LPL 2020: ಲಂಕಾ ಪ್ರೀಮಿಯರ್ ಲೀಗ್ ಆಡುತ್ತಿರುವ ಭಾರತೀಯ ಕ್ರಿಕೆಟರುಗಳು ಇವರೇ..!

ಈ ವೇಳೆ 5 ರಿಂದ 8 ಆಟಗಾರರು ಆಸಕ್ತಿ ಹೊಂದಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಕೆಲ ತಿಂಗಳ ಹಿಂದೆ ಈ ಪಟ್ಟಿಯಲ್ಲಿದ್ದ ಮಾಜಿ ಕೆಕೆಆರ್ ತಂಡದ ಆಟಗಾರ ಮನ್ವಿಂದರ್ ಬಿಸ್ಲಾ ವೈಯುಕ್ತಿಕ ಕಾರಣಗಳಿಂದ ಹೊರಗುಳಿಯುವುದಾಗಿ ತಿಳಿಸಿದ್ದರು.

LPL

LPL

  • Share this:
    ಬಿಸಿಸಿಐ ನಿಯಮ ಪ್ರಕಾರ ಭಾರತೀಯ ಕ್ರಿಕೆಟಿಗರು ಇಂಡಿಯನ್ ಪ್ರೀಮಿಯರ್ ಲೀಗ್ ಹೊರತುಪಡಿಸಿ ವಿದೇಶಿ ಲೀಗ್​ನಲ್ಲಿ ಭಾಗವಹಿಸುವಂತಿಲ್ಲ. ಇದೇ ಕಾರಣದಿಂದ ಪ್ರಸಿದ್ಧ ಬಿಗ್ ಬ್ಯಾಷ್​ ಲೀಗ್​ನಲ್ಲಾಗಲಿ ಅಥವಾ ಕೆರಿಬಿಯನ್ ಪ್ರೀಮಿಯರ್​ ಲೀಗ್​ನಲ್ಲಾಗಲಿ ಭಾರತೀಯ ಆಟಗಾರರು ಕಂಡು ಬರುವುದಿಲ್ಲ.  ಒಂದು ವೇಳೆ ವಿದೇಶಿ ಲೀಗ್​ನಲ್ಲಿ ಪಾಲ್ಗೊಂಡರೆ ಅಂತಹ ಕ್ರಿಕೆಟಿಗರು ಐಪಿಎಲ್ ಹಾಗೂ ಭಾರತೀಯ ತಂಡದ ಆಯ್ಕೆಗೆ ಅನರ್ಹರಾಗಲಿದ್ದಾರೆ. ಆದರೆ ಇದೀಗ ಶ್ರೀಲಂಕಾದಲ್ಲಿ ಶುರುವಾಗಲಿರುವ ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ನಾಲ್ವರು ಭಾರತೀಯ ಕ್ರಿಕೆಟಿಗರು ಕಾಣಿಸಿಕೊಳ್ಳುತ್ತಿದ್ದಾರೆ.

    ಲಂಕಾ ಪ್ರೀಮಿಯರ್ ಲೀಗ್ ಸಿದ್ಧತೆಗಳು ಪ್ರಾರಂಭವಾದ ಬೆನ್ನಲ್ಲೇ ಟೂರ್ನಿಯಲ್ಲಿ ಭಾರತೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಈ ವೇಳೆ 5 ರಿಂದ 8 ಆಟಗಾರರು ಆಸಕ್ತಿ ಹೊಂದಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಕೆಲ ತಿಂಗಳ ಹಿಂದೆ ಈ ಪಟ್ಟಿಯಲ್ಲಿದ್ದ ಮಾಜಿ ಕೆಕೆಆರ್ ತಂಡದ ಆಟಗಾರ ಮನ್ವಿಂದರ್ ಬಿಸ್ಲಾ ವೈಯುಕ್ತಿಕ ಕಾರಣಗಳಿಂದ ಹೊರಗುಳಿಯುವುದಾಗಿ ತಿಳಿಸಿದ್ದರು. ಇದರ ಹೊರತಾಗಿಯೂ ನಾಲ್ವರು ಆಟಗಾರರು ಭಾಗವಹಿಸುವುದು ಕನ್ಫರ್ಮ್​ ಆಗಿದೆ. ಅವರೆಂದರೆ...

    ಮುನಾಫ್ ಪಟೇಲ್: 2011 ರ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ವೇಗಿ ಮುನಾಫ್ ಪಟೇಲ್ ಬಳಿಕ ತಂಡದಿಂದ ಹೊರಬಿದ್ದಿದ್ದರು. ಇದಾಗ್ಯೂ ಅವರು 2016ರವರೆಗೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ದರು. ನಿವೃತ್ತಿಯ ಬಳಿಕ 2018ರಲ್ಲಿ ದುಬೈನಲ್ಲಿ ನಡೆದ ಟಿ10 ಲೀಗ್‌ನ ಭಾಗವಾಗಿದ್ದರು. ಇದೀಗ ಮತ್ತೆ ಸ್ಪರ್ಧಾತ್ಮಕ ಲೀಗ್ ಕ್ರಿಕೆಟ್​ನತ್ತ ಮುನಾಫ್ ಪಟೇಲ್ ಮುಖ ಮಾಡಿದ್ದಾರೆ. ಎಲ್​ಪಿಎಲ್​ನ ಕ್ಯಾಂಡಿ ಟಸ್ಕರ್ಸ್​ ಪರ ಟೀಮ್ ಇಂಡಿಯಾ ಮಾಜಿ ವೇಗಿ ಕಣಕ್ಕಿಳಿಯಲಿದ್ದಾರೆ.

    ಇರ್ಫಾನ್ ಪಠಾಣ್: ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಬಳಿಕ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಂಡಿದ್ದರು. ಇದರ ನಡುವೆ 2020ರಲ್ಲಿ ರೋಡ್ ಸೇಫ್ಟಿ ಮ್ಯಾಚ್​ನಲ್ಲಿ 32 ಎಸೆತಗಳಲ್ಲಿ 58 ರನ್ ಗಳಿಸುವ ಗಮನ ಸೆಳೆದಿದ್ದರು. 2007 ರ ಟಿ 20 ವಿಶ್ವಕಪ್ ಚಾಂಪಿಯನ್ ತಂಡದ ಭಾಗವಾಗಿದ್ದ ಪಠಾಣ್, ಐಪಿಎಲ್​ನಲ್ಲಿ ಮಿಂಚಿದ್ದು ಕಡಿಮೆ. ಇದೇ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ನಿವೃತ್ತಿ ಘೋಷಿಸಿದರು. ಇವೆಲ್ಲದರ ನಡುವೆ ಇದೀಗ ಅಚ್ಚರಿ ಎಂಬಂತೆ ಇರ್ಫಾನ್ ಪಠಾಣ್ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಅವಕಾಶ ಪಡೆದಿದ್ದಾರೆ. ಕ್ಯಾಂಡಿ ಟಸ್ಕರ್ಸ್ ತಂಡದಲ್ಲಿ ಆಲ್​ರೌಂಡರ್​ ಆಗಿ ಪಠಾಣ್ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

    ಮನ್‌ಪ್ರೀತ್ ಗೋನಿ: 2008 ರ ಏಷ್ಯಾಕಪ್‌ನಲ್ಲಿ ಕೇವಲ ಎರಡು ಪಂದ್ಯಗಳ ನಂತರ ಮನ್​ಪ್ರೀತ್ ಗೋನಿ ಭಾರತ ತಂಡದಲ್ಲಿ ಮತ್ತೆ ಕಾಣಿಸಿಕೊಂಡಿರಲಿಲ್ಲ. ಇದಾಗ್ಯೂ ಐಪಿಎಲ್​ನಲ್ಲಿ ಆರು ಸೀಸನ್​ಗಳಲ್ಲಿ ಭಾಗವಹಿಸಿದ್ದರು. ಅದರಲ್ಲೂ ಸಿಎಸ್​ಕೆ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದರು.2019 ರಲ್ಲಿ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಕೆನಡಾ ಗ್ಲೋಬಲ್ ಟಿ 20 ಆಡಿದ್ದರು. ಇದೀಗ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಕೊಲೊಂಬೊ ಕಿಂಗ್ಸ್ ತಂಡದಲ್ಲಿ ಗೋನಿ ಸ್ಥಾನ ಪಡೆದುಕೊಂಡಿದ್ದಾರೆ.

    ಸುದೀಪ್ ತ್ಯಾಗಿ: 2009 ರ ಐಪಿಎಲ್​ನಲ್ಲಿ ಸಿಎಸ್​ಕೆ ತಂಡ ಪ್ರಮುಖ ವೇಗಿಯಾಗಿ ಸುದೀಪ್ ತ್ಯಾಗಿ ಕಾಣಿಸಿಕೊಂಡಿದ್ದರು. ಉತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ 2009/10 ರಲ್ಲಿ ನಾಲ್ಕು ಏಕದಿನ ಮತ್ತು ಒಂದು ಟಿ 20 ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ದೇಶಿಯ ಕ್ರಿಕೆಟ್​ ಮುಂದುವರೆಸಿದರೂ ಸುದೀಪ್ ತ್ಯಾಗಿಗೆ ಐಪಿಎಲ್​ನಲ್ಲಿ ಹೆಚ್ಚಿನ ಅವಕಾಶ ದೊರೆತಿರಲಿಲ್ಲ. ಅಲ್ಲದೆ ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಇದೀಗ ಎಲ್​ಪಿಎಲ್​ನ ದಂಬುಲ್ಲಾ ವೈಕಿಂಗ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
    Published by:zahir
    First published: