ಆಸ್ಟ್ರೇಲಿಯಾದಲ್ಲಿ ಭಾರತೀಯ ಆಟಗಾರರ ಮೇಲೆ ಜನಾಂಗೀಯ ನಿಂದನೆ ಮುಂದುವರೆದಿದೆ. 3ನೇ ಟೆಸ್ಟ್ ಪಂದ್ಯದ ವೇಳೆ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ನಿಂದಿಸಲಾಗಿತ್ತು. ಇದೀಗ 4ನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾದ ಕೆಲ ಆಟಗಾರರನ್ನು ಗುರಿಯಾಗಿ ಪ್ರೇಕ್ಷಕರು ನಿಂದಿಸಿದ್ದಾರೆ ಎಂದು ವರದಿಯಾಗಿದೆ.
ಬ್ರಿಸ್ಬೇನ್ ಗಾಬ್ಬಾ ಮೈದಾನದಲ್ಲಿ ಶುಕ್ರವಾರ 4ನೇ ಟೆಸ್ಟ್ ಶುರುವಾಗಿದ್ದು, ಇದೇ ವೇಳೆ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಾಷಿಂಗ್ಟನ್ ಸುಂದರ್ ಹಾಗೂ ಮೊಹಮ್ಮದ್ ಸಿರಾಜ್ ಅವರು ನಿಂದನೆಗೆ ಒಳಗಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಿಡ್ನಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ಆಟಗಾರರು ನಿಂದನೆಗೆ ಗುರಿಯಾದ ಬಗ್ಗೆ ದೂರುಗಳನ್ನು ದಾಖಲಿಸಿದ್ದರು. ಅಲ್ಲದೆ ಈ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ಹಾಗೂ ಐಸಿಸಿ ಪ್ರತ್ಯೇಕವಾಗಿ ತನಿಖೆ ನಡೆಸುವುದಾಗಿ ತಿಳಿಸಿತ್ತು.
ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಮೊದಲ ದಿನ ಸಿರಾಜ್ ಹಾಗೂ ವಾಷಿಂಗ್ಟನ್ ಸುಂದರ್ ಅವರನ್ನು ಆಸ್ಟ್ರೇಲಿಯಾ ಪ್ರೇಕ್ಷಕರು ಹುಳುಗಳೆಂದು ನಿಂದಿಸುತ್ತಿದ್ದರು. ಅಲ್ಲದೆ ನಿಂದನೆಯ ಸಾಹಿತ್ಯದ ಹಾಡುಗಳನ್ನು ಹಾಡುತ್ತಾ ಭಾರತದ ಆಟಗಾರರನ್ನು ಗುರಿಯಾಗಿಸುತ್ತಿದ್ದರು. ಆದರೆ, ಭಾರತದ ಯಾವುದೇ ಆಟಗಾರರು ಪ್ರೇಕ್ಷಕರ ನಿಂದನೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರೊಬ್ಬರು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನು ಇದೇ ಸಂಬಂಧ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಸಿರಾಜ್ ಅವರನ್ನು ನಿಂದಿಸುತ್ತಿರುವುದು ಕೂಡ ಸ್ಪಷ್ಟವಾಗಿ ಕೇಳಿಸುತ್ತದೆ. ಹಾಗೆಯೇ 3ನೇ ಟೆಸ್ಟ್ ಪಂದ್ಯದ ವೇಳೆ ಕೇಳಿ ಬಂದ ನಿಂದನೆಗಳು 4ನೇ ಟೆಸ್ಟ್ನಲ್ಲೂ ಮರುಕಳಿಸಿದ್ದರಿಂದ ಆಸ್ಟ್ರೇಲಿಯಾ ಪ್ರೇಕ್ಷಕರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
— pant shirt fc (@pant_fc) January 15, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ