ಧರ್ಮಶಾಲಾ: ಪ್ಲೇ ಆಫ್ ರೇಸ್ನಿಂದ (Playoff) ಹೊರಬಿದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಔಪಚಾರಿಕವಾದ ಐಪಿಎಲ್ನ 64ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಭರ್ಜರಿ ಪ್ರದರ್ಶನ ತೋರಿ 15 ರನ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಡೆಲ್ಲಿ ತಂಡ, ಪಂಜಾಬ್ ಕಿಂಗ್ಸ್ ತಂಡದ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಿದೆ. ದಶಕಗಳ ನಂತರ ನಡೆದ ಮೊದಲ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಬರೋಬ್ಬರಿ 213ರನ್ಗಳಿಸಿತ್ತು. ಇದಕ್ಕುತ್ತರವಾಗಿ ಪಂಜಾಬ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 198 ರನ್ಗಳಿಸಿ 15 ರನ್ಗಳ ಸೋಲೊಪ್ಪಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಉತ್ತಮ ಆರಂಭ ಒದಗಿಸಿಕೊಟ್ಟರು. ವಾರ್ನರ್ 31 ಎಸೆತಗಳಲ್ಲಿ 46 ರನ್ಗಳಿಸಿದರೆ, ಶಾ38 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 54 ರನ್ ಗಳಿಸಿದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರಿಲೀ ರೂಸೋ 37 ಎಸೆತಗಳಲ್ಲಿ ತಲಾ 6 ಬೌಂಡರಿ ಹಾಗೂ 6 ಸಿಕ್ಸರ್ಗಳ ನೆರವಿನಿಂದ ಅಜೇಯ 82ರನ್ ಹಾಗೂ ಪೀಟರ್ ಸಾಲ್ಟ್ 14 ಎಸೆತಗಳಲ್ಲಿ 26 ರನ್ಗಳಿಸಿ 213 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾದರು.
ಪಂಜಾಬ್ ಕಿಂಗ್ಸ್ ಒರ ಸ್ಯಾಮ್ ಕರನ್ ಮಾತ್ರ ವಿಕೆಟ್ ಪಡೆಯುವಲ್ಲಿ ಸಫಲರಾದರು. ಇವರು 4 ಓವರ್ಗಳಲ್ಲಿ 36 ರನ್ ನೀಡಿ 2 ವಿಕೆಟ್ ಪಡೆದರು. ಉಳಿದ ಬೌಲರ್ಗಳು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಲ್ಲದೆ, ರನ್ಗಳಿಗಡೆ ಕಡಿವಾಡ ಹಾಕುವಲ್ಲಿಯೂ ವಿಫಲರಾದರು.
ಲಿವಿಂಗ್ಸ್ಟೋನ್ ಆಟ ವ್ಯರ್ಥ
214 ರನ್ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 198 ರನ್ಗಳಿಸಲಷ್ಟೇ ಶಕ್ತವಾಯಿತು. ನಾಯಕ ಶಿಖರ್ ಧವನ್ (0) ಕಳೆದ ಪಂದ್ಯದ ಶತಕವೀರ ಪ್ರಭಸಿಮ್ರಾನ್ ಸಿಂಗ್ (22) ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು.
ಆದರೆ 3ನೇ ವಿಕೆಟ್ಗೆ ಒಂದಾದ ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಅಥರ್ವ ತೈಡೆ 78 ರನ್ಗಳ ಜೊತೆಯಾಟ ನೀಡಿದರು. ಲಿವಿಂಗ್ಸ್ಟೋನ್ 48 ಎಸೆತಗಳಲ್ಲಿ 5 ಬೌಂಡರಿ 9 ಸಿಕ್ಸರ್ಗಳ ನೆರವಿನಿಂದ 94 ರನ್ಗಳಿಸಿದರೆ ಅಥರ್ವ ತೈಡೆ 42 ಎಸೆತಗಳಲ್ಲಿ 55 ರನ್ಗಳಿಸಿ ಗೆಲುವಿಗಾಗಿ ಪ್ರತಿರೋಧ ನಡೆಸಿದರೂ ತಂಡವನ್ನು ಗೆಲುವಿನ ಗಡಿ ದಾಟಿಸಲು ವಿಫಲರಾದರು.
ಮಧ್ಯಮ ಕ್ರಮಾಂಕ ವಿಫಲ
ಲಿವಿಂಗ್ಸ್ಟೋನ್ ಒಂದು ಕಡೆ ಅಬ್ಬರ ಬ್ಯಾಟಿಂಗ್ ಮಾಡುತ್ತಿದ್ದರೆ, ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟರ್ ಇವರಿಗೆ ಸಾಥ್ ನೀಡುವಲ್ಲಿ ವಿಫಲರಾದರು. ಜಿತೇಶ್ ಶರ್ಮಾ(0), ಶಾರುಖ್ ಖಾನ್(6), ಸ್ಯಾಮ್ ಕರನ್ (11), ಹರ್ಪ್ರೀತ್ ಬ್ರಾರ್(0) ವಿಫಲರಾಗಿದ್ದು ತಂಡಕ್ಕೆ ಹಿನ್ನಡೆಯಾಯಿತು.
ಪಂಜಾಬ್ ಪ್ಲೇಆಫ್ ಕನಸು ಭಗ್ನ
ಪಂಜಾಬ್ ಕಿಂಗ್ಸ್ ಈ ಪಂದ್ಯದ ಸೋಲಿನೊಂದಿಗೆ 13 ಪಂದ್ಯಗಳಲ್ಲಿ 7 ಸೋಲು ಹಾಗೂ 6 ಗೆಲುವಿನೊಂದಿಗೆ 12 ಅಂಕ ಪಡೆದಿದ್ದು, ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಉಳಿದ ಒಂದು ಪಂದ್ಯ ಗೆದ್ದರೂ ಕೂಡ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಇಲ್ಲ. ಏಕೆಂದರೆ ಈಗಾಗಲೇ ಮೂರು ತಂಡಗಳು 15 ಕ್ಕೂ ಹೆಚ್ಚಿನ ಅಂಕವನ್ನು ಹೊಂದಿವೆ. ಮುಂಬೈ 14 ಅಂಕ ಹೊಂದಿದೆ, ಇನ್ನೊಂದು ಪಂದ್ಯ ಗೆದ್ದರೆ, ಆ ತಂಡ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇದೆ. ಇತ್ತ ಆರ್ಸಿಬಿ ಕೂಡ 12 ಅಂಕ ಹೊಂದಿದ್ದರೂ, ಇನ್ನೂ 2 ಪಂದ್ಯಗಳು ಬಾಕಿ ಉಳಿದಿವೆ. ಇವೆರಡನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಹಾಗಾಗಿ ರನ್ರೇಟ್ನಲ್ಲೂ ಋಣಾತ್ಮಕ ಅಂಕ ಹೊಂದಿರುವ ಪಂಜಾಬ್ ಟೂರ್ನಿಯಿಂದ ಹೊರ ಬಿದ್ದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ