ಬೆಂಗಳೂರು(ಮಾ. 02): ವಿಜಯ್ ಹಜಾರೆ ಟ್ರೋಫಿ ಸೀಮಿತ ಓವರ್ಗಳ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಸಿ ಗುಂಪಿನ ಟಾಪರ್ ಆಗಿ ಕ್ವಾರ್ಟರ್ಫೈನಲ್ ಪ್ರವೇಶ ಮಾಡಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಸತತ ನಾಲ್ಕು ಗೆಲುವು ಪಡೆದು ನಾಕೌಟ್ಗೆ ಕಾಲಿಟ್ಟಿದೆ. ಮಾರ್ಚ್ 8ರಂದು ನಡೆಯುವ ಕ್ವಾರ್ಟರ್ಫೈನಲ್ಗೆ ಮನೀಶ್ ಪಾಂಡೆ, ಕೃಷ್ಣಪ್ಪ ಗೌತಮ್ ಅವರು ತಂಡವನ್ನು ಸೇರ್ಪಡೆಗೊಳ್ಳಲಿದ್ದಾರೆ. ಇದರಿಂದ ಕರ್ನಾಟಕ ತಂಡ ಇನ್ನಷ್ಟು ಬಲಿಷ್ಠವಾಗಿ ಎಂಟರ ಹಂತದ ಪಂದ್ಯವಾಗಡಲು ಸಾಧ್ಯವಾಗಲಿದೆ.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮನೀಶ್ ಪಾಂಡೆ ಇದೀಗ ಚೇತರಿಸಿಕೊಂಡು ಆಡಲು ಅಣಿಗೊಂಡಿದ್ದಾರೆ. ಕೆ ಗೌತಮ್ ಅವರು ಭಾರತ ಕ್ರಿಕೆಟ್ ತಂಡದಲ್ಲಿ ನೆಟ್ ಬೌಲರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರನ್ನು ಸದ್ಯ ರಿಲೀವ್ ಮಾಡಿದ ಕಾರಣಕ್ಕೆ ವಿಜಯ್ ಹಜಾರೆ ಟ್ರೋಫಿಗೆ ಲಭ್ಯರಾಗಿದ್ದಾರೆ. ಇವರಿಬ್ಬರು ಸ್ಟಾರ್ ಕ್ರಿಕೆಟಿಗರು ಕರ್ನಾಟಕ ತಂಡದಲ್ಲಿ ಡಿ ನಿಶ್ಚಲ್ ಮತ್ತು ಶುಭಂಗ್ ಹೆಗ್ಡೆ ಅವರ ಸ್ಥಾನ ತುಂಬಲಿದ್ದಾರೆ.
ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್, ಮನೀಶ್ ಪಾಂಡೆ, ಕೃಷ್ಣಪ್ಪ ಗೌತಮ್ ಅವರಿಲ್ಲದೆಯೇ ಕರ್ನಾಟಕ ಕ್ರಿಕೆಟ್ ತಂಡ ಸೀಮಿತ ಓವರ್ಗಳ ಟೂರ್ನಿಯಲ್ಲಿ ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ. ಇದೀಗ ಕೆಎಲ್ ರಾಹುಲ್, ಮಯಂಕ್ ಅವರ ಸೇವೆ ಲಭ್ಯ ಇಲ್ಲದಿದ್ದರೂ ಮನೀಶ್ ಮತ್ತು ಕೆ ಗೌತಮ್ ಅವರ ಉಪಸ್ಥಿತಿಯು ಕರ್ನಾಟಕ ತಂಡಕ್ಕೆ ವಿಶೇಷ ಬಲ ನೀಡುವುದರಲ್ಲಿ ಸಂಶಯ ಇಲ್ಲ. ಆದರೆ, ಈಗಿನ ಕರ್ನಾಟಕ ಪ್ಲೇಯಿಂಗ್ ಇಲವೆನ್ನಲ್ಲಿ ಮನೀಶ್ ಮತ್ತು ಗೌತಮ್ಗಾಗಿ ಯಾರ ಸ್ಥಾನ ತೆರವುಗೊಳಿಸಲಾಗುತ್ತದೆ ಎಂಬುದು ಗೊತ್ತಿಲ್ಲ. ಆ ಕುತೂಹಲ ಸದ್ಯಕ್ಕೆ ಇದೆ. ಫಾರ್ಮ್ನಲ್ಲಿಲ್ಲದ ಕರುಣ್ ನಾಯರ್ ಮತ್ತು ವಿಜಯಕುಮಾರ್ ವಿಶಾಖ್ ಅವರ ಬದಲು ಇವರಿಬ್ಬರು ಕಣಕ್ಕಿಳಿಯುವ ಸಾಧ್ಯತೆಯನ್ನ ತಳ್ಳಿಹಾಕಲು ಸಾಧ್ಯವಿಲ್ಲ.
ಇದನ್ನೂ ಓದಿ: 42 ಎಸೆತಗಳಲ್ಲಿ ಸ್ಪೋಟಕ ಶತಕ: ಸಿಡಿಲಬ್ಬರದ ಸೆಂಚುರಿ ಮೂಲಕ ದಾಖಲೆ ಬರೆದ ಯುವ ಬ್ಯಾಟ್ಸ್ಮನ್
ವಿಜಯ್ ಹಜಾರೆ ಟ್ರೋಫಿಯ ಗ್ರೂಪ್ ಹಂತದ ಪಂದ್ಯಗಳು ನಿನ್ನೆ ಮುಕ್ತಾಯಗೊಂಡಿವೆ. ಕರ್ನಾಟಕವಲ್ಲದೇ ಆಂಧ್ರ, ಗುಜರಾತ್, ಮುಂಬೈ, ಸೌರಾಷ್ಟ್ರ, ಉತ್ತರ ಪ್ರದೇಶ, ಕೇರಳ ಮತ್ತು ಉತ್ತರಾಖಂಡ್ ರಾಜ್ಯ ತಂಡಗಳು ನಾಕೌಟ್ ಹಂತಕ್ಕೆ ಬಂದಿವೆ. ಕರ್ನಾಟಕ ಇದ್ದ ಸಿ ಗುಂಪಿನಲ್ಲಿ ಮೂರು ತಂಡಗಳು ಕ್ವಾಲಿಫೈ ಆಗಿರುವುದು ವಿಶೇಷ. ಉತ್ತರ ಪ್ರದೇಶ ಮತ್ತು ಕೇರಳ ತಂಡಗಳು ಉತ್ತಮ ರನ್ ರೇಟ್ ಆಧಾರದ ಮೇಲೆ ಸಿ ಗುಂಪಿನಲ್ಲಿ ಕರ್ನಾಟಕದೊಂದಿಗೆ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿವೆ.
ಮಾರ್ಚ್ 8 ಮತ್ತು 9ರಂದು ಕ್ವಾರ್ಟರ್ಫೈನಲ್ ಪಂದ್ಯಗಳು ನಡೆಯಲಿವೆ. ಮಾರ್ಚ್ 11ರಂದು ಸೆಮಿಫೈನಲ್ ಪಂದ್ಯಗಳು ನಡೆದರೆ ಮಾರ್ಚ್ 14ರಂದು ಪ್ರಶಸ್ತಿ ಸುತ್ತು ಇರುತ್ತದೆ. ಆದರೆ, ಎಂಟರ ಹಂತದ ಪಂದ್ಯಗಳು ಯಾವ ಸ್ಥಳ ಹಾಗೂ ಯಾವ್ಯಾವ ತಂಡಗಳ ಮಧ್ಯೆ ನಡೆಯುತ್ತವೆ ಎಂಬುದು ನಿಗದಿಯಾಗಿಲ್ಲ.
ಕ್ವಾರ್ಟರ್ಫೈನಲ್ ತಲುಪಿದ ತಂಡಗಳು: ಕರ್ನಾಟಕ, ಆಂಧ್ರ, ಗುಜರಾತ್, ಮುಂಬೈ, ಸೌರಾಷ್ಟ್ರ, ಉತ್ತರ ಪ್ರದೇಶ, ಕೇರಳ ಮತ್ತು ಉತ್ತರಾಖಂಡ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ