Will Pucovski: ಉದ್ದ ಕೂದಲು...22ರ ಹರೆಯ...ಯಾರು ಈ ಪುಕೊವ್​ಸ್ಕಿ?

2016-17ರಲ್ಲಿ ಸತತ ನಾಲ್ಕು ಶತಕಗಳನ್ನು ಬಾರಿಸಿದ ಪುಕೊವ್‌ಸ್ಕಿ , ಅಂಡರ್ 19 ರಾಷ್ಟೀಯ ಚಾಂಪಿಯನ್​ಶಿಪ್​ನಲ್ಲಿ 1994 ರಲ್ಲಿ ಕ್ವೀನ್ಸ್‌ಲ್ಯಾಂಡ್‌ನ ಜೆರ್ರಿ ಕ್ಯಾಸೆಲ್ ಬರೆದ 568 ರನ್ ದಾಖಲೆಯನ್ನು ಅಳಿಸಿ ಹಾಕಿದರು.

Will Pucovski

Will Pucovski

 • Share this:
   ವಿಲ್ ಪುಕೊವ್‌ಸ್ಕಿ ( Will Pucovski )...ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ  ಈ ಹೆಸರು ಸಾಕಷ್ಟು ಸುದ್ದಿಯಾಗಿತ್ತು. ಅದರಲ್ಲೂ ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಪುಕೊವ್‌ಸ್ಕಿ ಆಯ್ಕೆಯಾದ ವೇಳೆ ಮತ್ತಷ್ಟು ಸುದ್ದಿಯಾಗಿದ್ದರು. ಇದೀಗ ಆಸ್ಟ್ರೇಲಿಯಾ ಪರ ಟೆಸ್ಟ್ ಆಡಿದ 460ನೇ ಆಟಗಾರ ಎನಿಸಿಕೊಂಡಿದ್ದಾರೆ. ಭಾರತದ ವಿರುದ್ಧ ಮೂರನೇ ಟೆಸ್ಟ್​ ಮೂಲಕ 22ರ ಹರೆಯದ ಪುಕೊವ್​ಸ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಚೊಚ್ಚಲ ಟೆಸ್ಟ್​ನಲ್ಲೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಯುವ ಆಟಗಾರ 110 ಎಸೆತಗಳನ್ನು ಎದುರಿಸಿ 62 ಬಾರಿಸಿದ್ದರು. ಇದರೊಂದಿಗೆ ಚೊಚ್ಚಲ ಟೆಸ್ಟ್​ನಲ್ಲೇ ಹಾಫ್ ಸೆಂಚುರಿ ಬಾರಿಸಿದ ಆಟಗಾರರ ಪಟ್ಟಿಗೆ ಪುಕೊವ್​ಸ್ಕಿ ಸೇರ್ಪಡೆಯಾಗಿದ್ದಾರೆ.

  ಯಾರು ಈ ಪುಕೊವ್​ಸ್ಕಿ?
  ಕಾಂಗರೂ ನಾಡಿನಲ್ಲಿ ಕಳೆದ ಕೆಲ ವರ್ಷಗಳಿಂದ ಪುಕೊವ್‌ಸ್ಕಿ ಹೆಸರು ಚಾಲ್ತಿಯಲ್ಲಿದೆ. ಅಲ್ಲಿನ ಶೀಲ್ಡ್​ ಕ್ರಿಕೆಟ್​ನಲ್ಲಿನ ಅಬ್ಬರ ಯುವ ದಾಂಡಿಗನನ್ನು ಮನೆಮಾತಾಗಿಸಿದೆ. ಅದರಲ್ಲೂ ಈತನ ಆಟವನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್​ಗೆ ಹೋಲಿಸಲಾಗುತ್ತಿದೆ. ಒಮ್ಮೆ ಕ್ರೀಸ್ ಕಚ್ಚಿ ನಿಂತರೆ ಮತ್ತೆ ಭರ್ಜರಿ ಮೊತ್ತದೊಂದಿಗೆ ಮಾತ್ರ ಹಿಂತಿರುಗುವುದು ಎನ್ನುವಂತೆ ಭರ್ಜರಿಯಾಗಿ ಬ್ಯಾಟ್ ಬೀಸುತ್ತಾರೆ.

  ಹೀಗಾಗಿಯೇ 2017 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಪಾಕಿಸ್ತಾನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್‌ ಪರ 19ರ ಪುಕೊವ್‌ಸ್ಕಿ ಯನ್ನು ಕಣಕ್ಕಿಳಿಸಲಾಗಿತ್ತು. ಅದುವೇ ಲಿಸ್ಟ್ ಎ ಕ್ರಿಕೆಟ್​ನ ಮೊದಲ ಪಂದ್ಯ ಕೂಡ ಆಗಿತ್ತು. ಬಳಿಕ ವಿಕ್ಟೋರಿಯಾ ಪರ ಶೆಫೀಲ್ಡ್ ಶೀಲ್ಡ್ ಸೀಸನ್​ನಲ್ಲಿ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದರು.

  2016-17ರಲ್ಲಿ ಸತತ ನಾಲ್ಕು ಶತಕಗಳನ್ನು ಬಾರಿಸಿದ ಪುಕೊವ್‌ಸ್ಕಿ , ಅಂಡರ್ 19 ರಾಷ್ಟೀಯ ಚಾಂಪಿಯನ್​ಶಿಪ್​ನಲ್ಲಿ 1994 ರಲ್ಲಿ ಕ್ವೀನ್ಸ್‌ಲ್ಯಾಂಡ್‌ನ ಜೆರ್ರಿ ಕ್ಯಾಸೆಲ್ ಬರೆದ 568 ರನ್ ದಾಖಲೆಯನ್ನು ಅಳಿಸಿ ಹಾಕಿದರು. ಈ ಸೀಸನ್​ನಲ್ಲಿ ಬಲಗೈ ಬ್ಯಾಟ್ಸ್​ಮನ್ ಬ್ಯಾಟ್​ನಿಂದ ಸಿಡಿದ್ದದು ಬರೋಬ್ಬರಿ 650 ರನ್​ಗಳು. ಅಂದಿನಿಂದ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ ಪುಕೊವ್‌ಸ್ಕಿ ಹೆಸರು ಚರ್ಚೆಯಲ್ಲಿದೆ.

  2018 ರಲ್ಲಿ ಶೆಫೀಲ್ಡ್ ಶೀಲ್ಡ್​ ಪಂದ್ಯದ ವೇಳೆ ಸೀನ್ ಅಬಾಟ್ ಎಸೆದ ಚೆಂಡು ತಲೆಗೆ ಬಡಿದು ಗಾಯಗೊಂಡರು. ಆದರೆ ಇದಾದ ಬಳಿಕ ಮತ್ತೆ ಕಂಬ್ಯಾಕ್ ಮಾಡಿ ಪುಕೊವ್‌ಸ್ಕಿ ತಮ್ಮ ಹಳೆದ ಖದರ್​ ತೋರಿಸಲು ಪ್ರಾರಂಭಿಸಿದ್ದರು. ಈ ವರ್ಷ ಆಸ್ಟ್ರೇಲಿಯಾ ದೇಶೀಯ ಕ್ರಿಕೆಟ್​ನಲ್ಲಿ 495 ಕಲೆಹಾಕಿದ ಯುವ ದಾಂಡಿಗ ಈ ಸೀಸನ್​ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡರು.  ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ 34 ಇನಿಂಗ್ಸ್ ಆಡಿರುವ ವಿಲ್ ಪುಕೊವ್‌ಸ್ಕಿ , 1720 ರನ್ ಕಲೆಹಾಕಿದ್ದಾರೆ. ಇದರಲ್ಲಿ 6 ಶತಕ ಹಾಗೂ 5 ಅರ್ಧಶತಕ ಹಾಗೂ ಅಜೇಯ 255 ರನ್​ ಬಾರಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಇದೀಗ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದು ಮಿಂಚಿದ್ದಾರೆ.
  Published by:zahir
  First published: