ಭಾನುವಾರ ನಡೆದ ವಿಶ್ವಕಪ್ ರೋಚಕ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಐತಿಹಾಸಿಕ ಜಯ ದಾಖಲಿಸಿತು. ಚೊಚ್ಚಲ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಖುಷಿಯಲ್ಲಿ ಆಂಗ್ಲರು ಟ್ರೋಫಿಯೊಂದಿಗೆ ಸೆಲೆಬ್ರೇಷನ್ ಫೋಟೋ ಪೋಸ್ ನೀಡಿದರು. ಇದೇ ಸಂದರ್ಭದಲ್ಲಿ ಬೈರ್ಸ್ಟೋ ಸಂಭ್ರಮಾಚರಣೆಗೆ ಶಾಂಪೇನ್ನ ಕಿಚ್ಚು ಹಚ್ಚಿದ್ದರು.
ಈ ಸಂಭ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಹಾಗೂ ಆಲ್ರೌಂಡರ್ ಮೊಯೀನ್ ಅಲಿ. ಶಾಂಪೇನ್ ಸಂಭ್ರಮ ಆರಂಭವಾಗುತ್ತಿದ್ದಂತೆ ಆದಿಲ್ ಹಾಗೂ ಮೊಯೀನ್ ಅಲಿ ದೂರ ಸರಿದಿದ್ದರು. ಇದಕ್ಕೆ ನಿರ್ದಿಷ್ಟ ಕಾರಣ ಕೂಡ ಇತ್ತು.
ಇಬ್ಬರು ಆಟಗಾರರ ಧಾರ್ಮಿಕ ನಂಬಿಕೆಯನ್ನು ಗೌರವಿಸಿ ಖುಷಿಯ ಕ್ಷಣಗಳಿಂದ ಕ್ಷಣಮಾತ್ರ ದೂರ ಸರಿದಿದ್ದರು. ಮೊಯೀನ್ ಅಲಿ ಹಾಗೂ ಆದಿಲ್ ರಶೀದ್ ಅವರ ಧರ್ಮ ಪಾಲನೆಯಲ್ಲಿ ಆಲ್ಕೋಹಾಲ್ ನಿಷಿದ್ಧವಾಗಿದ್ದು, ಹೀಗಾಗಿ ಶಾಂಪೇನ್ ಸಂಭ್ರಮದಿಂದ ದೂರ ಸರಿದರು. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಮದ್ಯಪಾನದ ವಿರುದ್ಧ ಜಾಗೃತಿ ಹೀಗೂ ಕೂಡ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿಂದೆ ಕೂಡ ಭಾರತದ ವಿರುದ್ದ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಗೆದ್ದ ವೇಳೆ ತಂಡದ ಭಾಗವಾಗಿದ್ದ ಆದಿಲ್ ರಶೀದ್ ಹಾಗೂ ಮೊಯೀನ್ ಅಲಿ ಶಾಂಪೇನ್ ಹಾರಿಸುವಾಗ ಸ್ಥಳದಿಂದ ದೂರ ಸರಿದಿದ್ದರು.
ಅದೇ ರೀತಿ ದಕ್ಷಿಣಾ ಆಫ್ರಿಕಾ ಆಟಗಾರ ಹಾಶಿಂ ಆಮ್ಲಾ ಸಹ ಇಂತಹ ಸಂಭ್ರಮದಿಂದ ದೂರ ಉಳಿದಿರುವ ನಿದರ್ಶನಗಳಿವೆ. ಹಾಗೆಯೇ ತಂಡದ ಜೆರ್ಸಿ ಮೇಲೆ ಆಲ್ಕೋಹಾಲ್ ಕಂಪೆನಿಯ ಜಾಹೀರಾತು ಹಾಕಿಕೊಳ್ಳಲು ನಿರಾಕರಿಸಿದ್ದರು. ಈ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗೆ ಮದ್ಯಪಾನ ಹಾಗೂ ಅಮಲುಯುಕ್ತ ಪದಾರ್ಥಗಳನ್ನು ನಾನು ಬೆಂಬಲಿಸಲು ಬಯಸುವುದಿಲ್ಲ ಎಂಬ ಉತ್ತರ ನೀಡಿದ್ದರು.
Omg I’m laughing so much Pree Moeen Ali & Rashids facial reaction to the champagne celebration! 🤣🤣 Real Muslim brothers! 😂🤣❤️ pic.twitter.com/Hydv5qXLKN
— Haider Ali (@HaiderAkhtar1) July 14, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ