SMA T20: ಪಾಂಡೆ, ನಾಯರ್, ಗೌತಂ ಅಮೋಘ ಆಟ; ಕರ್ನಾಟಕ ಶುಭಾರಂಭ, ರಹಾನೆ ಪಡೆಗೆ ಸೋಲು

Syed Mushtaq Ali Trophy T20- ಮನೀಶ್ ಪಾಂಡೆ, ಕರುಣ್ ನಾಯರ್ ಅವರ ಬ್ಯಾಟಿಂಗ್ ಮತ್ತು ಕಾರ್ಯಪ್ಪ, ಗೌತಮ್ ಅವರ ಬೌಲಿಂಗ್ ನೆರವಿನಿಂದ ಮುಂಬೈ ವಿರುದ್ಧ ಕರ್ನಾಟಕ 9 ರನ್​ಗಳಿಂದ ಗೆಲುವು ಪಡೆದು ಸಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮನೀಶ್ ಪಾಂಡೆ (ಕೆಕೆಆರ್ ಜೆರ್ಸಿಯಲ್ಲಿರುವುದು)

ಮನೀಶ್ ಪಾಂಡೆ (ಕೆಕೆಆರ್ ಜೆರ್ಸಿಯಲ್ಲಿರುವುದು)

 • Share this:
  ಗುವಾಹಟಿ, ನ. 04: ಮಾಜಿ ಚಾಂಪಿಯನ್ಸ್ ಕರ್ನಾಟಕ ತಂಡ (Karnataka T20 Cricket Team) ಇವತ್ತು ಆರಂಭಗೊಂಡ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ (SMA T20- Syed Mushtaq Ali Trophy T20) ಶುಭಾರಂಭ ಮಾಡಿದೆ. ಅಸ್ಸಾಮ್​ನ ಗುವಾಹಟಿಯ ಬರ್ಸಪಾರ (Barsapara Stadium, Guwahati) ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ 9 ರನ್​ಗಳಿಂದ ರೋಚಕ ಗೆಲುವು ಪಡೆಯಿತು (Karnataka beat Mumbai by 9 runs). ಮನೀಶ್ ಪಾಂಡೆ ಮತ್ತು ಕರುಣ್ ನಾಯರ್ ಅವರ ಅಮೋಘ ಬ್ಯಾಟಿಂಗ್ ಮತ್ತು ಕೆ ಗೌತಮ್ ಅವರ ಬೌಲಿಂಗ್ ಕರ್ನಾಟಕದ ಗೆಲುವಿಗೆ ಕಾರಣವಾಯಿತು.

  ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದಿತ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಮಯಂಕ್ ಅಗರ್ವಾಲ್ ದಿನದ ಮೊದಲ ಬಾಲ್​ಗೇ ಬಲಿಯಾಗಿ ಹೋದರು. ದೇವದತ್ ಪಡಿಕ್ಕಲ್ ಕೇವಲ 5 ರನ್ ಗಳಿಸಿ ಔಟಾದರು. ಈ ಒತ್ತಡದ ಸ್ಥಿತಿಯಲ್ಲಿ ನಾಯಕ ಮನೀಶ್ ಪಾಂಡೆ ಮತ್ತು ಕರುಣ್ ನಾಯರ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇಬ್ಬರೂ ಸೇರಿ 3ನೇ ವಿಕೆಟ್​ಗೆ 149 ರನ್ ಜೊತೆಯಾಟ ನೀಡಿದರು. ಪರಿಣಾಮವಾಗಿ ಕರ್ನಾಟಕ ಸಮಾಧಾಕರವೆನಿಸುವಷ್ಟು ಮೊತ್ತವನ್ನು ಕಲೆಹಾಕಲು ಶಕ್ಯವಾಯಿತು.

  ಗೆಲುವಿನ ಹಾದಿಯಲ್ಲಿತ್ತು ಮುಂಬೈ: 

  ಮುಂಬೈ ತಂಡದ ದೊಡ್ಡ ಬ್ಯಾಟುಗಾರರು ಕರ್ನಾಟಕದ ಗುರಿಯನ್ನು ಬೆನ್ನಟ್ಟುವ ನಿರೀಕ್ಷೆ ಇತ್ತು. ಪೃಥ್ವಿ ಶಾ, ಅಜಿಂಕ್ಯ ರಹಾನೆ, ಯಶಸ್ವಿ ಜೈಸ್ವಾಲ್, ಸಿದ್ಧೇಶ್ ಲಾಡ್ ಮೊದಲಾದ ಬ್ಯಾಟುಗಾರರ ಪಡೆ ಇರುವ ಮುಂಬೈ ತಂಡಕ್ಕೆ ಇದು ದೊಡ್ಡ ಸವಾಲೇನೂ ಆಗಿರಲಿಲ್ಲ. ಪೃಥ್ವಿ ಶಾ ಅವರನ್ನ ಬೇಗನೇ ಕಳೆದುಕೊಂಡರೂ ಅಜಿಂಕ್ಯ ರಹಾನೆ, ಸಿದ್ದೇಶ್ ಲಾಡ್, ಯಶಸ್ವಿ ಜೈಸ್ವಾಲ್ ಉತ್ತಮವಾಗಿ ಆಡಿ ಮುಂಬೈ ತಂಡದ ಚೇಸಿಂಗ್​ಗೆ ಬಲ ತುಂಬಿದ್ದರು.

  ಕೃಷ್ಣಪ್ಪ ಗೌತಮ್ ಕರಾಮತ್ತು: 

  ಒಂದು ಹಂತದಲ್ಲಿ 15 ಓವರ್ ಬಳಿಕ ಮುಂಬೈ 2 ವಿಕೆಟ್ ನಷ್ಟಕ್ಕೆ 125 ರನ್ ಗಡಿ ಮುಟ್ಟಿತ್ತು. ಮುಂಬೈಗೆ ಗೆಲುವಿನ ಸಾಧ್ಯತೆ ದಟ್ಟವಾಗಿತ್ತು. ಕರ್ನಾಟಕಕ್ಕೆ ಬಹಳ ಡೇಂಜರ್ ಆಗಿದ್ದ ಅಜಿಂಕ್ಯ ರಹಾನೆ ಮತ್ತು ಸಿದ್ಧೇಶ್ ಲಾಡ್ ನಡುವಿನ ಜೊತೆಯಾಟವನ್ನು ಕೆ ಗೌತಮ್ ಮುರಿದರು. ಅದಕ್ಕೂ ಮುನ್ನ ರಹಾನೆ ಮತ್ತು ಜೈಸ್ವಾಲ್ ನಡುವಿನ 2ನೇ ವಿಕೆಟ್ ಜೊತೆಯಾಟದ ಓಟವನ್ನೂ ನಿಲ್ಲಿಸಿದ್ದ ಕೆ ಗೌತಮ್ ಎರಡು ಪ್ರಮುಖ ಜೊತೆಯಾಟವನ್ನು ಮುರಿದು ಕರ್ನಾಟಕದತ್ತ ಪಂದ್ಯ ವಾಲುವಂತೆ ಮಾಡಿದರು.

  ಇದನ್ನೂ ಓದಿ: SMAT T20- ನ. 4ರಿಂದ ಮುಷ್ತಾಕ್ ಅಲಿ ಟಿ20; ಕರ್ನಾಟಕ ತಂಡ, ನಾಯಕ, ಹಿಂದಿನ ಸಾಧನೆ ಇತ್ಯಾದಿ ವಿವರ

  ಸಿದ್ದೇಶ್ ಔಟಾದ ಬಳಿಕ ಮುಂಬೈ ತಂಡದ ಪತನ ಆರಂಭವಾಯಿತು. ಕೇವಲ 5 ರನ್ ಅಂತರದಲ್ಲಿ ಮುಂಬೈನ 4 ವಿಕೆಟ್ ಬಿದ್ದವು. ಆಗ ಮುಂಬೈನ ಪ್ರತಿರೋಧ ಹೆಚ್ಚೂಕಡಿಮೆ ನಿಂತುಹೋಗಿತ್ತು. ಅಂತಿಮವಾಗಿ ಮುಂಬೈ ಇನ್ನಿಂಗ್ಸ್ 157 ರನ್​ಗೆ ನಿಂತಿತು.

  ವಿದ್ಯಾಧರ್ ಪದಾರ್ಪಣೆ: ರಾಯಚೂರಿನ ಮಧ್ಯಮ ವೇಗದ ಬೌಲರ್ ವಿದ್ಯಾಧರ್ ಪಾಟೀಲ್ ಅವರು ಈ ಪಂದ್ಯದ ಮೂಲಕ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲೇ ಅವರು ಗಮನ ಸಳೆಯುವ ಪ್ರದರ್ಶನ ನೀಡಿದ್ಧಾರೆ. 4 ಓವರ್ ಬೌಲ್ ಮಾಡಿದ ಅವರು 25 ರನ್ನಿತ್ತು 1 ವಿಕೆಟ್ ಕೂಡ ಪಡೆದಿದ್ದಾರೆ.

  ಇಂದು ಗೆದ್ದ ತಂಡಗಳು: ಪಂಜಾಬ್, ತಮಿಳುನಾಡು, ಒಡಿಶಾ, ಬಂಗಾಳ, ಕರ್ನಾಟಕ, ಸರ್ವಿಸಸ್, ಆಂಧ್ರ, ಹರಿಯಾಣ, ರಾಜಸ್ಥಾನ್, ಮಧ್ಯಪ್ರದೇಶ, ಗುಜರಾತ್, ಬಿಹಾರ್, ಡೆಲ್ಲಿ, ಉತ್ತರ ಪ್ರದೇಶ, ವಿದರ್ಭ, ಮೇಘಾಲಯ, ತ್ರಿಪುರ ಮತ್ತು ನಾಗಾಲ್ಯಾಂಡ್ ತಂಡಗಳು ಗೆದ್ದಿವೆ.

  ಸೋತ ತಂಡಗಳಲ್ಲಿ ಪ್ರಮುಖವಾಗಿರುವುದು ಮಹಾರಾಷ್ಟ್ರ, ಮುಂಬೈ, ಸೌರಾಷ್ಟ್ರ ಮತ್ತು ಬರೋಡಾ ತಂಡಗಳು.

  ಇದನ್ನೂ ಓದಿ: T20 World Cup- ಇದು ರಿಯಲ್ ಟೀಮ್ ಇಂಡಿಯಾ; ಅಫ್ಘನ್ನರನ್ನ ಸದೆಬಡಿದ ಭಾರತಕ್ಕೆ ಚೊಚ್ಚಲ ಜಯ

  ಛತ್ತೀಸ್​ಗಡ ವಿರುದ್ಧ ಕರ್ನಾಟಕದ ಮುಂದಿನ ಪಂದ್ಯ: ಇದೇ ಗುವಾಹಟಿಯಲ್ಲಿ ನಾಳೆ ಕರ್ನಾಟಕ ತಂಡ ತನ್ನ ಬಿ ಗುಂಪಿನ ಮುಂದಿ ಪಂದ್ಯದಲ್ಲಿ ಛತ್ತೀಸ್​ಗಡವನ್ನು ಎದುರಿಸಲಿದೆ. ಬೆಳಗ್ಗೆ 8 ಗಂಟೆಗೇ ಪಂದ್ಯ ಆರಂಭವಾಗಲಿದೆ.

  ಛತ್ತೀಸ್​ಗಡ ತಂಡ ಇವತ್ತು ನಡೆದ ತನ್ನ ಮೊದಲ ಪಂದ್ಯದಲ್ಲಿ ಬಂಗಾಳ ವಿರುದ್ಧ 7 ವಿಕೆಟ್​ಗಳಿಂದ ಹೀನಾಯವಾಗಿ ಸೋತ್ತು. ಮೊದಲು ಬ್ಯಾಟ್ ಮಾಡಿ ಛತ್ತೀಸ್​ಗಡ ಕೇವಲ 118 ರನ್ ಮಾತ್ರ ಕಲೆಹಾಕಿತು. ಈ ಅಲ್ಪಮೊತ್ತದ ಗುರಿಯನ್ನ ಬಂಗಾಳ ಮೂರು ಓವರ್ ಬಾಕಿ ಇರುವಂತೆ ಚೇಸ್ ಮಾಡಿತು.

  ಕರ್ನಾಟಕ-ಮುಂಬೈ ಸ್ಕೋರು ವಿವರ:

  ಕರ್ನಾಟಕ 20 ಓವರ್ 166/4
  (ಮನೀಶ್ ಪಾಂಡೆ 84, ಕರುಣ್ ನಾಯರ್ 72 ರನ್- ಮೋಹಿತ್ ಅವಾಸ್ತಿ 32/2, ತುಷಾರ್ ದೇಶಪಾಂಡೆ 38/2)

  ಮುಂಬೈ 20 ಓವರ್ 157/6
  (ಅಜಿಂಕ್ಯ ರಹಾನೆ 75, ಸಿದ್ದೇಶ್ ಲಾಡ್ 32, ಯಶಸ್ವಿ ಜೈಸ್ವಾಲ್ 13, ಆದಿತ್ಯ ತಾರೆ ಅಜೇಯ 12 ರನ್- ಕೆ ಕಾರ್ಯಪ್ಪ 26/3, ಕೆ ಗೌತಮ್ 26/2)
  Published by:Vijayasarthy SN
  First published: