Cricket World Cup 2019, IND vs AUS: ಆಸೀಸ್​ಗೆ ಮಣ್ಣು ಮುಕ್ಕಿಸಿದ ಭಾರತ; 36 ರನ್​ಗಳ ರೋಚಕ ಜಯ

India vs Australia Live Score: ಅರ್ಧಶತಕ ಸಿಡಿಸಿ ಕ್ರೀಸ್​ ಕಚ್ಚಿ ಆಡುತ್ತಿದ್ದ ಸ್ಮಿತ್ ತಂಡದ ಗೆಲುವಿಗಾಗಿ ಕಠಿಣ ಹೋರಾಟ ನಡೆಸುತ್ತಿದ್ದರು. ಆದರೆ ಪ್ರಮುಖ ಹಂತದಲ್ಲೇ ಭುವಿ ಸ್ಮಿತ್​ರನ್ನು ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರು.

ಸಂಭ್ರಮಿಸುತ್ತಿರುವ ಟೀಂ ಇಂಡಿಯಾ ಆಟಗಾರರು

ಸಂಭ್ರಮಿಸುತ್ತಿರುವ ಟೀಂ ಇಂಡಿಯಾ ಆಟಗಾರರು

  • News18
  • Last Updated :
  • Share this:
ಬೆಂಗಳೂರು (ಜೂ. 09): ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್​ಗಳ ರೋಚಕ ಜಯ ಸಾಧಿಸಿದೆ. ಬ್ಯಾಟ್ಸ್​ಮನ್​ಗಳ ಅಮೋಘ ಪ್ರದರ್ಶನ ಹಾಗೂ ಕೊನೆ ಹಂತದಲ್ಲಿ ಕಮ್​ಬ್ಯಾಕ್​ ಮಾಡಿದ ಬೌಲರ್​ಗಳ ನೆರವಿನಿಂದ ಭಾರತ ವಿಶ್ವಕಪ್​ನಲ್ಲಿ ಸತತ ಎರಡನೇ ಜಯ ಸಾಧಿಸಿದರೆ, ಆಸ್ಟ್ರೇಲಿಯಾ ಮೊದಲ ಸೋಲುಂಡಿದೆ.

ಭಾರತ ನೀಡಿದ್ದ 353 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ಆಸೀಸ್ ಉತ್ತಮ ಆರಂಭ ಪಡೆದುಕೊಂಡಿತಾದರು, ಮಧ್ಯಮ ಕ್ರಮಾಂಕದಲ್ಲಿ ಮತ್ತೆ ಎಡವಿತು. ಓಪನರ್​ಗಳಾದ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಪವರ್ ಪ್ಲೇ ಓವರ್ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡು ಮೊದಲ ವಿಕೆಟ್​ಗೆ 61 ರನ್​ಗಳ ಜೊತೆಯಾಟ ನೀಡಿದರು. 36 ರನ್ ಗಳಿಸಿರುವಾಗ ಫಿಂಚ್ ಕೇದರ್ ಜಾಧವ್​ರಿಂದ ರನೌಟ್​ಗೆ ಬಲಿಯಾಗಿ ಮೊದಲನೆಯವರಾಗಿ ಪೆವಿಲಿಯನ್ ಸೇರಿಕೊಂಡರು.

ಬಳಿಕ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು. 72 ರನ್​ಗಳ ಜೊತೆಯಾಟ ಆಡಿದ ಈ ಜೋಡಿ ಉತ್ತಮ ಆಟ ಪ್ರದರ್ಶಿಸುತ್ತಿತ್ತು. ಆದರೆ ಚಹಾಲ್ ಸ್ಪಿನ್ ಮೋಡಿಗೆ ವಾರ್ನರ್(56) ಅರ್ಧಶತಕ ಬಾರಿಸಿ ಔಟ್ ಆದರು. ಉಸ್ಮಾನ್ ಖ್ವಾಜಾ ಕೆಲ ಹೆಚ್ಚು ಬ್ಯಾಟ್ ಬೀಸಿ 42 ರನ್​ಗೆ ನಿರ್ಗಮಿಸಿದರು.

ಇತ್ತ ಅರ್ಧಶತಕ ಸಿಡಿಸಿ ಕ್ರೀಸ್​ ಕಚ್ಚಿ ಆಡುತ್ತಿದ್ದ ಸ್ಮಿತ್ ತಂಡದ ಗೆಲುವಿಗಾಗಿ ಕಠಿಣ ಹೋರಾಟ ನಡೆಸುತ್ತಿದ್ದರು. ಆದರೆ ಪ್ರಮುಖ ಹಂತದಲ್ಲೇ ಭುವಿ ಸ್ಮಿತ್​ರನ್ನು ಪೆವಿಲಿಯನ್​ಗೆ ಅಟ್ಟುವಲ್ಲಿ ಯಶಸ್ವಿಯಾದರು. 70 ಎಸೆತಗಳಲ್ಲಿ 69 ರನ್ ಬಾರಿಸಿ ಸ್ಮಿತ್ ಎಲ್​ಬಿ ಬಲೆಗೆ ಬಲಿಯಾದರೆ, ಅದೇ ಓವರ್​ನಲ್ಲಿ ಮಾರ್ಕಸ್ ಸ್ಟಾಯಿನಿಸ್​(0) ರನ್ನು ಭುವಿ ಬೌಲ್ಡ್​ ಮಾಡಿದರು. ಮ್ಯಾಕ್ಸ್​ವೆಲ್​ ಕೂಡ ತಂಡಕ್ಕೆ​ ಆಧಾರವಾಗದೆ 28 ರನ್​ಗೆ ನಿರ್ಗಮಿಸಿದರೆ, ಕಳೆದ ಪಂದ್ಯದಲ್ಲಿ ಮಿಂಚಿದ್ದ ಕಲ್ಟರ್ ನೇಲ್ ಆಟ ಕೇವಲ 4 ರನ್​ಗೆ ಅಂತ್ಯವಾಯಿತು.

ಆದರೆ, ಕೊನೆ ಹಂತದ ವರೆಗೂ ಅಲೆಕ್ಸ್​ ಕ್ಯಾರಿ ಭಾರತೀಯ ಬೌಲರ್​ಗಳನ್ನು ಕಾಡಿದರಾದರು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಲಿಲ್ಲ. 33 ಎಸೆತಗಳಲ್ಲಿ 55 ರನ್ ಬಾರಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್​ಗೆನೇ 316 ರನ್​ಗೆ ಆಲೌಟ್ ಆಗಿ ಸೋಲೊಪ್ಪಿಗೊಂಡಿತು. ಭಾರತ ಪರ ಜಸ್​ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ತಲಾ  3 ವಿಕೆಟ್ ಕಿತ್ತು ಮಿಂಚಿದರೆ, ಯಜುವೇಂದ್ರ ಚಹಾಲ್ 2 ವಿಕೆಟ್ ಪಡೆದರು.

36 ರನ್​ಗಳ ಗೆಲುವಿನೊಂದಿಗೆ ಕೊಹ್ಲಿ ಪಡೆ ವಿಶ್ವಕಪ್​ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಶತಕ ಸಿಡಿಸಿ ಮಿಂಚಿದ ಶಿಖರ್ ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

 



ಇದಕ್ಕೂ ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಆಸೀಸ್ ಬೌಲರ್​ಗಳ ಬೆವರಿಳಿಸಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಇವರಿಬ್ಬರು ಮೊದಲ ವಿಕೆಟ್​ಗೆ 127 ರನ್​ಗಳ ಅಮೋಘ ಕಾಣಿಕೆ ನೀಡಿದರು. ಈ ಮಧ್ಯೆ ರೋಹಿತ್ ಅರ್ಧಶತಕ ಬಾರಿಸಿದ ಬೆನ್ನಲ್ಲೆ 57 ರನ್​ಗೆ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

ಬಳಿಕ ಧವನ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಅವರಿಂದ ಮತ್ತೊಂದು ಅದ್ಭುತ ಇನ್ನಿಂಗ್ಸ್​ ಮೂಡಿಬಂತು. ಬಿರುಸಿನ ಆಟ ಪ್ರದರ್ಶಿಸಿದ ಈ ಜೋಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಧವನ್ 95 ಎಸೆತಗಳಲ್ಲಿ 17ನೇ ಶತಕ ಬಾರಿಸಿ ಮಿಂಚಿದರು. ಆದರೆ, ಶತಕ ಸಿಡಿಸಿ ಧವನ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 109 ಎಸೆತಗಳಲ್ಲಿ 117 ರನ್ ಗಳಿಸಿ ಧವನ್ ಬ್ಯಾಟ್ ಕೆಳಗಿಟ್ಟರು.

 



3ನೇ ವಿಕೆಟ್​ಗೆ ಕೊಹ್ಲಿ ಜೊತೆಯಾಗಿರುವ ಹಾರ್ದಿಕ್ ಪಾಂಡ್ಯ ಎಂದಿನಂತೆ ತಮ್ಮ ಖದರ್  ತೋರಿಸಿದರು. ಕೇವಲ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದ ಹಾರ್ದಿಕ್ 48 ರನ್ ಚಚ್ಚಿದರು. ಕೊನೆಯಲ್ಲಿ ಎಂ ಎಸ್ ಧೋನಿ(27) ಹಾಗೂ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದ ಪರಿಣಾಮ ತಂಡದ ಮೊತ್ತ 50 ಓವರ್​ಗೆ 5 ವಿಕೆಟ್ ಕಳೆದುಕೊಂಡು 352 ರನ್ ಕಲೆಹಾಕಿತು.

ವಿರಾಟ್ ಕೊಹ್ಲಿ 77 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಿಡಿಸಿ 82 ರನ್​ಗೆ ಕೊನೆಯ ಓವರ್​ನಲ್ಲಿ ಔಟ್ ಆದರು. ಆಸೀಸ್ ಪರ ಮಾರ್ಕಸ್ ಸ್ಟಾಯಿನಿಸ್ 2 ವಿಕೆಟ್ ಕಿತ್ತರೆ ಪ್ಯಾಟ್ ಕಮಿನ್ಸ್​, ಮಿಚೆಲ್ ಸ್ಟಾರ್ಕ್​​​​ ಹಾಗೂ ಕಲ್ಟರ್ ನೈಲ್ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯದಲ್ಲಾದ ದಾಖಲೆ:

  • ರೋಹಿತ್​ ಶರ್ಮಾರಿಂದ ಆಸ್ಟ್ರೇಲಿಯಾ ವಿರುದ್ಧ ಅತಿ ವೇಗವಾಗಿ 2 ಸಾವಿರ ರನ್ ಕಲೆಹಾಕಿದ ದಾಖಲೆ

  • ಏಕದಿನ ಕ್ರಿಕೆಟ್‌ನಲ್ಲಿ 16ನೇ ಬಾರಿಗೆ ಶತಕದ ಜೊತೆಯಾಟ ಆಡಿದ ಶಿಖರ್ ಧವನ್- ರೋಹಿತ್ ಶರ್ಮಾ

  • ಭಾರತ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ತಂಡವಾಗಿ ಹೊರಹೊಮ್ಮಿದೆ (27 ಆಟಗಾರರಿಂದ ಶತಕ)

  • ಶಿಖರ್ ಧವನ್ ಅಮೋಘ ಶತಕ ಸಿಡಿಸುವ ಮೂಲಕ ಐಸಿಸಿ ಆಯೋಜಿಸಿರುವ ಟೂರ್ನಿಗಳಲ್ಲಿ 6ನೇ ಶತಕ ದಾಖಲಿಸಿ ರಿಕಿ ಪಾಂಟಿಂಗ್​, ಕುಮಾರ್​ ಸಂಗಕ್ಕಾರ ದಾಖಲೆ ಸರಿಗಟ್ಟಿದ್ದಾರೆ


ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಕೆ ಎಲ್ ರಾಹುಲ್, ಎಂಎಸ್ ಧೋನಿ, ಕೇದರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್ (ನಾಯಕ), ಉಸ್ಮಾನ್ ಖ್ವಾಜಾ, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟಾಯಿನಿಸ್, ಗ್ಲೆನ್ ಮ್ಯಾಕ್ಸ್​ವೆಲ್​, ಅಲೆಕ್ಸ್​ ಕ್ಯಾರಿ, ನೇಥನ್ ಕಲ್ಟರ್ ನೈಲ್, ಪ್ಯಾಟ್ ಕಮಿನ್ಸ್​, ಮಿಚೆಲ್ ಸ್ಟಾರ್ಕ್​​, ಆ್ಯಡಂ ಜಂಪಾ.
First published: