ಪಾಕಿಸ್ತಾನ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ನ್ಯೂಜಿಲೆಂಡ್ ತಂಡ ಸರ್ವ ಶ್ರೇಷ್ಠ ಸಾಧನೆಗೈದಿದೆ. 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿರುವ ಕಿವೀಸ್ ಪಡೆ ಇದೇ ಮೊದಲ ಬಾರಿ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಮೂಲಕ 90 ವರ್ಷಗಳಿಂದ ಕನಸಾಗಿದ್ದ ಟೆಸ್ಟ್ ಅಗ್ರ ಶ್ರೇಯಾಂಕವನ್ನು ನ್ಯೂಜಿಲೆಂಡ್ ತನ್ನದಾಗಿಸಿಕೊಂಡಿದೆ.
1930 ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ನ್ಯೂಜಿಲೆಂಡ್ ಪ್ರಸ್ತುತ ಉತ್ತಮ ಫಾರ್ಮ್ನಲ್ಲಿದೆ. ಪಾಕ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಕೇನ್ ವಿಲಿಯಮ್ಸನ್ ಪಡೆ 101 ರನ್ ಗಳ ಭರ್ಜರಿ ಜಯ ಸಾಧಿಸಿತ್ತು. ಅಲ್ಲದೆ ಎರಡನೇ ಟೆಸ್ಟ್ನಲ್ಲಿ ಇನಿಂಗ್ಸ್ ಹಾಗೂ 176 ರನ್ಗಳಿಂದ ಪಾಕ್ಗೆ ಸೋಲುಣಿಸಿದರು. ಈ ಮೂಲಕ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದೆ.
ಇನ್ನು ಮೊದಲ ಟೆಸ್ಟ್ನಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದ ನಾಯಕ ಕೇನ್ ವಿಲಿಯಮ್ಸನ್, ದ್ವಿತೀಯ ಟೆಸ್ಟ್ನಲ್ಲೂ ಮತ್ತೊಂದು ಡಬಲ್ (238) ಸೆಂಚುರಿ ಸಿಡಿಸಿದರು. ಅಲ್ಲದೆ ತಂಡದ ಯುವ ವೇಗಿ ಎರಡು ಇನಿಂಗ್ಸ್ಗಳಿಂದ 11 ವಿಕೆಟ್ ಉರುಳಿಸಿ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮುನ್ನ ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಈ ಗೆಲುವಿನೊಂದಿಗೆ ಕೇನ್ ವಿಲಿಯಮ್ಸನ್ ಪಡೆ ಐಸಿಸಿ ರ್ಯಾಕಿಂಗ್ನಲ್ಲಿ 116 ಅಂಕಗಳನ್ನು ಕಲೆಹಾಕಿತು. ಅಲ್ಲದೆ ರ್ಯಾಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದರು. ಇದೀಗ ಪಾಕ್ ತಂಡವನ್ನು ಸಹ ಕ್ಲೀನ್ ಸ್ವೀಪ್ ಮಾಡುವ ಮೂಲಕ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಹೀಗಿದೆ:
1- ನ್ಯೂಜಿಲೆಂಡ್ (118)
2- ಆಸ್ಟ್ರೇಲಿಯಾ (116)
3- ಭಾರತ (114)
4- ಇಂಗ್ಲೆಂಡ್ (106)
5- ದಕ್ಷಿಣ ಆಫ್ರಿಕಾ (96)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ