ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ
ಭಾರತ ತೀವ್ರ ಮುಖಭಂಗ ಅನುಭವಿಸಿತು. ಪಾಕಿಸ್ತಾನದ ವಿರುದ್ಧ ಪಂದ್ಯ ಸೋತಿದ್ದಕ್ಕಿಂತ ಹೆಚ್ಚಾಗಿ
ಹೀನಾಯವಾಗಿ ಸೋತಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳು ಆಕ್ರೋಶಗೊಂಡಿದ್ಧಾರೆ. ಭಾರತವನ್ನು 10 ವಿಕೆಟ್ಗಳಿಂದ ಸೋಲಿಸಿದ ಬಳಿಕ
ಪಾಕಿಸ್ತಾನ ತಂಡಕ್ಕೆ ರಾಜಮರ್ಯಾದೆ ಸಿಗುತ್ತಿದೆ. ಇದೇ ವೇಳೆ, ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ. ಪಂದ್ಯಕ್ಕೆ ಮುನ್ನ ಭಾರತ ತಂಡ ಅಭ್ಯಾಸ ನಡೆಸುತ್ತಿದ್ದ ಸ್ಥಳದಲ್ಲಿ ಪಾಕ್ ಅಭಿಮಾನಿಯೊಬ್ಬಳು
ಎಂಎಸ್ ಧೋನಿ ಮತ್ತು
ಕೆಎಲ್ ರಾಹುಲ್ ಅವರಿಗೆ ಈ ಪಂದ್ಯವನ್ನ ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕೆಂದು ಕೇಳಿಕೊಳ್ಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಕಾಕತಾಳೀಯವೆಂಬಂತೆ ಭಾರತ ಈ ಪಂದ್ಯವನ್ನ ತಾನೇ ಕೈಯ್ಯಾರೆ ಪಾಕಿಸ್ತಾನಕ್ಕೆ ಇಟ್ಟಂತಿತ್ತು. ಇನ್ನು, ಮಹೇಂದ್ರ ಸಿಂಗ್ ಧೋನಿ ಅವರ ಐದು ವರ್ಷ ಹಿಂದಿನ ಹೇಳಿಕೆಯೊಂದರ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಭಾರತ ಮತ್ತು ಪಾಕಿಸ್ತಾನ ಪಂದ್ಯದ ಕುರಿತು ಮಾತನಾಡಿದ್ದರು. ಅವರ ಮಾತು ಈಗ ನಿಜವಾಗಿದೆ.
ಎಂಎಸ್ ಧೋನಿ ಏನು ಹೇಳಿದ್ದರು ಈ ವಿಡಿಯೋದಲ್ಲಿ?: ಅದು 2016ರ ಟಿ20 ವಿಶ್ವಕಪ್. ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮುನ್ನ ತಂಡದ ಕ್ಯಾಪ್ಟನ್ ಎಂಎಸ್ ಧೋನಿ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭ. ಆಗ ವಿಶ್ವಕಪ್ಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿನ ಓಟ 11-0 ಇತ್ತು. ಪಂದ್ಯದ ಬಳಿಕ ಅದು 12-0 ಆಯಿತು. ಆದರೆ, ಪಂದ್ಯಕ್ಕೆ ಮುನ್ನ ಪತ್ರಕರ್ತರು ಎಂಎಸ್ ಧೋನಿಗೆ ಕೇಳಿದ್ದು ಒಂದು ಪ್ರಮುಖ ಪ್ರಶ್ನೆ ಎಂದರೆ ಪಾಕಿಸ್ತಾನ ವಿರುದ್ಧ ಭಾರತ ಯಾಕೆ ಸೋಲೋದಿಲ್ಲ ಎಂಬುದು. ಅದಕ್ಕೆ ಎಂಎಸ್ ಧೋನಿ ಕೊಟ್ಟ ಉತ್ತರ ಈ ವೈರಲ್ ವಿಡಿಯೋದಲ್ಲಿದೆ.
“ಪಾಕಿಸ್ತಾನ ವಿರುದ್ಧ ನಾವು 11-0 ಯಿಂದ ಮುಂದಿದ್ದೇವೆ ಎಂದು ನೀವು ಹೆಮ್ಮೆ ಪಡುತ್ತಿರಬಹುದು. ಆದರೆ ವಾಸ್ತವ ಏನೆಂದರೆ ನಾವು ಯಾವತ್ತಿದ್ದರೂ ಸೋಲಬೇಕು. ಈ ವಾಸ್ತವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇವತ್ತು ಸೋಲಬಹುದು, ಇಲ್ಲ ಹತ್ತು ವರ್ಷ ಬಳಿಕ 20 ವರ್ಷ ಬಳಿಕ ಅಥವಾ 50 ವರ್ಷ ಬಳಿಕವಾದರೂ ಭಾರತ ಸೋಲಬೇಕು. ಭಾರತ ಯಾವಾಗಲೂ ಗೆಲ್ಲಲು ಸಾಧ್ಯ ಆಗುವುದಿಲ್ಲ” ಎಂದು ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದರು. ಆದರೆ, ಅಂದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಪಾಕಿಸ್ತಾನ ವಿರುದ್ಧ ಭಾರತ ಸೋಲುವುದು ಅನಿವಾರ್ಯ ಎಂದು ಎಂಎಸ್ ಧೋನಿ ಹೇಳಿದ ಆ ಮಾತು ಈಗ ಐದು ವರ್ಷಗಳ ಬಳಿಕ ನಿಜವಾಗಿದೆ.
ಇದನ್ನೂ ಓದಿ: Virat Kohli- ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಭಾರತದ ಹೀನಾಯ ಸಾಧನೆಗಳಿವು
ಭರ್ಜರಿ ಗೆಲುವು ಪಡೆದ್ದು ಹೀಗೆ:
ನಿನ್ನೆ ನಡೆದ ಪಂದ್ಯದಲ್ಲಿ ಭಾರತವನ್ನು 10 ವಿಕೆಟ್ಗಳಿಂದ ಪಾಕಿಸ್ತಾನ ಪರಾಭವಗೊಳಿಸಿತು. ಇದು ವಿಶ್ವಕಪ್ ಇತಿಹಾಸದಲ್ಲಿ ಭಾರತ ವಿರುದ್ಧ
ಪಾಕಿಸ್ತಾನಕ್ಕೆ ಸಿಕ್ಕ ಮೊದಲ ಗೆಲುವಾಗಿದೆ. ಗೆಲ್ಲಲು 152 ರನ್ ಗುರಿಯನ್ನ ಪಾಕಿಸ್ತಾನ ಒಂದೂ ವಿಕೆಟ್ ನಷ್ಟ ಇಲ್ಲದೇ ಸುಲಭವಾಗಿ ಗುರಿ ಮುಟ್ಟಿತು. ಶಾಹೀನ್ ಅಫ್ರಿದಿ ಮತ್ತು ಪಾಕಿಸ್ತಾನದ ಓಪನಿಂಗ್ ಬ್ಯಾಟರ್ಸ್ ಈ ಗೆಲುವಿನ ರೂವಾರಿ ಎನಿಸಿದರು.
ಒಳ್ಳೆಯ ಫಾರ್ಮ್ನಲ್ಲಿದ್ದ ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಬೇಗನೇ ಔಟಾಗಿದ್ದು ಭಾರತಕ್ಕೆ ಆರಂಭದಲ್ಲೇ ಹೊಡೆತ ಕೊಟ್ಟಿದ್ದು. ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ತಂಡದ ಇನ್ನಿಂಗ್ಸ್ಗೆ ಚೇತರಿಕೆ ಕೊಟ್ಟರಾದರೂ ನಿರೀಕ್ಷಿತ ವೇಗ ಸಿಗಲಿಲ್ಲ. ಕನಿಷ್ಠ 170 ರನ್ ಗಳಿಸುವ ಗುರಿ ಇಟ್ಟುಕೊಂಡಿದ್ದ ಟೀಮ್ ಇಂಡಿಯಾಗೆ 20 ರನ್ಗಳ ಕೊರತೆ ಬಿದ್ದಿತು. ಆದರೆ, ಪಾಕಿಸ್ತಾನದ ಆರಂಭಿಕ ಬ್ಯಾಟುಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಪಾಕ್ ಗೆಲುವಿನ ಹಾದಿಯನ್ನ ಬಹಳ ಸಲೀಸುಗೊಳಿಸಿದರು. ಲೀಲಾಜಾಲವಾಗಿ ಭಾರತೀಯ ಬೌಲರ್ಗಳನ್ನ ಎದುರಿಸಿ 13 ಎಸೆತ ಇರುವಂತೆಯೇ ಗೆಲುವಿನ ದಡ ಮುಟ್ಟಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ