Ind vs Aus: ಪಂದ್ಯದ ಚಿತ್ರಣ ಬದಲಿಸಿದ ಸೂಪರ್ ಮ್ಯಾನ್ ಕ್ಯಾಚ್

ಮೊದಲ ಪಂದ್ಯವನ್ನು 66 ರನ್​ಗಳಿಂದ ಗೆದ್ದುಕೊಂಡಿದ್ದ ಆಸ್ಟ್ರೇಲಿಯಾ, 2ನೇ ಪಂದ್ಯದಲ್ಲಿ 51 ರನ್​ ಅಂತರದಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಏಕದಿನ ಪಂದ್ಯಗಳ ಸರಣಿಯನ್ನು ಫಿಂಚ್ ಪಡೆ ತನ್ನದಾಗಿಸಿಕೊಂಡಿದೆ.

IND vs AUS

IND vs AUS

 • Share this:
  ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ 2ನೇ ಏಕದಿನ ಪಂದ್ಯದಲ್ಲಿ ಫಿಂಚ್ ಪಡೆ 51 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಮುನ್ನಡೆಯೊಂದಿಗೆ ಸರಣಿ ಕೈವಶಪಡಿಸಿಕೊಂಡಿದೆ. ಆದರೆ ಒಂದು ಹಂತದಲ್ಲಿ ಟೀಮ್ ಇಂಡಿಯಾ ಜಿದ್ದಾಜಿದ್ದಿನ ಹೋರಾಟದ ಸೂಚನೆ ನೀಡಿತ್ತು. 35ನೇ ಓವರ್​ ವೇಳೆಗೆ ಭಾರತ ತಂಡ 225 ರನ್ ಕಲೆಹಾಕಿತ್ತು.

  ಈ ಹಂತದಲ್ಲಿ ಭಾರತಕ್ಕೆ ಗೆಲ್ಲಲು ಬೇಕಾಗಿದ್ದದ್ದು 90 ಎಸೆತಗಳಲ್ಲಿ 165 ರನ್​ಗಳು. ಕ್ರೀಸ್​ನಲ್ಲಿ ಇದ್ದದ್ದು ರನ್ ಮಿಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಹಾಗೂ ಸ್ಪೋಟಕ ದಾಂಡಿಗ ಕೆಎಲ್ ರಾಹುಲ್. ಹೀಗಾಗಿ ಅತ್ತ ಆಸ್ಟ್ರೇಲಿಯಾ ಬೌಲರುಗಳು ಕೂಡ ಭಯಭೀತರಾಗಿದ್ದರು. ಅದರಲ್ಲೂ ಕೊಹ್ಲಿ ಅದಾಗಲೇ 2 ಸಿಕ್ಸ್, 7 ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.

  ಆದರೆ 35ನೇ ಓವರ್​ ಎಸೆದ ಜೋಶ್ ಹ್ಯಾಝಲ್​ವುಡ್​ಗೆ ಭರ್ಜರಿ ಮರುತ್ತರ ನೀಡಲು ಕೊಹ್ಲಿ ಮುಂದಾಗಿದ್ದರು. 5ನೇ ಎಸೆತದಲ್ಲಿ ಕೊಹ್ಲಿ ಬ್ಯಾಟ್​ನಿಂದ ಮಿಡ್​ ಆನ್​ನತ್ತ ಸ್ಪೋಟಕ ಹೊಡೆತ ಮೂಡಿಬಂತು. ಆದರೆ ಅಲ್ಲೇ ಫೀಲ್ಡಿಂಗ್​ನಲ್ಲಿದ್ದ ಮೊಯಿಸೆಸ್ ಹೆನ್ರಿಕ್ಸ್​ ಸೂಪರ್ ಮ್ಯಾನ್ ರೀತಿಯಲ್ಲಿ ಜಿಗಿದು ಚೆಂಡನ್ನು ಕೈಯಲ್ಲಿ ಬಂಧಿಸಿದರು. ಹೆನ್ರಿಕ್ಸ್​ ಹಿಡಿದ ಈ ಅದ್ಭುತ ಕ್ಯಾಚ್​ನೊಂದಿಗೆ ಆಸ್ಟ್ರೇಲಿಯಾ ಬೌಲರುಗಳು ನಿಟ್ಟುಸಿರು ಬಿಟ್ಟರು.

  ಇದರೊಂದಿಗೆ 87 ಎಸೆತಗಳಲ್ಲಿ 89 ರನ್ ಸಿಡಿಸಿ ಮತ್ತೊಂದು ಶತಕದತ್ತ ಮುನ್ನುಗ್ಗಿದ ಕೊಹ್ಲಿಯ ಇನಿಂಗ್ಸ್ ಅಂತ್ಯಗೊಂಡಿತು. ಅತ್ತ ಕೆಲವೊತ್ತು ಏಕಾಂಗಿಯಾಗಿ ಹೋರಾಟ ನಡೆಸಿದ ಕೆಎಲ್ ರಾಹುಲ್ 66 ಎಸೆತಗಳಲ್ಲಿ 76 ರನ್ ಬಾರಿಸಿ ಪೆವೆಲಿಯನ್ ಕಡೆ ಮುಖ ಮಾಡಿದರು. ಇನ್ನು ಕಳೆದ ಪಂದ್ಯದಲ್ಲಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಟೀಮ್ ಇಂಡಿಯಾ ಸೋಲು ಖಚಿತವಾಯಿತು.

  2013 ರಲ್ಲಿ ಆಸ್ಟ್ರೇಲಿಯಾ ನೀಡಿದ 359 ರನ್​ಗಳನ್ನು ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕದೊಂದಿಗೆ ಚೇಸ್ ಮಾಡಿತ್ತು. ಈ ಪಂದ್ಯದಲ್ಲಿ ಕೇವಲ 52 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 7 ಸಿಕ್ಸ್, 8 ಬೌಂಡರಿಗಳೊಂದಿಗೆ 100 ರನ್ ಬಾರಿಸಿದ್ದರು. ಇದೇ ಮ್ಯಾಜಿಕ್ ಪುನರಾವರ್ತನೆಯಾಗಲಿದೆ ಎಂದುಕೊಂಡಿದ್ದ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಹೆನ್ರಿಕ್ಸ್ ಶಾಕ್ ನೀಡಿದ್ದರು.  ಮೊದಲ ಪಂದ್ಯವನ್ನು 66 ರನ್​ಗಳಿಂದ ಗೆದ್ದುಕೊಂಡಿದ್ದ ಆಸ್ಟ್ರೇಲಿಯಾ, 2ನೇ ಪಂದ್ಯದಲ್ಲಿ 51 ರನ್​ ಅಂತರದಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಏಕದಿನ ಪಂದ್ಯಗಳ ಸರಣಿಯನ್ನು ಫಿಂಚ್ ಪಡೆ ತನ್ನದಾಗಿಸಿಕೊಂಡಿದೆ.

  ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
  Published by:zahir
  First published: