ಕನ್ನಡಿಗ ಮಯಂಕ್ ಮನಮೋಹಕ ಶತಕ; ಆಯ್ಕೆಗಾರರಿಗೆ ಭವಿಷ್ಯದಲ್ಲಿ ಹೊಸ ತಲೆನೋವು

India vs New Zealand 2nd Test Match First Day- ಮಯಂಕ್ ಅಗರ್ವಾಲ್ ಅಮೋಘ ಶತಕ ಹಾಗೂ ಎಜಾಜ್ ಪಟೇಲ್ ಅವರ ಭರ್ಜರಿ ಬೌಲಿಂಗ್ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಹೈಲೈಟ್ ಎನಿಸಿವೆ.

ಮಯಂಕ್ ಅಗರ್ವಾಲ್

ಮಯಂಕ್ ಅಗರ್ವಾಲ್

 • Share this:
  ಮುಂಬೈ, ಡಿ. 3: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ದಿನ ಹೆಚ್ಚು ಸಿಹಿ ಪಡೆದಿದೆ. ಮಯಂಕ್ ಅಗರ್ವಾಲ್ ಮೊದಲ ದಿನದಂದು ಟೀಮ್ ಇಂಡಿಯಾದ ಹೀರೋ ಎನಿಸಿದರು. ನ್ಯೂಜಿಲೆಂಡ್ ತಂಡದ ಉತ್ತಮ ಬೌಲಿಂಗ್ ದಾಳಿಯನ್ನ ಬಹಳ ಸಮರ್ಥವಾಗಿ ಎದುರಿಸಿದ ಮಯಂಕ್ ಅವರು ತಮ್ಮ 4ನೇ ಟೆಸ್ಟ್ ಶತಕ ಭಾರಿಸಿದರು. ಎರಡು ವರ್ಷಗಳ ಹಿಂದೆ ಇಂದೋರ್​ನಲ್ಲಿ ಬಾಂಗ್ಲಾದೇಶ ವಿರುದ್ಧ ದ್ವಿಶತಕ ಗಳಿಸಿದ ಬಳಿಕ ಮಯಂಕ್ ಅವರ ಬ್ಯಾಟಿಂದ ಬಂದ ಮೊದಲ ಶತಕ ಇದಾಗಿದೆ. ಇದಕ್ಕಿಂತ ಹೆಚ್ಚಾಗಿ ಮಯಂಕ್ ಅಗರ್ವಾಲ್ ಅವರು ಗಳಿಸಿದ ರನ್​ಗಳು ಈ ಪಂದ್ಯದಲ್ಲಿ ಭಾರತಕ್ಕೆ ವರದಾನವಾಗಿ ಪರಿಣಿಸುವ ಎಲ್ಲಾ ಸಾಧ್ಯತೆ ಇದೆ. ಬಹಳ ಆತ್ಮವಿಶ್ವಾಸದಿಂದ ಆಡಿದ ಮಯಂಕ್ ಮೊದಲ ದಿನಾಂತ್ಯದಲ್ಲಿ 120 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಮಳೆ ಮತ್ತು ಮಂದ ಬೆಳಕಿನ ಕಾರಣಕ್ಕೆ ಇಂದು ಆಡಲು ಸಾಧ್ಯವಾಗಿದ್ದು 70 ಓವರ್ ಮಾತ್ರ. ಭಾರತ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ಸುಸ್ಥಿತಿಯಲ್ಲಿದೆ.

  ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಮಯಂಕ್ ಅಗರ್ವಾಲ್ ಮತ್ತು ಶುಬ್ಮನ್ ಗಿಲ್ ಇಬ್ಬರೂ ಭರ್ಜರಿ ಆರಂಭ ಒದಗಿಸಿದರು. ಬ್ಯಾಟ್ ಮಾಡಲು ತುಸು ಕಷ್ಟಕರವಾಗಿದ್ದ ಪಿಚ್​ನಲ್ಲಿ ಇಬ್ಬರೂ ಅಗ್ರೆಸಿವ್ ಆಗಿ ಬ್ಯಾಟ್ ಮಾಡಿ ರನ್ ಗಳಿಸಿ ಮೊದಲ ವಿಕೆಟ್​ಗೆ 80 ರನ್ ಜೊತೆಯಾಟ ಆಡಿದರು. ಒಳ್ಳೆಯ ಲಯದಲ್ಲಿದ್ದ ಗಿಲ್ 44 ರನ್ ಇದ್ದಾಗ ಔಟಾದರು. ಅದಾದ ಬಳಿಕ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಶೂನ್ಯ ಸಂಪಾದನೆ ಮಾಡಿ ಹೊರಬಿದ್ದರು. ಭಾರತ ಸೊನ್ನೆ ರನ್​ಗೆ ದಿಢೀರ್ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಂತಿತ್ತು.

  ಆಗ ಭದ್ರವಾಗಿ ನಿಂತು ಆಡಿದ್ದ ಮಯಂಕ್ ಅಗರ್ವಾಲ್. ಇವರಿಗೆ ಶ್ರೇಯಸ್ ಅಯ್ಯರ್ ಮತ್ತು ವೃದ್ಧಿಮಾನ್ ಸಾಹ ಉತ್ತಮ ಜೊತೆಯಾಟ ಕೊಟ್ಟರು. ಅಯ್ಯರ್ ಮತ್ತು ಅಗರ್ವಾಲ್ 4ನೇ ವಿಕೆಟ್​ಗೆ 80 ರನ್ ಜೊತೆಯಾಟ ಆಡಿದರು. ನಂತರ ವೃದ್ಧಿಮಾನ್ ಸಾಹ ಮತ್ತು ಅಗರ್ವಾಲ್ 5ನೇ ವಿಕೆಟ್​ಗೆ 61 ರನ್​ಗಳ ಮುರಿಯದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.

  ಈ ಪಂದ್ಯದಲ್ಲಿ ಮಯಂಕ್ ಅಗರ್ವಾಲ್ ಅವರಂತೆ ಗಮನ ಸೆಳೆದ ಮತ್ತೊಬ್ಬ ಆಟಗಾರ ನ್ಯೂಜಿಲೆಂಡ್ ಬೌಲರ್ ಏಜಾಜ್ ಪಟೇಲ್. ಮಯಂಕ್ ಅಗರ್ವಾಲ್ ಹೊರತುಪಡಿಸಿ ಉಳಿದ ಎಲ್ಲಾ ಭಾರತೀಯ ಬ್ಯಾಟುಗಾರರನ್ನು ಎಜಾಜ್ ಪಟೇಲ್ ಕಾಡಿದರು. ಇಂದು ಬಿದ್ದ ಭಾರತದ ನಾಲ್ಕೂ ವಿಕೆಟ್​ಗಳನ್ನ ಪಡೆದದ್ದು ಏಜಾಜ್ ಅವರೆಯೇ. ನ್ಯೂಜಿಲೆಂಡ್​ನ 70 ಓವರ್​ಗಳಲ್ಲಿ ಏಜಾಜ್ ಒಬ್ಬರೇ 29 ಓವರ್ ಬೌಲ್ ಮಾಡಿದರು.

  ಇದನ್ನೂ ಓದಿ: IND vs NZ- ಮುಂಬೈನಲ್ಲಿ ಮಳೆಯ ಮಧ್ಯೆ ಟೀಮ್ ಇಂಡಿಯಾ ಆಟಗಾರರಿಂದ ನೆಟ್ ಪ್ರಾಕ್ಟೀಸ್

  ನಾಳೆ ಎರಡನೇ ದಿನದಾಟದಲ್ಲಿ ಮಯಂಕ್ ಅಗರ್ವಾಲ್ ತಮ್ಮ ಶತಕವನ್ನು ದ್ವಿಶತಕವಾಗಿ ಪರಿವರ್ತಿಸುತ್ತಾರಾ ಕಾದುನೋಡಬೇಕು. ಜಯಂತ್ ಯಾದವ್, ಆರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್​ವರೆಗೂ ಭಾರತದ ಬ್ಯಾಟಿಂಗ್ ಶಕ್ತಿಯುತವಾಗಿದೆ. ಹೀಗಾಗಿ, ಭಾರತದ ಮೊದಲ ಇನ್ನಿಂಗ್ಸ್ ಸ್ಕೋರು 400 ಮುಟ್ಟುವ ಎಲ್ಲಾ ನಿರೀಕ್ಷೆ ಇದೆ.

  ಆಯ್ಕೆಗಾರರಿಗೆ ಹೊಸ ತಲೆನೋವು:

  ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮತ್ತು ವೃದ್ಧಿಮಾನ್ ಸಾಹಾ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಈಗ ಎರಡನೇ ಪಂದ್ಯದಲ್ಲಿ ಮಯಂಕ್ ಅಗರ್ವಾಲ್ ತಮ್ಮ ಪ್ರತಿಭೆಯನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಈಗ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಯಾರ್ಯಾರನ್ನ ಆಯ್ಕೆ ಮಾಡಬೇಕು ಎಂಬ ತಲೆನೋವು ಬಿಸಿಸಿಐನ ಆಯ್ಕೆಗಾರರಿಗೆ ಆಗುತ್ತಿರಬಹುದು. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಸ್ಥಾನಗಳಲ್ಲಿ ಮಯಂಕ್ ಅಗರ್ವಾಲ್, ಶ್ರೇಯಸ್ ಅಯ್ಯರ್ ಮತ್ತು ವೃದ್ಧಿಮಾನ್ ಸಾಹ ಮಿಂಚುತ್ತಿದ್ದಾರೆ. ಅದೇನೇ ಆದರೂ ಕ್ರಿಕೆಟ್ ಪ್ರೇಮಿಗಳಿಗೆ ಈ ಪೈಪೋಟಿ ಖುಷಿಕೊಡುವಂಥದ್ದು.

  ಇದನ್ನೂ ಓದಿ: ಡಿ. 17ಕ್ಕೆ ನಿಗದಿಯಾಗಿದ್ದ ಭಾರತ-ಸೌತ್ ಆಫ್ರಿಕಾ ಕ್ರಿಕೆಟ್ ಸರಣಿ ಮುಂದೂಡಿಕೆ ಸಾಧ್ಯತೆ

  ಭಾರತ-ನ್ಯೂಜಿಲೆಂಡ್ 2ನೇ ಪಂದ್ಯದ ಸ್ಕೋರು:

  ಭಾರತ ಮೊದಲ ಇನ್ನಿಂಗ್ಸ್ 70 ಓವರ್ 221/4
  (ಮಯಂಕ್ ಅಗರ್ವಾಲ್ ಅಜೇಯ 120, ಶುಬ್ಮನ್ ಗಿಲ್ 44, ವೃದ್ಧಿಮಾನ್ ಸಾಹ ಅಜೇಯ 25, ಶ್ರೇಯಸ್ ಅಯ್ಯರ್ 18 ರನ್ – ಎಜಾಜ್ ಪಟೇಲ್ 73/4)
  Published by:Vijayasarthy SN
  First published: