. ನಮ್ಮ ಪ್ರಧಾನಿ ಅವರು ಖುದ್ದಾಗಿ ನ್ಯೂಜಿಲೆಂಡ್ ಪ್ರಧಾನಿ ಜೊತೆ ಮಾತನಾಡಿ ಭರವಸೆ ನೀಡಿದ್ದರು. ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ಪಾಕಿಸ್ತಾನದಲ್ಲಿದೆ. ಇಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಯಾವುದೇ ಭದ್ರತಾ ಅಪಾಯ ಎದುರಾಗದಂತೆ ನೋಡಿಕೊಳ್ಳುತ್ತೇವೆ ಎಂದು ಆಕೆಗೆ ತಿಳಿಸಿದ್ದರು… ನ್ಯೂಜಿಲೆಂಡ್ ತಂಡದ ಭದ್ರತಾ ಅಧಿಕಾರಿಗಳೂ ಕೂಡ ಪಾಕ್ ಸರ್ಕಾರ ಏರ್ಪಡಿಸಿದ್ದ ಭದ್ರತಾ ವ್ಯವಸ್ಥೆ ಬಗ್ಗೆ ತೃಪ್ತಿ ಹೊಂದಿದ್ದರು” ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿಕ್ರಿಯಿಸಿದೆ.

  ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಕೊನೆಯ ಬಾರಿ ಕಾಲಿಟ್ಟಿದ್ದು 2003ರಲ್ಲಿ. ಬರೋಬ್ಬರಿ 18 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವೇಶಿಸಿದೆ. 2002ರಲ್ಲಿ ನ್ಯೂಜಿಲೆಂಡ್ ತಂಡ ಕರಾಚಿಯಲ್ಲಿ ಉಳಿದುಕೊಂಡಿದ್ದ ಹೋಟೆಲ್ ಬಳಿ ಬಾಂಬ್ ಸ್ಫೋಟವಾಗಿತ್ತು. ಆಗ ಪ್ರವಾಸವನ್ನು ಮುಂದೂಡಲಾಗಿತ್ತು. 19 ವರ್ಷಗಳ ಬಳಿಕ ಆ ಪ್ರವಾಸ ಈಗ ಪುನಾರಂಭಗೊಳ್ಳುವುದಿತ್ತು. ದುರದೃಷ್ಟವಶಾತ್ ಮತ್ತೊಮ್ಮೆ ಆ ಸರಣಿ ರದ್ದುಗೊಂಡಿದೆ. ಸೆ. 11ರಂದು ಹಲವು ಪಂದ್ಯಗಳನ್ನಾಡುವ ಗುಂಗಿನಲ್ಲಿ ಪಾಕಿಸ್ತಾನಕ್ಕೆ ಬಂದಿಳಿದಿದ್ದ ನ್ಯೂಜಿಲೆಂಡ್ ತಂಡ ಒಂದು ವಾರದೊಳಗೆ ವಾಪಸ್ ಹೋಗುವ ಪ್ರಮೇಯ ಬಂದೊದಗಿದೆ.
  Published by:Vijayasarthy SN
  First published: