Emotion- ಮಗಳನ್ನ ನೋಡಿ ತುಂಬಾ ದಿನ ಆಯ್ತು… ಲಂಕಾ ವಿಶ್ವಕಪ್ ತಂಡ ತೊರೆಯಲಿರುವ ಜಯವರ್ದನೆ

T20 World Cup: ನಿರಂತರವಾಗಿ 135 ದಿನಗಳ ಕಾಲ ಕ್ವಾರಂಟೈನ್, ಬಯೋಬಬಲ್ ವ್ಯವಸ್ಥೆಯಲ್ಲಿ ಇದ್ದು ಸಾಕಾಗಿದ್ದೇನೆ. ಮನೆಯಲ್ಲಿರುವ ಮಗಳನ್ನ ನೋಡುವ ಹಂಬಲವಾಗುತ್ತಿದೆ ಎಂದು ಹೇಳಿರುವ ಲಂಕಾ ತಂಡದ ಸಲಹೆಗಾರ ಮಹೇಲ ಜಯವರ್ದನೆ ತವರಿಗೆ ಮರಳಲು ಅಣಿಯಾಗಿದ್ಧಾರೆ.

ಮಹೇಲ ಜಯವರ್ದನೆ

ಮಹೇಲ ಜಯವರ್ದನೆ

 • Share this:
  ದುಬೈ, ಅ. 23: ಕೋವಿಡ್ ಬಂದ ನಂತರ ಕ್ರಿಕೆಟ್ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಬಯೋಬಬಲ್ ಎಂಬ ವ್ಯವಸ್ಥೆಯಿಂದ ಹೈರಾಣಾಗಿ ಹೋಗುತ್ತಿದ್ಧಾರೆ. ಕೋವಿಡ್ ನಿಯಂತ್ರಣಕ್ಕಾಗಿ ಮಾಡಿರುವ ಈ ವ್ಯವಸ್ಥೆ ಆಟಗಾರರನ್ನ ಮಾನಸಿಕವಾಗಿ ಹಿಂಸೆ ಮಾಡುತ್ತದೆ. ತಂಡಕ್ಕೆ ನಿಗದಿಯಾದ ಸ್ಥಳ ಬಿಟ್ಟು ಎಲ್ಲಿಯೂ ಹೋಗಬಾರದು ಇತ್ಯಾದಿ ನಿರ್ಬಂಧಗಳು ಈ ಬಯೋಬಬಲ್ (Bio Bubble) ವ್ಯವಸ್ಥೆಯಲ್ಲಿ ಇರುತ್ತದೆ. ಕೆಲ ಆಟಗಾರರು ಇದೇ ಕಾರಣಕ್ಕೆ ಐಪಿಎಲ್ ಟೂರ್ನಿಯನ್ನ ಅರ್ಧದಲ್ಲೇ ತೊರೆದು ತಮ್ಮ ಊರಿಗೆ ವಾಪಸ್ ಹೋಗಿದ್ದುಂಟು. ಇದೀಗ ಟಿ20 ವಿಶ್ವಕಪ್​ನಲ್ಲಿ ಶ್ರೀಲಂಕಾ ತಂಡದ ಸಲಹೆಗಾರರಾಗಿರುವ ಮಾಜಿ ಆಟಗಾರ ಮಹೇಲ ಜಯವರ್ದನೆ (Mahela Jayawardene) ಅವರು ತವರಿಗೆ ಹೋಗಲು ನಿರ್ಧರಿಸಿದ್ದಾರೆ.

  ಕ್ವಾರಂಟೈನ್ ಮತ್ತು ಬಯೋಬಬಲ್ ವ್ಯವಸ್ಥೆಗಳಲ್ಲಿ ಹೆಚ್ಚು ಕಾಲದಿಂದ ಇದ್ದರಿಂದ ಮಾನಸಿಕವಾಗಿ ಹಿಂಸೆ ಆಗುತ್ತಿದೆ ಎಂದು ಜಯವರ್ದನೆ ಅವರು ಅಧಿಕೃತವಾಗಿ ಕೊಟ್ಟಿರುವ ಕಾರಣವಾಗಿದೆ. ಆದರೆ, ಕವಟುಂಬಿಕ ಕಾರಣದಿಂದಲೂ ಅವರು ತವರಿಗೆ ವಾಪಸ್ ಹೋಗುತ್ತಿದ್ದಾರೆನ್ನಲಾಗಿದೆ. ತಾನು ತವರಿಗೆ ಹೋದರೂ ಅಲ್ಲಿಂದಲೇ ಲಂಕನ್ ತಂಡಕ್ಕೆ ಅಗತ್ಯ ಸಲಹೆಗಳನ್ನ ನೀಡುವೆ. ಅದಕ್ಕೆಂದೇ ವಿನೂತನ ತಂತ್ರಜ್ಞಾನಗಳಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

  ಮಗಳನ್ನ ಕಾಣದೇ ಬಹಳ ದಿನವಾಯ್ತು…

  “ಇದು ಬಹಳ ಕಷ್ಟ ಆಗುತ್ತಿದೆ. ಜೂನ್ ತಿಂಗಳಿಂದೀಚೆ 135 ದಿನಗಳ ಕಾಲ ಕ್ವಾರಂಟೈನ್ ಮತ್ತು ಬಬಲ್​ಗಳಲ್ಲಿ ನಾನಿದ್ದೇನೆ. ಈಗ ಕೊನೆಯ ಹಂತವೇನೋ ಇದೆ ಎಂಬುದು ನನಗೆ ಗೊತ್ತು. ಆದರೆ, ತಂತ್ರಜ್ಞಾನದ ಸಹಾಯದಿಂದ ಮನೆಯಲ್ಲಿದ್ದುಕೊಂಡೇ ನಾನು ತಂಡಕ್ಕೆ ಸಹಾಯ ಮಾಡಬಲ್ಲೆ. ಹಲವು ದಿನಗಳ ಕಾಲ ಮಗಳನ್ನ ಕಾಣದೇ ಪರಿತಪಿಸುತ್ತಿರುವ ಒಬ್ಬ ತಂದೆಯ ಭಾವನೆಯನ್ನ ಯಾರಾದರೂ ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸಿದ್ಧೇವೆ. ನಾನು ಮನೆಗೆ ವಾಪಸ್ ಹೋಗಲೇಬೇಕು” ಎಂದು ಮಹೇಲ ಜಯವರ್ದನೆ ಹೇಳಿದ್ದಾರೆ.

  ಇದನ್ನೂ ಓದಿ: (Video) ಕ್ರಿಕೆಟ್ ಮಧ್ಯೆ Squid Gameನಲ್ಲಿ ಕೊಹ್ಲಿ ಟೀಮ್; ಮಕ್ಕಳಾಟದಂತಿರುವ ಸ್ಕ್ವಿಡ್ ಇಷ್ಟು ಜನಪ್ರಿಯ ಯಾಕೆ?

  ಲಂಕಾ ತಂಡದಲ್ಲಿ ಸುಧಾರಣೆಗೆ ಗುರಿ: 

  ತಂಡದ ಆಟದಲ್ಲಿ ಸುಧಾರಣೆ ತರುವ ವಿಚಾರದ ಬಗ್ಗೆ ಈ ಸಂದರ್ಭದಲ್ಲಿ ಮಹೇಲ ಒಂದಷ್ಟು ಸಲಹೆ ನೀಡಿದ್ದಾರೆ. “ನಾವು ವೈಯಕ್ತಿಕವಾಗಿ ಇದನ್ನ ಮಾತನಾಡಿದ್ಧೇವೆ. ತಂಡದ ಆಟಗಾರರ ಬ್ಯಾಟಿಂಗ್ ಅನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಬೌಲಿಂಗ್ ಸಮರ್ಪಕವಾಗಿದೆ. ನಾವು ಇಟ್ಟುಕೊಂಡ ಗುರಿಯನ್ನ ಮುಟ್ಟುತ್ತಿದ್ದೇವೆ. ಮುಂದಿನ ಪಂದ್ಯಗಳು ಇನ್ನಷ್ಟು ಕಠಿಣಗೊಳ್ಳುವುದರಿಂದ ತಂಡದ ಆಟಗಾರರು ಇನ್ನಷ್ಟು ಉತ್ತಮಗೊಳ್ಳುತ್ತಾ ಹೋಗಬೇಕು” ಎಂದು ಜಯವರ್ದನೆ ಅಭಿಪ್ರಾಯಪಟ್ಟಿದ್ಧಾರೆ.

  44 ವರ್ಷದ ಮಹೇಲ ಜಯವರ್ದನೆ ಅವರು ಟಿ20 ವಿಶ್ವಕಪ್​ನ ಶ್ರೀಲಂಕಾ ತಂಡದ ಸಲಹೆಗಾರರಾಗಿ ಬರುವ ಮುನ್ನ ಇಂಗ್ಲೆಂಡ್​ನಲ್ಲಿ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯ ಸದರ್ನ್ ಬ್ರೇವ್ಸ್ ಎಂಬ ತಂಡಕ್ಕೆ ಕೋಚ್ ಆಗಿ ಕೆಲಸ ಮಾಡಿದ್ದರು. ಬಳಿಕ ಅವರು ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ದರು.

  ಮುಂದಿನ ವರ್ಷ ನಡೆಯಲಿರುವ ಕಿರಿಯರ ವಿಶ್ವಕಪ್​ಗೆ ಲಂಕಾದ ಅಂಡರ್-19 ತಂಡದ ಕನ್ಸಲ್ಟೆಂಟ್ ಮತ್ತು ಮೆಂಟಾರ್ ಆಗಿ ಮಹೇಲಾ ಅವರು ಕರ್ತವ್ಯ ನಿಭಾಯಿಸಲಿದ್ಧಾರೆ.

  ಜಯವರ್ದೆನೆಗೆ ಬೇಡಿಕೆ ಹೆಚ್ಚು:

  ಕೋಚಿಂಗ್ ಹುದ್ದೆಗಳು ಮಹೇಲಾ ಜಯವರ್ದನೆ ಅವರನ್ನ ಅರಸಿ ಬರುತ್ತಿವೆ ಎನ್ನಲಾಗುತ್ತಿದೆ. 18 ವರ್ಷ ಆಟಗಾರನಾಗಿ ಸಾಕಷ್ಟು ಯಶಸ್ಸು ಕಂಡಿರುವ ಅವರು ಕೋಚ್ ಆಗಿಯೂ ಮೆಚ್ಚುಗೆ ಗಳಿಸಿದ್ದಾರೆ. ಕೆಲವಾರು ದೇಶಗಳ ತಂಡಗಳಿಗೆ ಕೋಚ್ ಆಗುವ ಅವಕಾಶ ಅವರಿಗೆ ಬರುತ್ತಿವೆ. ಆದರೆ, ಜಯವರ್ದನೆ ಅವುಗಳಲ್ಲಿ ಯಾವ ಆಸಕ್ತಿಯನ್ನೂ ತೋರುವುದಿಲ್ಲ. “18 ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ನಾನು ಈಗ ವರ್ಷಕ್ಕೆ 12 ತಿಂಗಳೂ ಹೊರಗೆ ಇರಲು ಇಚ್ಛಿಸುವುದಿಲ್ಲ. ನನ್ನ ಕುಟುಂಬದ ಜೊತೆ ಸಮಯ ಕಳೆಯಬೇಕಾಗುವುದರಿಂದ ಹೆಚ್ಚು ಟೂರ್ನಿಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಶ್ರೀಲಂಕಾ ತಂಡಕ್ಕೆ ಆಗೊಮ್ಮೆ ಹೀಗೊಮ್ಮೆ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಲು ಸಂತೋಷ ಆಗುತ್ತದೆ. ಆದರೆ, ಪೂರ್ಣಾವಧಿ ಅದೇ ಕೆಲಸ ಮಾಡಬೇಕೆಂದರೆ ವೈಯಕ್ತಿಕವಾಗಿ ಅದು ನನಗೆ ಖುಷಿಕೊಡುವುದಿಲ್ಲ” ಎಂದು ಕೆಲ ತಿಂಗಳ ಹಿಂದೆ ಮಹೇಲ ಜಯವರ್ದನೆ ಅವರು ಸ್ಕೈ ಸ್ಪೋರ್ಟ್ಸ್​ನ ಸಂದರ್ಶನದಲ್ಲಿ ಹೇಳಿದ್ದರು.
  Published by:Vijayasarthy SN
  First published: