ನವದೆಹಲಿ, ಜ. 19: ಟಿ20 ವಿಶ್ವಕಪ್ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ ಅತ್ಯಂತ ಹೀನಾಯವಾಗಿ ಸೋತಿತ್ತು. ಯಾವುದೇ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ವಿರುದ್ಧ ಪಾಕಿಸ್ಥಾನ ಗೆದ್ದದ್ದು ಅದೇ ಮೊದಲು. ದುಬೈನಲ್ಲಿ ನಡೆದ ಆ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್ಗಳಿಂದ ಜಯಭೇರಿ ಭಾರಿಸಿತ್ತು. ಭಾರತ ಎಲ್ಲಾ ವಿಭಾಗದಲ್ಲೂ ಸೋತು ಸುಣ್ಣವಾಗಿತ್ತು. ವಿರಾಟ್ ಕೊಹ್ಲಿ ಮತ್ತು ತಕ್ಕಮಟ್ಟಿಗೆ ರಿಷಭ್ ಪಂತ್ ಬಿಟ್ಟರೆ ಉಳಿದ ಬ್ಯಾಟುಗಾರರು ತರಗೆಲೆಗಳಂತೆ ಉದುರಿಹೋಗಿದ್ದರು. ಭಾರತೀಯ ಬೌಲರ್ಸ್ಗೆ ಒಂದೂ ವಿಕೆಟ್ ದಕ್ಕಲಿಲ್ಲ. ಅಂದು ಅನುಭವಿಸಿದ ಹೀನಾಯ ಸೋಲು ಭಾರತ ತಂಡವನ್ನು ಮಾನಸಿಕವಾಗಿ ದುರ್ಬಲಗೊಳಿಸಿತ್ತು. ನ್ಯೂಜಿಲೆಂಡ್ ವಿರುದ್ಧದ ತನ್ನ ಮುಂದಿನ ಪಂದ್ಯದಲ್ಲೂ ಭಾರತೀಯರ ದುರ್ಬಲ ಪ್ರದರ್ಶನ ಮುಂದುವರಿದಿತ್ತು. ಅದಾದ ಬಳಿಕ ಭಾರತ ಸತತವಾಗಿ ಮೂರು ಪಂದ್ಯಗಳನ್ನ ಗೆದ್ದರೂ ಪ್ಲೇ ಆಫ್ ಪ್ರವೇಶ ಸಾಧ್ಯವಾಗಲಿಲ್ಲ.
ಪಾಕಿಸ್ತಾನದ ಅಂದಿನ ಗೆಲುವಿನ ರೂವಾರಿಗಳಲ್ಲಿ ಮೊಹಮ್ಮದ್ ರಿಜ್ವಾನ್ ಕೂಡ ಒಬ್ಬರು. ವಿಕೆಟ್ ಕೀಪರ್ ಬ್ಯಾಟರ್ ಆದ ಅವರು ಆ ಪಂದ್ಯದಲ್ಲಿ ಅಜೇಯ 79 ರನ್ ಗಳಿಸಿ ಪಾಕಿಸ್ತಾನಕ್ಕೆ ನಿರಾಯಾಸ ಗೆಲುವಿಗೆ ಕಾರಣರಾಗಿದ್ದರು. ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಓವರ್ನಲ್ಲೇ ಶಾಹೀನ್ ಅಫ್ರಿದಿ ಅವರಿಗೆ ಒಂದು ವಿಕೆಟ್ ಕಳೆದುಕೊಂಡಿತು. ಅಲ್ಲಿಂದ ಚೇತರಿಸಿಕೊಳ್ಳಲೇ ಇಲ್ಲ. ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಇನ್ನಿಂಗ್ಸ್ ಮಾತ್ರ ಭಾರತಕ್ಕೆ ಚೇತರಿಕೆ ತಂದುಕೊಡಲು ಆಶಾಕಿರಣವಾಗಿತ್ತು. ಅವರಿಬ್ಬರು ಬ್ಯಾಟ್ ಮಾಡುವಾಗ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಮೊಹಮ್ಮದ್ ರಿಜ್ವಾನ್ ಅವರು ಆ ಸಂದರ್ಭದ ಕೆಲ ಕ್ಷಣಗಳನ್ನ ಮೆಲುಕು ಹಾಕಿದ್ದಾರೆ.
ಪಾಕಿಸ್ತಾನದ ಖಾಸಗಿ ಟಿವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮೊಹಮ್ಮದ್ ರಿಜ್ವಾನ್, ಅಂದಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಜೊತೆಗೆ ನಡೆದ ಸಂಭಾಷಣೆಗಳನ್ನ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: Unmukt Chand: ಆಸ್ಟ್ರೇಲಿಯಾದ ಬಿಬಿಎಲ್ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರ ಉನ್ಮುಕ್ತ್ ಚಂದ್
ರಿಷಭ್ ಪಂತ್ ಅವರು ರಿವರ್ಸ್ ಸ್ವೀಪ್ ಮಾಡಲು ಹೋಗಿ ಚೆಂಡು ಮಿಸ್ ಆಗಿ ಅವರ ಪ್ಯಾಡ್ಗೆ ಬಡಿದಿತ್ತು. ಆಗ ಅಂಪೈರ್ ಔಟ್ ಕೊಡಲಿಲ್ಲ. ಪಾಕಿಸ್ತಾನದ ಆಟಗಾರರು ರಿವ್ಯೂಗೆ ಅಪೀಲ್ ಮಾಡಿದರು. ಆಗ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತೆಂದು ರಿಜ್ವಾನ್ ಈ ರೀತಿ ವಿವರಿಸುತ್ತಾರೆ:
“ಕೆಲ ವಿಚಾರಗಳು ತಂತ್ರಗಳ ಭಾಗವಾಗಿರುತ್ತವೆ. ವಿರಾಟ್ ಕೊಹ್ಲಿ ವಿಶ್ವದ ನಂಬರ್ ಒನ್ ಕ್ರಿಕೆಟಿಗ ಎನ್ನುವುದರಲ್ಲಿ ಅನುಮಾನ ಇಲ್ಲ. ನಾವು ಕ್ರಿಕೆಟ್ ಆಡುವಾಗ ಒಂದು ಕುಟುಂಬದಂತೆ ಇರುತ್ತೇವೆ. ಪಂತ್ ರಿವರ್ಸ್ ಸ್ವೀಪ್ ಮಾಡಿದಾಗ ನಾವು ರಿವ್ಯೂಗೆ ಹೋದೆವು. ಆಗ ಕೊಹ್ಲಿ, ‘ಏನು ಮಾಡ್ತಾ ಇದೀರಿ? 10 ಓವರ್ವೊಳಗೆ ಎಲ್ಲರನ್ನೂ ಔಟ್ ಮಾಡಬೇಕೆಂದಿದ್ದೀರಾ’ ಅಂತ ಮಾರ್ಮಿಕವಾಗಿ ಹೇಳಿದರು” ಎಂದು ಮೊಹಮ್ಮದ್ ರಿಜ್ವಾನ್ ಹೇಳಿದ್ಧಾರೆ.
“ಆಗಲೇ ಹೇಳಿದಂತೆ ಇದೆಲ್ಲಾ ತಂತ್ರಗಳು. ನಂತರ ನಾವು ಬ್ಯಾಟ್ ಮಾಡಲು ಹೋದಾಗ ವಿರಾಟ್ ಕೊಹ್ಲಿ ಜೊತೆ ಮಾತನಾಡಿದೆ. ಅದೇನೇ ಇರಲಿ, ಚೇಂಜ್ ರೂಮ್ನಲ್ಲಿ ಏನೇನು ಸಂವಾದ ನಡೆದವೋ ಅದೆಲ್ಲವನ್ನೂ ನಾನು ಬಹಿರಂಗಪಡಿಸಲು ಆಗುವುದಿಲ್ಲ. ಆದರೆ, ವಿರಾಟ್ ಕೊಹ್ಲಿ ಒಳ್ಳೆಯ ವ್ಯಕ್ತಿತ್ವದವರು ಎಂದು ಮಾತ್ರ ಹೇಳಬಲ್ಲೆ” ಎಂದು ರಿಜ್ವಾನ್ ಅಭಿಪ್ರಾಯಪಟ್ಟಿದ್ಧಾರೆ.
ಇದನ್ನೂ ಓದಿ: IPL 2022: ಆರ್ಸಿಬಿ, ಅಹ್ಮದಾಬಾದ್ ತಂಡಗಳಿಗೆ ಅಯ್ಯರ್, ಹಾರ್ದಿಕ್ ಕ್ಯಾಪ್ಟನ್ಸ್?
ಸಚಿನ್ ಎಂದರೆ ರಿಜ್ವಾನ್ಗೆ ಇಷ್ಟ
“ಆಟವನ್ನು ಉತ್ತಮಗೊಳಿಸುವುದರತ್ತಲೇ ನನ್ನ ಎಲ್ಲಾ ಗಮನ. ಮೊದಮೊದಲು ನನಗೆ ಸಚಿನ್ ತೆಂಡೂಲ್ಕರ್ ಅವರೇ ಮಾದರಿ ಆಗಿದ್ದರು. ನಂತರ ಎಬಿ ಡೀವಿಲಿಯರ್ಸ್ ಅಂದರೆ ಇಷ್ಟ. ಹಾಗಂತ ಅವರನ್ನ ನಾನು ನಕಲು ಮಾಡುವುದಿಲ್ಲ. ಅವರು ಆಡುವುದನ್ನು ನೋಡಿಯೇ ನಾನು ಸಾಕಷ್ಟು ಕಲಿತಿದ್ದೇನೆ. ಪಾಕಿಸ್ತಾನದ ಕ್ರಿಕೆಟಿಗರ ವಿಚರಕ್ಕೆ ಬಂದರೆ ನಾನು ಮಿಸ್ಬಾ ಉಲ್ ಹಕ್, ಶೋಯಬ್ ಮಲಿಕ್, ಮೊಹಮ್ಮದ್ ಹಫೀಜ್ ಮೊದಲಾದವರಿಂದಲೂ ಬಹಳ ಕಲಿತಿದ್ದೇನೆ” ಎಂದು ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ತಿಳಿಸಿದ್ಧಾರೆ.
ಮಾಹಿತಿ ಕೃಪೆ: CricTracker ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ