India vs England- ಐದನೇ ಪಂದ್ಯಕ್ಕೆ ಕನ್ನಡಿಗ ಮಯಂಕ್, ಅಶ್ವಿನ್​ಗೆ ಸ್ಥಾನ? ರಹಾನೆ ಡೌಟ್

Likely teams for India vs England in Manchester test – ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾಗೆ ಫಿಟ್ನೆಸ್ ಸಮಸ್ಯೆ ಇದೆ. ರಹಾನೆ ಔಟ್ ಆಫ್ ಫಾರ್ಮ್ ಇದ್ದಾರೆ. ರೋಹಿತ್ ಆಡದೇ ಹೋದಲ್ಲಿ ಮಯಂಕ್ ಅವರನ್ನ ಆಡಿಸುವ ನಿರೀಕ್ಷೆ ಇದೆ. ಹಾಗಾದಲ್ಲಿ ಇಬ್ಬರು ಕನ್ನಡಿಗರು ಭಾರತದ ಇನ್ನಿಂಗ್ಸ್ ಓಪನ್ ಮಾಡಲಿದ್ದಾರೆ.

ಭಾರತ ಕ್ರಿಕೆಟ್ ತಂಡದ ಆಟಗಾರರು

ಭಾರತ ಕ್ರಿಕೆಟ್ ತಂಡದ ಆಟಗಾರರು

 • Cricketnext
 • Last Updated :
 • Share this:
  ಲಂಡನ್, ಸೆ. 10: ರವಿಶಾಸ್ತ್ರಿ ಹಾಗೂ ಕೆಲ ಕೋಚಿಂಗ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ (Ravishastri and others test Covid positive) ಬಂದ ಬಳಿಕ ಐದನೇ ಟೆಸ್ಟ್ ಆರಂಭದ ಬಗ್ಗೆ ಅನುಮಾನ ಇದ್ದವು. ಈಗ ತಂಡದ ಎಲ್ಲಾ ಆಟಗಾರರು ಕೋವಿಡ್ ಪರೀಕ್ಷೆಯಲ್ಲಿ ನೆಗಟಿವ್ ವರದಿ (Covid negative report) ಪಡೆದಿರುವ ಹಿನ್ನೆಲೆಯಲ್ಲಿ ಅಂತಿಮ ಪಂದ್ಯಕ್ಕೆ ಹಸಿರುನಿಶಾನೆ ತೋರಿಸಲಾಗಿದೆ. ಈಗ ಇಂಗ್ಲೆಂಡ್ ತಂಡಕ್ಕೆ ಸರಣಿಯನ್ನ ಸಮಗೊಳಿಸಿಕೊಂಡು ಮಾನ ಉಳಿಸಿಕೊಳ್ಳುವ ಕೊನೆಯ ಅವಕಾಶ ಸಿಕ್ಕಂತಾಗಿದೆ. ಪಟೌಡಿ ಟ್ರೋಫಿಗಾಗಿ (Pataudi Trophy) ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರಿಂದ ಮುಂದಿದೆ. ಭಾರತದ ಕ್ರಿಕೆಟಿಗರು ಈ ಸರಣಿ ಗೆದ್ದು ಹೊಸ ಇತಿಹಾಸ ನಿರ್ಮಿಸುವ ತವಕದಲ್ಲಿದ್ದಾರೆ. ಕೋವಿಡ್ ಆತಂಕಗಳೊಂದಿಗೆ ಕೆಲ ದಿನಗಳ ಕಾಲ ಒತ್ತಡದಲ್ಲಿದ್ದ ಭಾರತ ತಂಡದ ಆಟಗಾರರು ಮಾನಸಿಕವಾಗಿ ಎಷ್ಟರಮಟ್ಟಿಗೆ ಪಂದ್ಯಕ್ಕೆ ಸಜ್ಜಾಗುತ್ತಾರೆ ಕಾದುನೋಡಬೇಕು.

  ಈ ಸರಣಿಯಲ್ಲಿ ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್​ನಲ್ಲಿ ಅಜಿಂಕ್ಯ ರಹಾನೆ (Ajinkya Rahane) ಮತ್ತು ರಿಶಬ್ ಪಂತ್ (Rishabh Pant) ಅವರಿಬ್ಬರು ಮಾತ್ರವೇ ರನ್ ಗಳಿಸಲು ತಿಣುಕಾಡಿರುವುದು. ರೋಹಿತ್ ಶರ್ಮಾ (Rohit Sharma) ಅಮೋಘ ಫಾರ್ಮ್​ನಲ್ಲಿದ್ದಾರೆ. ಅವರಿಗೆ ಫಿಟ್ನೆಸ್ ಸಮಸ್ಯೆ ಎದುರಾಗಿದ್ದು ಅವರು ಈ ಪಂದ್ಯ ಆಡುವ ಬಗ್ಗೆ ಖಚಿತತೆ ಇಲ್ಲ. ಒಂದು ವೇಳೆ ರೋಹಿತ್ ಆಡದಿದ್ದರೆ ಅವರ ಬದಲು ಕರ್ನಾಟಕದ ಮಯಂಕ್​ಗೆ (Mayank Agarwal) ಸ್ಥಾನ ಸಿಗುವ ನಿರೀಕ್ಷೆ ಇದೆ. ಮತ್ತೊಬ್ಬ ಕನ್ನಡಿಗ ಕೆ ಎಲ್ ರಾಹುಲ್ ಹೆಚ್ಚು ರನ್ ಗಳಿಸದೇ ಹೋದರೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಚೇತೇಶ್ವರ್ ಪೂಜಾರ ಹಿಂದಿನ ಪಂದ್ಯದಲ್ಲಿ ಒಳ್ಳೆಯ ಆಟವಾಡಿದ್ದಾರೆ. ಅಜಿಂಕ್ಯ ರಹಾನೆಗೆ ಮತ್ತೊಂದು ಬಾರಿ ಅವಕಾಶ ಸಿಕ್ಕರೆ ಅದು ಅವರ ದೊಡ್ಡ ಅದೃಷ್ಟ ಎಂದು ಅನೆಕ ಮಾಜಿ ಆಟಗಾರರೇ ಹೇಳಿದ್ಧಾರೆ. ಅವರಿಗೇನಾದರೂ ಸ್ಥಾನ ಸಿಗಲಿಲ್ಲವೆಂದರೆ ಗಗನ ಹನುಮ ವಿಹಾರಿ ಕಣಕ್ಕಿಳಿಯುವ ಸಾಧ್ಯತೆ ಇದೆ. ರವೀಂದ್ರ ಜಡೇಜಾಗೂ ಮಂಡಿ ಸಮಸ್ಯೆ ಕಾಡುತ್ತಿದೆ. ಅವರು ಫಿಟ್ ಆಗದೇ ಹೋದಲ್ಲಿ ಅಕ್ಷರ್ ಪಟೇಲ್ ಅವರಿಗೆ ಅವಕಾಶ ಸಿಕ್ಕರೂ ಸಿಗಬಹುದು.

  ಭಾರತದ ಅತ್ಯುತ್ತಮ ಸ್ಪಿನ್ ಬೌಲರ್ ಎಂದು ಪರಿಣಿಸಲಾಗಿದ್ದರೂ ಇಂಗ್ಲೆಂಡ್ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಸ್ಥಾನ ಸಿಗದೇ ಪರಿತಪಿಸುತ್ತಿದ್ದ ಆರ್ ಅಶ್ವಿನ್ ಅವರಿಗೆ ಕೊನೆಯ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಜಸ್​ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ಕೊಟ್ಟು ಅವರ ಬದಲು ಅಶ್ವಿನ್ ಅವರನ್ನ ಸೇರಿಸಿಕೊಳ್ಳಬಹುದು. ಹೀಗಾದಲ್ಲಿ ತಂಡದಲ್ಲಿ ಶಾರ್ದೂಲ್ ಠಾಕೂರ್ ಸೇರಿ ಮೂವರೇ ಫಾಸ್ಟ್ ಬೌಲರ್ಸ್ ಇರಲಿದ್ಧಾರೆ.

  ಇದನ್ನೂ ಓದಿ: India vs England| ರಹಾನೆ, ಜಡೇಜಾಗೆ ರೆಸ್ಟ್​ ನೀಡಿ, ಹನುಮ ವಿವಾರಿ-ಅಶ್ವಿನ್​ಗೆ ಅವಕಾಶ ನೀಡಬಾರದೇಕೆ?; ವಿವಿಎಸ್​ ಲಕ್ಷ್ಮಣ್

  ಇನ್ನು, ಮ್ಯಾಂಚೆಸ್ಟರ್​ನ ಓಲ್ಡ್ ಟ್ರಫಾರ್ಡ್ ಮೈದಾನದ ಪಿಚ್ ವಿಚಾರಕ್ಕೆ ಬಂದರೆ ಇದು ಬೌನ್ಸರ್​ಗಳಿಗೆ ನೆರವಾಗುವ ಸಾಧ್ಯತೆ ಇದೆ. ಬ್ಯಾಟ್ಸ್​ಮನ್ ಮತ್ತು ಬೌಲರ್ಸ್ ಇಬ್ಬರಿಗೂ ನೆರವಾಗುವ ಪಿಚ್ ಇದು. ಬೌಲರ್​ಗಳಲ್ಲಿ ಫಾಸ್ಟ್ ಹಾಗೂ ಸ್ಪಿನ್ ಎರಡೂ ಬೌಲರ್ಸ್​ಗೂ ಇದು ನೆರವಾಗುವ ಪಿಚ್ ಎಂದು ತಜ್ಞರು ಹೇಳುತ್ತಾರೆ. ಮಧ್ಯ ಮಧ್ಯದಲ್ಲಿ ಮಳೆಯ ಅಡಚಣೆ ಆದರೂ ಆಗಬಹುದು. ಕುತೂಹಲದ ವಿಷಯವೆಂದರೆ ಈ ಓಲ್ಡ್ ಟ್ರಫಾರ್ಡ್​ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಸೋತ ಇತಿಹಾಸ ಇಲ್ಲ. ಈ ಬಾರಿ ಭಾರತ ಈ ಇತಿಹಾಸ ಬದಲಿಸುತ್ತದಾ ಕಾದು ನೋಡಬೇಕು.

  ಭಾರತದ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರೋಹಿತ್ ಶರ್ಮಾ/ಮಯಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ/ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ/ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಆರ್ ಅಶ್ವಿನ್, ಮೊಹಮ್ಮದ್ ಶಮಿ/ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.

  ಇಂಗ್ಲೆಂಡ್ ಸಂಭಾವ್ಯ ತಂಡ: ಜೋ ರೂಟ್ (ನಾಯಕ), ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜಾನ್ ಬೇರ್​ಸ್ಟೋ/ಓಲೀ ಪೋಪ್, ಜೋಸ್ ಬಟ್ಲರ್, ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಓಲೀ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್

  ಪಂದ್ಯ ಆರಂಭ: ಭಾರತೀಯ ಕಾಲಮಾನದಲ್ಲಿ ಮಧ್ಯಾಹ್ನ 3:30ಕ್ಕೆ
  Published by:Vijayasarthy SN
  First published: