ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಕಮಾಲ್ ಮಾಡಿದ್ದಾರೆ. 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೇವಲ 1 ವಿಕೆಟ್ ಉರುಳಿಸಿದ್ದ ಸಿರಾಜ್, ಎರಡನೇ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಪಾಲಿಗೆ ಕಂಟಕವಾಗಿ ಪರಿಣಮಿಸಿದರು. ನಿರ್ಣಾಯಕ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 19.5 ಓವರ್ ಬೌಲಿಂಗ್ ಮಾಡಿದ ಸಿರಾಜ್ 73 ರನ್ ನೀಡಿದ ಚೊಚ್ಚಲ 5 ವಿಕೆಟ್ಗಳನ್ನು ಕಬಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ 3 ಪಂದ್ಯಗಳಿಂದ 13 ವಿಕೆಟ್ಗಳನ್ನು ಕಬಳಿಸಿದ ವಿಶೇಷ ದಾಖಲೆ ಬರೆದರು.
ಹೌದು, ಮೊದಲ ಟೆಸ್ಟ್ ಸರಣಿ ಆಡುತ್ತಿರುವ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಸರಣಿಯಲ್ಲೇ ಅತೀ ಹೆಚ್ಚು ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಕಾಂಗರೂ ನಾಡಿನಲ್ಲಿ ಟೆಸ್ಟ್ ಸರಣಿಗೆ ಪಾದಾರ್ಪಣೆ ಮಾಡಿ ಅತೀ ವಿಕೆಟ್ ಉರುಳಿಸಿದ ದಾಖಲೆ ಇದುವರೆಗೆ ಜಾವಗಲ್ ಶ್ರೀನಾಥ್ ಅವರ ಹೆಸರಿನಲ್ಲಿತ್ತು.
1991-92ರಲ್ಲಿ ಆಸೀಸ್ ನೆಲದಲ್ಲಿ ಪಾದಾರ್ಪಣೆ ಮಾಡಿದ್ದ ಜಾವಗಲ್ ಶ್ರೀನಾಥ್ ಆ ಸರಣಿಯಲ್ಲಿ 10 ವಿಕೆಟ್ ಪಡೆದು ಮಿಂಚಿದ್ದರು. ಇದೀಗ 29 ವರ್ಷಗಳ ಬಳಿಕ ಶ್ರೀನಾಥ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮೊಹಮ್ಮದ್ ಸಿರಾಜ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2ನೇ ಮತ್ತು 3ನೇ ಟೆಸ್ಟ್ ಪಂದ್ಯಗಳಿಂದ 7 ವಿಕೆಟ್ ಕಬಳಿಸಿದ್ದ ಟೀಮ್ ಇಂಡಿಯಾ ವೇಗಿ, 4ನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಉರುಳಿಸಿದರು. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಾದಾರ್ಪಣೆ ಮಾಡಿದ ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ಬೌಲರ್ ಎಂಬ ದಾಖಲೆಯನ್ನು ಸಿರಾಜ್ ನಿರ್ಮಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ