ಲಕ್ನೋ(ಮಾ. 12): ಭಾರತದ ಕ್ರಿಕೆಟ್ ದಂತಕಥೆ ಮಿಥಾಲಿ ರಾಜ್ ಇಂದು ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ಮುಟ್ಟಿದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 10,000 ರನ್ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಹಾಗೂ ವಿಶ್ವದ ಎರಡನೇ ಆಟಗಾರ್ತಿ ಎನಿಸಿದ್ದಾರೆ. ದಕ್ಷಿಣ ಆಫ್ರಿಕಾ ವನಿತೆಯರ ತಂಡದ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಮಿಥಾಲಿ ರಾಜ್ ಈ ಸಾಧನೆ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಅವರು 36 ರನ್ ಗಳಿಸಿ ಈ ಮೈಲಿಗಲ್ಲು ತಲುಪಿದ್ಧಾರೆ.
ಮಹಿಳಾ ಟೆಸ್ಟ್ ಕ್ರಿಕೆಟ್, ಏಕದಿನ ಮತ್ತು ಟಿ20 ಈ ಮೂರು ಮಾದರಿಯ ಕ್ರಿಕೆಟ್ನಲ್ಲಿ ಒಟ್ಟು ಸೇರಿ ಅವರು 10 ಸಾವಿರ ರನ್ ಕಲೆಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 10, ಏಕದಿನ ಕ್ರಿಕೆಟ್ನಲ್ಲಿ 212 ಮತ್ತು ಟಿ20 ಕ್ರಿಕೆಟ್ನಲ್ಲಿ 89 ಪಂದ್ಯಗಳನ್ನ ಅವರು ಆಡಿ ಒಟ್ಟು 10,001 ರನ್ ಗಳಿಸಿದ್ದಾರೆ. ಒಟ್ಟು 311 ಪಂದ್ಯಗಳಲ್ಲಿ ಈ ಸಾಧನೆ ಬಂದಿದೆ. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ದಂತಕಥೆ ಚಾರ್ಲೆಟ್ ಎಡ್ವರ್ಡ್ಸ್ ಅವರು ಒಟ್ಟು 309 ಅಂತರರಾಷ್ಟ್ರೀಯ ಪಂದ್ಯಗಳಿಂದ 10,273 ರನ್ ಗಳಿಸಿ ತಮ್ಮ ವೃತ್ತಿಜೀವನ ಅಂತ್ಯಗೊಳಿಸಿದ್ದಾರೆ.
ಇದನ್ನೂ ಓದಿ: IPL 2021: RCB ತಂಡದಿಂದ ಹೊರಗುಳಿದ ಜೋಶ್ ಫಿಲಿಪೆ: 21 ವರ್ಷದ ಯುವ ಬ್ಯಾಟ್ಸ್ಮನ್ಗೆ ಸಿಕ್ತು ಚಾನ್ಸ್..!
ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ ಸದ್ಯ ಎಡ್ವರ್ಡ್ಸ್ ಅವರ ಹೆಸರಲ್ಲಿದೆ. 38 ವರ್ಷದ ಮಿಥಾಲಿ ರಾಜ್ ಅವರಿಗೆ ಈ ದಾಖಲೆ ಮುರಿಯುವ ಅವಕಾಶ ಇದೆ. ದಕ್ಷಿಣ ಆಫ್ರಿಕಾ ವಿರುದ್ಧದ ಇದೇ ಸರಣಿಯಲ್ಲಿ ಮಿಥಾಲಿ ತಮ್ಮ ದಾಖಲೆ ಓಟ ಮುಂದುವರಿಸುವ ನಿರೀಕ್ಷೆ ಇದೆ. ಈ ಸರಣಿಯಲ್ಲಿ ಇನ್ನೂ 2 ಏಕದಿನ ಪಂದ್ಯಗಳು ಹಾಗೂ 3 ಟಿ20 ಪಂದ್ಯಗಳು ನಡೆಯಬೇಕಿವೆ. ಮಿಥಾಲಿ ಅವರು ಇನ್ನೂ 273 ರನ್ ಗಳಿಸಿದರೆ ವಿಶ್ವದಾಖಲೆಗೆ ಬಾಜನರಾಗಲಿದ್ದಾರೆ.
ಮಿಥಾಲಿ ರಾಜ್ ವೃತ್ತಿಜೀವನದ ಸಾಧನೆ:
ಟೆಸ್ಟ್ ಕ್ರಿಕೆಟ್: 10 ಪಂದ್ಯ 663 ರನ್
ಏಕದಿನ ಕ್ರಿಕೆಟ್: 212 ಪಂದ್ಯ 6974 ರನ್
ಟಿ20 ಕ್ರಿಕೆಟ್: 89 ಪಂದ್ಯ 2364 ರನ್
ಮಿಥಾಲಿ ರಾಜ್ ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ರನ್ ಗಳಿಸಿರುವ ಸರಾಸರಿ 50 ಕ್ಕಿಂತ ಹೆಚ್ಚಿದೆ. ಟಿ20 ಕ್ರಿಕೆಟ್ನಲ್ಲೂ ಅವರು 37 ರನ್ ಗಿಂತ ಹೆಚ್ಚಿನ ಸರಾಸರಿ ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ