T20 World Cup- ಕೇವಲ 44 ರನ್​​ಗೆ ನೆದರ್​ಲೆಂಡ್ಸ್ ಆಲೌಟ್; ಇಲ್ಲಿದೆ ಅತಿ ಕಡಿಮೆ ಸ್ಕೋರ್​ಗಳ ಲಿಸ್ಟ್

Lowest Innings in T20 World Cup history- ಶಾರ್ಜಾದಲ್ಲಿ ನಡೆದ ಗ್ರೂಪ್ ಎ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನೆದರ್ಲೆಂಡ್ಸ್ ಕೇವಲ 44 ರನ್​ಗೆ ಆಲೌಟ್ ಆಗಿದೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಎರಡನೇ ಅತಿ ಕಡಿಮೆ ಮೊತ್ತವಾಗಿದೆ.

ನೆದರ್​ಲೆಂಡ್ಸ್ ಕ್ರಿಕೆಟ್ ತಂಡ

ನೆದರ್​ಲೆಂಡ್ಸ್ ಕ್ರಿಕೆಟ್ ತಂಡ

 • Share this:
  ಶಾರ್ಜಾ, ಅ. 22: ಐಸಿಸಿ ವಿಶ್ವಕಪ್​ನ ಆರಂಭಿಕ ಪಂದ್ಯಗಳಲ್ಲಿ ಕಳೆಗುಂದಿದಂತಿದ್ದ ಶ್ರೀಲಂಕಾ ತಂಡ ಸಿಂಹದಂತೆ ಘರ್ಜಿಸಿದೆ. ಲಂಕಾ ಬೌಲರ್​ಗಳ ದಾಳಿಗೆ ಸಿಕ್ಕು ನೆದರ್​ಲೆಂಡ್ಸ್ ತಂಡದ ಬ್ಯಾಟರ್ಸ್ ತರಗೆಲೆಗಳಂತೆ ಉದುರಿದ್ದಾರೆ. ಮೊದಲು ಬ್ಯಾಟ್ ಮಾಡಿದ ನೆದರ್​ಲ್ಯಾಂಡ್ಸ್ ಕೇವಲ 44 ರನ್​ಗೆ ಆಲೌಟ್ ಆಗಿದೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಎರಡನೇ ಅತೀ ಕಡಿಮೆ ಸ್ಕೋರ್ ಆಗಿದೆ. ಕುತೂಹಲದ ಸಂಗತಿ ಎಂದರೆ ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನ ನೆದರ್​ಲೆಂಡ್ಸ್ ತಂಡವೇ ಆಕ್ರಮಿಸಿಕೊಂಡಿದೆ. ಮತ್ತೊಂದು ಕುತೂಹಲದ ಸಂಗತಿ ಎಂದರೆ ಟಿ20 ವಿಶ್ವಕಪ್​ಗಳಲ್ಲಿ ಮೂರು ಅತೀ ಕಡಿಮೆ ಸ್ಕೋರುಗಳು ದಾಖಲು ಮಾಡಿದ ತಂಡಗಳಿಗೆ ಎದುರಾಳಿಯಾಗಿದ್ದು ಶ್ರೀಲಂಕಾವೇ.

  2014ರ ಟಿ20 ವಿಶ್ವಕಪ್​ನಲ್ಲಿ ನೆದರ್​ಲೆಂಡ್ಸ್ 39 ರನ್​ಗೆ ಆಲೌಟ್ ಆಗಿದ್ದು ಇದೂವರೆಗಿನ ಅತಿ ಕಡಿಮೆ ಸ್ಕೋರ್ ಎಂದು ದಾಖಲೆಯಾಗಿ ಉಳಿದುಕೊಂಡಿದೆ. ಅದರ ನಂತರ ಸ್ಥಾನವನ್ನು ಇವತ್ತಿನ ಇನ್ನಿಂಗ್ಸ್ ಆಕ್ರಮಿಸಿಕೊಂಡಿದೆ. 2014ರ ಟಿ20 ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಇನ್ನಿಂಗ್ಸ್ 60 ರನ್​ಗೆ ಮಗುಚಿಕೊಂಡಿತ್ತು. ಆ ಎರಡೂ ಪಂದ್ಯವು ಬಾಂಗ್ಲಾದೇಶದ ಚಿತ್ತಗಾಂವ್​ನ ಕ್ರಿಕೆಟ್ ಪಿಚ್​ನಲ್ಲಿ ನಡೆದಿದ್ದವು.

  ಟಿ20 ವಿಶ್ವಕಪ್​ನಲ್ಲಿ ಅತಿ ಕಡಿಮೆ ಸ್ಕೋರ್​ಗಳ ಪಟ್ಟಿ:

  1) 39 ರನ್: ನೆದರ್​ಲೆಂಡ್ಸ್ vs ಶ್ರೀಲಂಕಾ, 2014

  2) 44 ರನ್: ನೆದರ್​ಲೆಂಡ್ಸ್ vs ಶ್ರೀಲಂಕಾ, 2021

  3) 60 ರನ್: ನ್ಯೂಜಿಲೆಂಡ್ vs ಶ್ರೀಲಂಕಾ, 2014

  4) 68 ರನ್: ಐರ್​ಲೆಂಡ್ vs ವೆಸ್ಟ್ ಇಂಡೀಸ್, 2010

  5) 69 ರನ್: ಹಾಂಕಾಂಗ್ vs ನೇಪಾಳ, 2014

  6) 70 ರನ್: ಬಾಂಗ್ಲಾದೇಶ್ vs ನ್ಯೂಜಿಲೆಂಡ್, 2016

  ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

  ಶ್ರೀಲಂಕಾಗೆ 8 ವಿಕೆಟ್ ಜಯಭೇರಿ:

  ನೆದರ್​ಲೆಂಡ್ಸ್ ತಂಡದ 44 ರನ್ ಅಲ್ಪಮೊತ್ತವನ್ನ ಶ್ರೀಲಂಕಾ 8ನೇ ಓವರ್​ನಲ್ಲಿ ಬೆನ್ನತ್ತಿ ಜಯಿಸಿತು. ಕುಸಾಲ್ ಪೆರೇರಾ ಅಜೇಯ 33 ರನ್ ಗಳಿಸಿದರು. ಇನ್ನು, ನೆದರ್​ಲೆಂಡ್ಸ್ ಇನಿಂಗ್ಸ್​ನಲ್ಲಿ ಎರಡಂಕಿ ಸ್ಕೋರ್ ದಾಟಿದ್ದು ಕಾಲಿನ್ ಅಕರ್ಮನ್ ಒಬ್ಬರು ಮಾತ್ರ. ಉಳಿದವರು ಒಂದಂಕಿ ಮೊತ್ತಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಶ್ರೀಲಂಕಾಗೆ ಇದು ಹ್ಯಾಟ್ರಿಕ್ ಗೆಲುವಾಗಿದೆ.

  ಇನ್ನು, ಶ್ರೀಲಂಕಾದ ಬೌಲರ್​ಗಳು ಈ ಪಂದ್ಯದಲ್ಲಿ ವಿಜೃಂಬಿಸಿದರು. ಆಡಿದ ಮೂರೂ ಪಂದ್ಯಗಳಲ್ಲಿ ಲಂಕಾ ಬೌಲರ್ಸ್ ಎದುರಾಳಿ ತಂಡವನ್ನು ಆಲೌಟ್ ಮಾಡಿದ್ದು ವಿಶೇಷ. ಇವತ್ತು ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಲಾಹಿರು ಕುಮಾರ 3 ಓವರ್​ನಲ್ಲಿ 7 ರನ್ನಿತ್ತು 3 ವಿಕೆಟ್ ಪಡೆದರೆ, ವನಿಂದು ಹಸರಂಗ 3 ಓವರ್​ನಲ್ಲಿ 9 ರನ್​ಗೆ 3 ವಿಕೆಟ್ ಸಂಪಾದಿಸಿದರು. ಮಹೀಶ್ ತೀಕ್ಷಣ ಅವರು ಒಂದೇ ಓವರ್ ಬೌಲ್ ಮಾಡಿದರೂ 2 ವಿಕೆಟ್ ಪಡೆಯುವಲ್ಲಿ ಸಫಲರಾದರು.

  ಇದನ್ನೂ ಓದಿ: T20 World Cup Super-12: ನಮೀಬಿಯಾ ಇತಿಹಾಸ; ಭಾರತ, ಪಾಕ್ ಗುಂಪಿನಲ್ಲಿ ಆಫ್ರಿಕನ್ ರಾಷ್ಟ್ರ

  ಸೂಪರ್-12ನ ಮೊದಲ ಗುಂಪಿನಲ್ಲಿ ಶ್ರೀಲಂಕಾ:

  ನೆದರ್​ಲೆಂಡ್ಸ್ ಮತ್ತು ಶ್ರೀಲಂಕಾ ನಡುವಿನ ಪಂದ್ಯ ನಾಮಕಾವಸ್ತೆ ಮಾತ್ರದ್ದಾಗಿತ್ತು. ಶ್ರೀಲಂಕಾ ಈ ಪಂದ್ಯ ಸೋತಿದ್ದರೂ ನಂಬರ್ ಒನ್ ಸ್ಥಾನ ಅಬಾಧಿತವಾಗಿರುತ್ತಿತ್ತು. ಇದೀಗ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಶ್ರೀಲಂಕಾ ಸೂಪರ್-12 ಹಂತದಲ್ಲಿ ಮೊದಲ ಗುಂಪಿಗೆ ಸೇರಿಕೊಂಡಿದೆ.

  ಈ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌಥ್ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡಗಳು ನೇರ ಪ್ರವೇಶ ಪಡೆದಿವೆ. ಇದೀಗ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಈ ಗುಂಪಿಗೆ ಬಂದಿವೆ.

  ಇನ್ನೊಂದೆಡೆ, ಸೂಪರ್-12ನ ಎರಡನೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳ ಜೊತೆ ಸ್ಕಾಟ್ಲೆಂಡ್ ಮತ್ತು ನಮೀಬಿಯಾ ಸೇರಿವೆ.
  Published by:Vijayasarthy SN
  First published: