ಅಬುಧಾಬಿ: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳುತ್ತಿರುವ ಟೆಸ್ಟ್ ರಾಷ್ಟ್ರಗಳಲ್ಲದ ತಂಡಗಳ ಪೈಕಿ ನಮೀಬಿಯಾ, ನೆದರ್ಲೆಂಡ್ಸ್, ಅಫ್ಘಾನಿಸ್ತಾನ, ಐರ್ಲೆಂಡ್, ಸ್ಕಾಟ್ಲೆಂಡ್, ಓಮನ್, ಪಪುವಾ ನ್ಯೂಗಿನಿಯಾ ತಂಡಗಳಿವೆ. ಇವುಗಳಲ್ಲಿ ನೆದರ್ಲೆಂಡ್ಸ್, ಐರ್ಲೆಂಡ್ ತಂಡಗಳು ತುಸು ಹಳಬರು. ಅಫ್ಘಾನಿಸ್ತಾನ ಈಗಾಗಲೇ ಚಿರಪರಿಚಿತವಾಗಿದೆ. ಸೂಪರ್-12 ಹಂತಕ್ಕೂ ನೇರ ಪ್ರವೇಶ ಪಡೆದಿದೆ. ಆದರೆ, ಇವುಗಳೆಲ್ಲವನ್ನೂ ಮೀರಿಸುವ ಕ್ರಿಕೆಟ್ ತಂಡ ಇರುವುದು ನಮೀಬಿಯಾಗೆ. ವಿಶ್ವಕಪ್ಗೆ ಮುನ್ನ ನಡೆದ ಕೆಲ ಟೂರ್ನಿಗಳಲ್ಲಿ ನಮೀಬಿಯಾ ತನ್ನ ಶಕ್ತಿ ಪ್ರದರ್ಶನ ತೋರಿದೆ. ಅದರ ಬೆಳವಣಿಗೆಯನ್ನ ಕಂಡವರು ನಮೀಬಿಯಾ ಸೂಪರ್-12 ಹಂತ ಪ್ರವೇಶಿಸಿದರೆ ಅಚ್ಚರಿ ಪಡುವುದಿಲ್ಲ. ಹಾಗಿದೆ ಈ ತಂಡ.
ನಮೀಬಿಯಾ ಕ್ರಿಕೆಟ್ನ ಅಳಿವು ಉಳಿವಿನ ಪ್ರಶ್ನೆ:
ನಮೀಬಿಯಾ ಸಾಂಪ್ರದಾಯಿಕ ಕ್ರಿಕೆಟ್ ದೇಶವಲ್ಲ. ಉದ್ಯಮಿಗಳಿಂದ ಹಣದ ಹೂಡಿಕೆ ಹರಿಸಲು ಅದು ಸಿರಿವಂತ ದೇಶವೂ ಅಲ್ಲ. ತನ್ನ ಸ್ವಂತ ಬಲದಲ್ಲಿ ಬೆಳೆಯಲು ನಮೀಬಿಯಾ ಅಗ್ರಗಣ್ಯ ಕ್ರಿಕೆಟ್ ದೇಶವೂ ಅಲ್ಲ. ನಮೀಬಿಯಾ ಕೋಚ್ ಪಿಯೆರೆ ಡೀ ಬ್ರುಯನ್ ಈ ವಿಚಾರವನ್ನ ವಿಶದವಾಗಿ ತಿಳಿಸುತ್ತಾರೆ. ನಾವು ಈ ವಿಶ್ವಕಪ್ನಲ್ಲಿ ವಿಫಲರಾದರೆ ಬೇರಾವುದೇ ತಂಡಕ್ಕಿಂತ ಬಹಳ ನಷ್ಟ ಅನುಭವಿಸುತ್ತೇವೆ ಎಂದು ಅವರು ಹೇಳುತ್ತಾರೆ. ನಷ್ಟ ಎಂದರೆ ಇದು ಎಲ್ಲಾ ರೀತಿಯಲ್ಲೂ ನಷ್ಟ. ಅಂದರೆ, ಹಣಕಾಸು ದೃಷ್ಟಿಯಿಂದಲೂ ಮತ್ತು ಕ್ರಿಕೆಟ್ ದೃಷ್ಟಿಯಿಂದಲೂ ನಮೀಬಿಯಾದ ಕ್ರಿಕೆಟ್ ಕ್ಷೇತ್ರಕ್ಕೆ ಈ ವಿಶ್ವಕಪ್ ಬಹಳ ಮುಖ್ಯ.
ನಮೀಬಿಯಾ ತಂಡಕ್ಕೆ 2019ರಲ್ಲಿ ಏಕದಿನ ಕ್ರಿಕೆಟ್ ಸ್ಥಾನ ಸಿಕ್ಕಿತು. ಅದೊಂದು ಬೆಳವಣಿಗೆಯಿಂದ ನಮೀಬಿಯಾದಲ್ಲಿ ಕ್ರಿಕೆಟ್ ಉಸಿರಾಡುವಂತೆ ಮಾಡಲು ಸಾಧ್ಯವಾಯಿತು. ಏಕದಿನ ಕ್ರಿಕೆಟ್ ಸ್ಥಾನಮಾನವು ನಮಗೆ ಅನ್ನ ನೀರು, ಬದುಕು ಕೊಟ್ಟಿತು. ಗುತ್ತಿಗೆ ಪಟ್ಟಿಯಲ್ಲಿ ಅಟಗಾರರ ಸಂಖ್ಯೆ ನಾಲ್ಕರಿಂದ 17ಕ್ಕೆ ಏರಿಕೆ ಆಯಿತು. ಒಮ್ಮಿಂದೊಮ್ಮೆಲೇ ನಮೀಬಿಯಾ ಕ್ರಿಕೆಟ್ ವೃತ್ತಿಪರತೆಯಿಂದ ಕಂಗೊಳಿಸತೊಡಗಿತು ಎನ್ನುತ್ತಾರೆ ಕೋಚ್.
ಇದನ್ನೂ ಓದಿ: Babar Azam- ಪಾಕಿಸ್ತಾನದ ಬಾಬರ್ ಅಜಂನ ಸಂಪಾದನೆ, ಗರ್ಲ್ಫ್ರೆಂಡ್, ಆಸ್ತಿ ಮೊದಲಾದ ಮಾಹಿತಿ
ಸ್ಫೋಟಕ ಕ್ರಿಕೆಟಿಗರಿರುವ ತಂಡ:
ನಮೀಬಿಯಾ ಕ್ರಿಕೆಟ್ ತಂಡದಲ್ಲಿ ಆಲ್ರೌಂಡರ್ಗಳೇ ತುಂಬಿಕೊಂಡಿದ್ಧಾರೆ. ಮೂರು ಮಂದಿ ಬಿಟ್ಟು ಉಳಿದವರೆಲ್ಲರೂ ಆಲ್ರೌಂಡರ್ಸ್. ಡೇವಿಡ್ ವಿಯೆಸ್ ಅವರಂಥ ಸ್ಫೋಟಕ ಆಲ್ರೌಂಡರ್ ಅನ್ನು ಸೆಳೆದುಕೊಳ್ಳಲು ನಮೀಬಿಯಾ ಯಶಸ್ವಿಯಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಆಲ್ಬೀ ಮಾರ್ಕೆಲ್ ಅವರು ಕೋಚಿಂಗ್ ಟೀಮ್ಗೆ ಸೇರಿಕೊಂಡಿದ್ದಾರೆ. ಜೆ ಸ್ಮಿಟ್ ಅವರು ಪವರ್ ಹಿಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ನಾಯಕ ಎರಾಸ್ಮಸ್, ಡೇವಿಡ್ ವಿಯೆಸ್ ಅವರೂ ಮ್ಯಾಚ್ ವಿನ್ನರ್ಗಳಾಗಬಲ್ಲರು.
ಬೌಲಿಂಗ್ ಶಕ್ತಿ:
ನಮೀಬಿಯಾದಲ್ಲಿ ಏಳು ಮಂದಿ ಎಡಗೈ ಬೌಲರ್ಸ್ ಇದ್ದಾರೆ. ಎಡಗೈ ವೇಗದ ಬೌಲರ್ ಜೇನ್ ಫ್ರೈಲಿಂಕ್ ಅವರು ಓಮನ್ ವಿರುದ್ಧ ನಡೆದ ಪಂದ್ಯವೊಂದರಲ್ಲಿ 24 ರನ್ಗೆ 6 ವಿಕೆಟ್ ಪಡೆದು ತಮ್ಮ ಶಕ್ತಿ ತೋರ್ಪಡಿಸಿದ್ದರು. ತಂಡದಲ್ಲಿ ಇನ್ನೂ ಕೆಲ ಒಳ್ಳೆಯ ಬೌಲರ್ಗಳು ಇದ್ದಾರೆ.
ನಮೀಬಿಯಾ ದೌರ್ಬಲ್ಯಗಳು:
ವಿಶ್ವಕಪ್ಗೆ ಮುಂಚೆ ನಮೀಬಿಯಾ ತವರಿನಲ್ಲಿ ಪಂದ್ಯಗಳನ್ನ ಆಡಿ ಯಶಸ್ಸು ಕಂಡಿದೆ. ತಂಡದ ಪವರ್ ಹಿಟ್ಟರ್ಸ್ಗೆ ಹೇಳಿಮಾಡಿಸಿದ ಪಿಚ್ಗಳು ನಮೀಬಿಯಾದಲ್ಲಿವೆ. ಆದರೆ, ನಮೀಬಿಯಾದ ವಿಶ್ವಕಪ್ ಪಂದ್ಯಗಳು ನಡೆಯುವುದು ಯುಎಇಯ ಅಬುಧಾಬಿ ಮತ್ತು ಶಾರ್ಜಾದಲ್ಲಿ. ಇಲ್ಲಿನ ಪಿಚ್ಗಳು ಎಷ್ಟು ನಿಧಾನಗತಿಯದ್ದೆಂದು ಐಪಿಎಲ್ ಪಂದ್ಯಗಳೇ ತೋರಿಸಿಕೊಟ್ಟಿವೆ. ಕೀರಾನ್ ಪೊಲಾರ್ಡ್ ಅವರಂಥ ಬಿಗ್ ಹಿಟ್ಟರ್ಸ್ಗಳಿಂದಲೇ ಸಿಕ್ಸರ್ಗಳನ್ನ ಸಿಡಿಸಲು ಸಾಧ್ಯವಾಗಲಿಲ್ಲ. ಶಾರ್ಜಾ, ಅಬುಧಾಬಿಯ ಪಿಚ್ಗಳಲ್ಲಿ ನಮೀಬಿಯಾದ ಬ್ಯಾಟರ್ಸ್ ಹೇಗೆ ಬ್ಯಾಟ್ ಬೀಸಲಿದ್ದಾರೆ ಎಂಬುದನ್ನ ಹೇಳಲು ಸಾಧ್ಯವಾಗುವುದಿಲ್ಲ. ಇಲ್ಲಿ ನಡೆದ ಎರಡು ವಾರ್ಮಪ್ ಮ್ಯಾಚ್ಗಳನ್ನ ನಮೀಬಿಯಾ ಸೋತಿದೆ. ಓಮನ್ ವಿರುದ್ಧ ನಮೀಬಿಯಾ ಬ್ಯಾಟರ್ಸ್ ನಿರಾಸೆ ಮೂಡಿಸಿದರೆ, ಸ್ಕಾಟ್ಲೆಂಡ್ ವಿರುದ್ಧ ಸೋತರೂ ಬ್ಯಾಟಿಂಗ್ ತುಸು ಸಮಾಧಾನಕರವಾಗಿತ್ತು.
ಇದನ್ನೂ ಓದಿ: Hardik Pandya| ಕ್ರಿಕೆಟರ್ ಆಗದಿದ್ದರೆ ನಾನು ಪೆಟ್ರೋಲ್ ಪಂಪ್ನಲ್ಲಿ ಕೆಲಸ ಮಾಡುತ್ತಿದ್ದೆ; ಬಾಲ್ಯದ ಕಷ್ಟಗಳನ್ನು ನೆನೆದ ಹಾರ್ದಿಕ್ ಪಾಂಡ್ಯ!
ನಮೀಬಿಯಾ ತಂಡ: ಗೆರಾರ್ಡ್ ಎರಾಸ್ಮಸ್, ಜೋನಾಥನ್ ಸ್ಮಿಟ್, ಆಲ್ಬೀ ಮಾರ್ಕೆಲ್, ಸ್ಟೀಫನ್ ಬಾರ್ಡ್, ಕಾರ್ಲ್ ಬಿರ್ಕೆನ್ಸ್ಟಾಕ್, ಮಿಕಾವು ಡು ಪ್ರೀಜ್, ಜಾನ್ ಫ್ರೈಲಿಂಕ್, ಜೇನ್ ಗ್ರೀನ್, ಜೇನ್ ನಿಕೋಲ್ ಲಾಫ್ಟೀ-ಈಟನ್, ಬರ್ನಾರ್ಡ್ ಶೋಲ್ಜ್, ಬೆನ್ ಶಿಕಾಂಗೋ, ರುಬೆನ್ ಟ್ರಂಪೆಲ್ಮಾನ್, ಮಿಕೇಲ್ ವಾನ್ ಲೈಂಜೆನ್, ಡೇವಿಡ್ ವಿಯೆಸ್, ಕ್ರೆಗ್ ವಿಲಿಯಮ್ಸ್, ಪಿಕ್ಕಿ ಯಾ ಫ್ರಾನ್ಸ್.
ನಮೀಬಿಯಾದ ಪಂದ್ಯಗಳು:
ಅ. 18: ನಮೀಬಿಯಾ vs ಶ್ರೀಲಂಕಾ- ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಪಂದ್ಯ ಆರಂಭ.
ಅ. 20: ನಮೀಬಿಯಾ vs ನೆದರ್ಲ್ಯಾಂಡ್ಸ್- ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣ, ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭ.
ಅ. 22: ನಮೀಬಿಯಾ vs ಐರ್ಲೆಂಡ್- ಶಾರ್ಜಾದಲ್ಲಿ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ