Muttiah Muralitharan- ಟಿ20 ಕ್ರಿಕೆಟ್​ನಲ್ಲಿ ವಿಕೆಟ್ ಪಡೆಯುವ ಸೀಕ್ರೆಟ್ ತಂತ್ರ ತಿಳಿಸಿದ ಮುತ್ತಯ್ಯ ಮುರಳೀಧರನ್

Success Recipe for Spinners by Muttiah Muralitharan- ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಬೌಲರ್ ವಿಭಿನ್ನ ಮನಸ್ಥಿತಿಯಲ್ಲಿ ಮತ್ತು ಧೋರಣೆಯಲ್ಲಿ ಮತ್ತು ವಿಭಿನ್ನ ಗುರಿಯೊಂದಿಗೆ ಬೌಲಿಂಗ್ ಮಾಡಿದರೆ ಯಶಸ್ಸು ಸಾಧ್ಯ ಎಂದು ಮುರಳೀದರನ್ ತಿಳಿಸಿದ್ಧಾರೆ.

ಮುತ್ತಯ್ಯ ಮುರಳೀದರನ್

ಮುತ್ತಯ್ಯ ಮುರಳೀದರನ್

  • Share this:
    ಬೆಂಗಳೂರು: ಆರ್ ಅಶ್ವಿನ್ ಟಿ20 ಕ್ರಿಕೆಟ್​ಗೆ ಲಾಯಕ್ ಆದ ಬೌಲರ್ ಅಲ್ಲ ಎಂದು ಮೊನ್ನೆ ಸಂಜಯ್ ಮಂಜ್ರೇಕರ್ ಹೇಳಿಕೆ ಕೊಟ್ಟಿದ್ದರು. ಹಾಗಾದರೆ, ಟಿ20 ಕ್ರಿಕೆಟ್​ನಲ್ಲಿ ಸ್ಪಿನ್ನರ್ ಯಾವ ರೀತಿ ಬೌಲ್ ಮಾಡಬೇಕು? ಸದಾ ಹೊಡಿಬಡಿ ಅಬ್ಬರ ಇರುವ ಟಿ20 ಕ್ರಿಕೆಟ್​ನಲ್ಲಿ ಸ್ಪಿನ್ನರ್ ಯಶಸ್ಸು ಗಳಿಸಲು ಸಾಧ್ಯವಾ? ಇದು ಸಾಧ್ಯ ಎಂದು ಹಲವು ಸ್ಪಿನ್ನರ್​ಗಳು ತೋರಿಸಿಕೊಟ್ಟಿದ್ದಾರೆ. ಹಾಗಾದರೆ, ಟಿ20 ಕ್ರಿಕೆಟ್​ನಲ್ಲಿ ಕೆಲ ಸ್ಪಿನ್ನರ್​ಗಳು ಯಶಸ್ಸು ಕಾಣುತ್ತಿರುವ ಗುಟ್ಟೇನು? ಟಿ20 ಕ್ರಿಕೆಟ್​ನಲ್ಲಿ ಸಲ್ಲುವ ಕೆಲ ಬೌಲರ್​ಗಳು ಟೆಸ್ಟ್ ಕ್ರಿಕೆಟ್​ನಲ್ಲಿ ಯಾಕೆ ಸಲ್ಲುವುದಿಲ್ಲ? ಕೆಲವರು ಮೂರೂ ಮಾದರಿಯ ಕ್ರಿಕೆಟ್​ನಲ್ಲೂ ಒಳ್ಳೆಯ ಛಾಪು ಮೂಡಿಸಲು ಹೇಗೆ ಸಾಧ್ಯವಾಗುತ್ತಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಮುತ್ತಯ್ಯ ಮುರಳೀದರನ್ ಉತ್ತರ ಕೊಟ್ಟಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಒಬ್ಬ ಸ್ಪಿನ್ನರ್ ಯಾವ ಗುರಿಯೊಂದಿಗೆ ಬೌಲ್ ಮಾಡಬೇಕು ಎಂಬ ತಂತ್ರವನ್ನ ಅವರು ಹೇಳಿಕೊಟ್ಟಿದ್ದಾರೆ. ಐಸಿಸಿ ಟಿ20 ವಿಶ್ವಕಪ್​ಗೆ ಕೆಲವೇ ದಿನ ಬಾಕಿ ಇರುವಂತೆ ಮುತ್ತಯ್ಯ ಮುರಳೀದರನ್ ಅವರು ತಮ್ಮ ಒಂದು ಲೇಖನದಲ್ಲಿ ಈ ತಂತ್ರಗಾರಿಕೆ ಬಗ್ಗೆ ಬರೆದಿದ್ದಾರೆ.

    ಟಿ20 ಕ್ರಿಕೆಟ್​ನಲ್ಲಿ ರಕ್ಷಣೆಯೇ ಆಕ್ರಮಣ ಎಂಬುದು ಸ್ಪಿನ್ನರ್ಸ್​ಗೆ ಮಂತ್ರ:

    ಟಿ20 ಕ್ರಿಕೆಟ್​ನಲ್ಲಿ ಸ್ಪಿನ್ನರ್ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುವುದು ತಪ್ಪಾಗುತ್ತದೆ. ಇಲ್ಲಿ ರಕ್ಷಣಾತ್ಮಕವಾಗಿ ಬೌಲಿಂಗ್ ಮಾಡುವುದೇ ಸ್ಪಿನ್ನರ್ಸ್​ಗೆ ಬೆಸ್ಟ್ ಎಂಬುದು ಮುತ್ತಯ್ಯ ಮುರಳೀದರನ್ ಅವರ ಸಲಹೆ. “ಟಿ20 ಕ್ರಿಕೆಟ್​ನಲ್ಲಿ ರಕ್ಷಣಾತ್ಮಕವಾಗಿ ಬೌಲಿಂಗ್ ಮಾಡುವುದೇ ಆಕ್ರಮಣಕಾರಿ ಎಂಬುದು ನನ್ನ ಭಾವನೆ. ಒಂದು ಓವರ್​ನಲ್ಲಿ ಸರಾಸರಿ 6-6.5 ರನ್ ನೀಡುವ ಗುರಿ ಇಟ್ಟುಕೊಂಡು ಅದರಲ್ಲಿ ಯಶಸ್ವಿಯಾದರೆ ನಿಮಗೆ ಒಂದೆರಡು ವಿಕೆಟ್​ಗಳೂ ದಕ್ಕುತ್ತವೆ” ಎಂದು ವಿಶ್ವದ ಸರ್ವಶ್ರೇಷ್ಠ ಸ್ಪಿನ್ನರ್ಸ್ ಪೈಕಿ ಒಬ್ಬರಾಗಿರುವ ಮುರಳೀದರನ್ ತಿಳಿಸಿದ್ದಾರೆ.

    ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಕೀಳುವುದು ಗುರಿಯಾಗಿರಬೇಕು:

    ಟಿ20 ಕ್ರಿಕೆಟ್​ನಲ್ಲಿ ಎದುರಾಳಿ ಬ್ಯಾಟರ್ಸ್​ಗೆ ಹೆಚ್ಚು ರನ್ ಕೊಡದೇ ಇರುವುದು ಸರಿಯಾದ ಪ್ರಯತ್ನವಾದರೆ, ಟೆಸ್ಟ್ ಕ್ರಿಕೆಟ್​ನಲ್ಲಿ ವಿಕೆಟ್ ಪಡೆಯುವುದು ಸ್ಪಿನ್ ಬೌಲರ್​ಗೆ ಗುರಿಯಾಗಿರಬೇಕು ಎಂಬುದು ಮುರಳೀದರನ್ ಅನಿಸಿಕೆ. “ಟಿ20 ಕ್ರಿಕೆಟ್ ಆಡಿದ ಆಟಗಾರ ಹಾಗೂ ಕೋಚ್ ಆಗಿ ನನಗಿರುವ ಅನುಭವದಲ್ಲಿ ಟಿ20 ಕ್ರಿಕೆಟ್​ನಲ್ಲಿ ಸ್ಪಿನ್ ಬೌಲರ್ ಡಿಫೆನ್ಸಿವ್ ಆಗಿ ಆಡಬೇಕು. ಆದರೆ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ವಿಕೆಟ್​ಗಳನ್ನ ಪಡೆಯುವುದೇ ಬೌಲರ್​ನ ಗುರಿಯಾಗಿರಬೇಕು” ಎಂದು ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆವೀರ ಸಲಹೆ ನೀಡಿದ್ಧಾರೆ.

    ಇದನ್ನೂ ಓದಿ: Indian Cricket- ವಿಶ್ವಕಪ್ ನಂತರದ ಸರಣಿಯಲ್ಲಿ ಭಾರತ ತಂಡದಲ್ಲಿ ಇರಲ್ಲ ಕೊಹ್ಲಿ, ರೋಹಿತ್, ಬುಮ್ರಾ

    ಟಿ20 ಕ್ರಿಕೆಟ್​ನಲ್ಲಿ ಸ್ಪಿನ್ನರ್ಸ್ ಬಲಿಪಶುಗಳಲ್ಲ:

    ಟಿ20 ಕ್ರಿಕೆಟ್​ನಲ್ಲಿ ಬ್ಯಾಟಿಂಗ್ ಅಬ್ಬರಕ್ಕೆ ಸ್ಪಿನ್ ಬೌಲರ್​ಗಳು ಬಲಿಪಶುಗಳಾಗುತ್ತಿದ್ದಾರೆ ಎಂದು ಆರಂಭದಲ್ಲಿ ಇದ್ದ ಅಭಿಪ್ರಾಯ ಕೇವಲ ಕಾಲ್ಪನಿಕ ಎಂಬುದು ಈಗ ಸಾಬೀತಾಗಿದೆ ಎಂದಿದ್ದಾರೆ.

    “ಟಿ20 ಕ್ರಿಕೆಟ್ ಬಂದ ಆರಂಭದಲ್ಲಿ, ಸ್ಪಿನ್ನರ್​ಗಳು ಬ್ಯಾಟರ್ಸ್​ಗೆ ಸುಲಭ ತುತ್ತಾಗಬಹುದು ಎಂಬುದು ಬಹಳಷ್ಟು ಮಂದಿಯ ಅನಿಸಿಕೆಯಾಗಿತ್ತು. ಆದರೆ, ನೀವು ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದಷ್ಟೂ ಹೊಡೆಯಲು ಕಷ್ಟಕರ ಆಗುತ್ತದೆ ಎಂಬುದು ಈಗ ಸ್ಪಷ್ಟವಾಗಿದೆ… ಸ್ಪಿನ್ನರ್​ಗಳು ತಮ್ಮ ತಂಡದಲ್ಲಿ ಅತ್ಯಂತ ಪ್ರಮುಖ ಬೌಲರ್​ಗಳಾಗಿದ್ಧಾರೆ. ವೇಗದ ಬೌಲರ್​ಗಳೂ ಕೂಡ ನಿಧಾನದ ಎಸೆತಗಳಿಗೆ ಮೊರೆ ಹೋಗುತ್ತಿದ್ದಾರೆ. ಚೆಂಡು ಬ್ಯಾಟರ್​ನ ಬ್ಯಾಟ್​ಗೆ ನೇರವಾಗಿ ಹೋಗುವುದನ್ನು ತಪ್ಪಿಸುವ ಪ್ರಯತ್ನ ಈಗ ನಡೆಯುತ್ತಿದೆ” ಎಂದು ಮಾಜಿ ಲಂಕಾ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: R Ashwin- ಆರ್ ಅಶ್ವಿನ್ ಯಾವುದೇ ತಂಡಕ್ಕೂ ಅಗತ್ಯ ಇಲ್ಲದ ಟಿ20 ಬೌಲರ್: ಸಂಜಯ್ ಮಂಜ್ರೇಕರ್

    ದಾಖಲೆವೀರ ಮುತ್ತಯ್ಯ:

    49 ವರ್ಷದ ಮುತ್ತಯ್ಯ ಮುರಳೀದರನ್ ಅವರು ಅನೇಕ ವಿಶ್ವದಾಖಲೆಗಳ ಒಡೆಯರಾಗಿದ್ದಾರೆ. 1992ರಿಂದ 2011ರವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚಿದ ಅವರು ವಿಶ್ವದ ಅತ್ಯಂತ ಶ್ರೇಷ್ಠ ಬೌಲರ್ ಎನಿಸಿದ್ಧಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 800 ವಿಕೆಟ್ ಪಡೆದ ಏಕೈಕ ಬೌಲರ್, ಏಕದಿನ ಕ್ರಿಕೆಟ್​ನಲ್ಲಿ 530ಕ್ಕೂ ಹೆಚ್ಚು ವಿಕೆಟ್ ಪಡೆದ ಏಕೈಕ ಬೌಲರ್ ಅವರಾಗಿದ್ಧಾರೆ. ಮೂರೂ ಮಾದರಿಯ ಕ್ರಿಕೆಟ್ ಸೇರಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಅವರು. ಅವರ ಈ ದಾಖಲೆಯನ್ನ ಸರಿಗಟ್ಟುವ ಬೌಲರ್ ಸದ್ಯ ವಿಶ್ವದಲ್ಲಿ ಯಾರೂ ಇದ್ದಂತಿಲ್ಲ. ಅತಿ ಹೆಚ್ಚು ವಿಕೆಟ್​ಗಳ ಗರಿ ಅಷ್ಟೇ ಅಲ್ಲ, ಇನ್ನೂ ಲೆಕ್ಕವಿಲ್ಲದಷ್ಟು ಹಲವು ದಾಖಲೆಗಳು ಮುತ್ತಯ್ಯ ಮುರಳೀದರನ್ ಹೆಸರಿನಲ್ಲಿವೆ. ಇವರ ಬೌಲಿಂಗ್ ಆ್ಯಕ್ಷನ್ ವಿಚಾರದಲ್ಲಿ ವಿವಾದ ಆಗಿದ್ದು ಬಿಟ್ಟರೆ ಮುರಳೀದರನ್ ವೃತ್ತಿಜೀವನ ಅಪ್ರತಿಮವಾದುದು.
    Published by:Vijayasarthy SN
    First published: