ICC: ಮ್ಯಾಚ್ ಫಿಕ್ಸಿಂಗ್: ಇಬ್ಬರು ಆಟಗಾರರಿಗೆ 8 ವರ್ಷಗಳ ನಿಷೇಧ..!

ಇದಾಗ್ಯೂ ಇಬ್ಬರೂ ಭ್ರಷ್ಟಾಚಾರದ ಹಾದಿಯನ್ನು ಆರಿಸಿಕೊಂಡರು. ಇಬ್ಬರೂ ತಮ್ಮ ಸ್ಥಾನಗಳಿಗೆ, ತಮ್ಮ ತಂಡದ ಆಟಗಾರರಿಗೆ ಮತ್ತು ಕ್ರಿಕೆಟ್‌ ಪ್ರೇಮಿಗಳಿಗೆ ದ್ರೋಹ ಮಾಡಿದ್ದಾರೆ.

uae cricketers

uae cricketers

 • Share this:
  ಟಿ20 ವಿಶ್ವಕಪ್​ಗಾಗಿ ನಡೆದ ಅರ್ಹತಾ ಪಂದ್ಯದಲ್ಲಿ ಫಿಕ್ಸಿಂಗ್ ಆರೋಪದ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ (ಐಸಿಸಿ) ಇಬ್ಬರು ಆಟಗಾರರಿಗೆ 8 ವರ್ಷಗಳ ನಿಷೇಧ ಹೇರಿದೆ. ಯುಎಇ ಪರ ಆಡಿದ್ದ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಭಟ್ ನಿಷೇಧಕ್ಕೊಳಗಾದ ಆಟಗಾರರು. 2019ರಲ್ಲಿ ಯುಎಇಯಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಪಂದ್ಯದ ವೇಳೆ ನವೀದ್ ಹಾಗೂ ಅನ್ವರ್ ಭಟ್ ಫಿಕ್ಸಿಂಗ್​ಗೆ ಯತ್ನಿಸಿದ್ದರು.

  ಐಸಿಸಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿದ್ದ ಇಬ್ಬರೂ ಆಟಗಾರರು ತಪ್ಪಿತಸ್ಥರೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಭ್ರಷ್ಟಾಚಾರ ನಿಗ್ರಹ ನ್ಯಾಯಮಂಡಳಿ ತನಿಖೆಯಿಂದ ಇದೀಗ ಸಾಬೀತಾಗಿದೆ. ಮೊಹಮ್ಮದ್ ನವೀದ್ ಯುಎಇ ತಂಡದ ಮಾಜಿ ನಾಯಕರಾಗಿದ್ದರು. ಅಲ್ಲದೆ ತಮ್ಮ ದೇಶದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಇನ್ನು ಶೈಮಾನ್ ಅನ್ವರ್ ಭಟ್ ಯುಎಇ ತಂಡದ ಆರಂಭಿಕ ಆಟಗಾರ. ಇಬ್ಬರು ಆಟಗಾರರು ಯುಎಇ ಪರ 70 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

  "ನವೀದ್ ಮತ್ತು ಶೈಮಾನ್ ಯುಎಇ ಪರ ಅನುಭವಿ ಆಟಗಾರರು ಎಂದು ಗುರುತಿಸಿಕೊಂಡಿದ್ದರು. ಇದಾಗ್ಯೂ ಇಬ್ಬರೂ ಭ್ರಷ್ಟಾಚಾರದ ಹಾದಿಯನ್ನು ಆರಿಸಿಕೊಂಡರು. ಇಬ್ಬರೂ ತಮ್ಮ ಸ್ಥಾನಗಳಿಗೆ, ತಮ್ಮ ತಂಡದ ಆಟಗಾರರಿಗೆ ಮತ್ತು ಯುಎಇ ಕ್ರಿಕೆಟ್‌ ಪ್ರೇಮಿಗಳಿಗೆ ದ್ರೋಹ ಮಾಡಿದ್ದಾರೆ. ಈ ರೀತಿಯ ಆಟಗಾರರ ಮೇಲೆ ನ್ಯಾಯಮಂಡಳಿ ನಿಷೇಧ ಹೇರಿರುವುದು ಸಂತೋಷವಾಗಿದೆ . ತಪ್ಪು ಮಾರ್ಗವನ್ನು ಆಯ್ಕೆ ಮಾಡುವ ಆಟಗಾರರಿಗೆ ಇದು ಒಂದು ಎಚ್ಚರಿಕೆ ಎಂದು ಐಸಿಸಿಯ ಸಮಗ್ರತೆ ಘಟಕದ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ತಿಳಿಸಿದ್ದಾರೆ.

  33 ವರ್ಷದ ಮೊಹಮ್ಮದ್ ನವೀದ್ 39 ಏಕದಿನ ಪಂದ್ಯಗಳಿಂದ 53 ವಿಕೆಟ್ ಪಡೆದಿದ್ದಾರೆ. 28 ಕ್ಕೆ ಐದು ವಿಕೆಟ್‌ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನ. ಹಾಗೆಯೇ 31 ಟಿ20 ಗಳಲ್ಲಿ 37 ವಿಕೆಟ್ ಪಡೆದಿದ್ದಾರೆ. ಇನ್ನು 42 ವರ್ಷದ ಶೈಮಾನ್ ಅನ್ವರ್ ಭಟ್ 40 ಏಕದಿನ ಪಂದ್ಯಗಳಿಂದ 31ರ ಸರಾಸರಿಯಲ್ಲಿ 1219 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 11 ಅರ್ಧಶತಕಗಳು ಒಳಗೊಂಡಿವೆ. ಇದಲ್ಲದೆ 32 ಟಿ20 ಪಂದ್ಯಗಳಿಂದ 971 ರನ್ ಕಲೆಹಾಕಿದ್ದರು. ಇದರಲ್ಲಿ ಒಂದು ಶತಕ ಮತ್ತು 6 ಅರ್ಧಶತಕಗಳು ಮೂಡಿಬಂದಿದ್ದವು.
  Published by:zahir
  First published: