ಬೆಂಗಳೂರು (ಜೂ. 03): ನ್ಯಾಟಿಂಗ್ಹ್ಯಾಮ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ನ ಆರನೇ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದೆ. ಜೋ ರೂಟ್ ಹಾಗೂ ಜಾಸ್ ಬಟ್ಲರ್ರ ಶತಕದ ಹೊರತಾಗಿಯು ಇಂಗ್ಲೆಂಡ್ ಮೊದಲ ಸೋಲುಂಡಿದ್ದು, 14 ರನ್ಗಳ ಜಯದೊಂದಿಗೆ ಪಾಕಿಸ್ತಾನ ಗೆಲುವಿನ ಲಯಕ್ಕೆ ಮರಳಿದೆ.
ಪಾಕಿಸ್ತಾನ ನೀಡಿದ್ದ ಬೃಹತ್ 349 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ತನ್ನ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿತು. 8 ರನ್ ಗಳಿಸಿರುವಾಗ ಜೇಸನ್ ರಾಯ್ ಅವರು ಶದಬ್ ಖಾನ್ ಬೌಲಿಂಗ್ನಲ್ಲಿ ಎಲ್ಗಿ ಬಲೆಗೆ ಬಲಿಯಾದರೆ, ಚೆನ್ನಾಗಿಯೆ ಆಡುತ್ತಿದ್ದ ಜಾನಿ ಬೈರ್ಸ್ಟೋ 32 ರನ್ ಗಳಿಸಿ ಕೀಪರ್ಗೆ ಕ್ಯಾಚಿತ್ತು ನಿರ್ಗಮಿಸಿದ್ದಾರೆ.
ಈ ಸಂದರ್ಭ ಜೋ ರೂಟ್ ಜೊತೆಯಾದ ನಾಯಕ ಇಯಾನ್ ಮಾರ್ಗನ್ ಇನ್ನಿಂಗ್ಸ್ ಕಟ್ಟಲು ಮುಂದಾದರಾದರು, ಹಫೀಜ್ ಬೌಲಿಂಗ್ನಲ್ಲಿ ಮಾರ್ಗನ್(9) ಬೌಲ್ಡ್ ಆಗಿ ಆಘಾತ ನೀಡಿದರು. ಇದರ ಬೆನ್ನಲ್ಲೆ ಬೆನ್ ಸ್ಟೋಕ್ಸ್(13) ಕೂಡ ನಿರ್ಗಮಿಸಿದ್ದು ತಂಡದಕ್ಕೆ ಹಿನ್ನಡೆಯಾಯಿತು. ಈ ವೇಳೆ ರೂಟ್ ಹಾಗೂ ಜಾಸ್ ಬಟ್ಲರ್ ತಂಡಕ್ಕೆ ಆಸರೆಯಾಗಿ ನಿಂತರು. ತಂಡದ ರನ್ಗತಿಯನ್ನು ಏರಿಸಿದ ಈ ಜೋಡಿ ಅಮೋಘ ಜೊತೆಯಾಟವಾಡಿತು. ತಂಡಕ್ಕೆ ಗೆಲುವಿನ ರುಚಿ ನೀಡಿದ ಇವರಿಬ್ಬರ ಖಾತೆಯಿಂದ 130 ರನ್ಗಳ ಕಾಣಿಕೆ ಮೂಡಿಬಂತು.
ಇದನ್ನೂ ಓದಿ: ವಿಶ್ವಕಪ್ ಆರಂಭವಾಗಿ ಇಷ್ಟು ದಿನ ಕಳೆದರು ಭಾರತಕ್ಕೆ ಒಂದೇ ಒಂದು ಪಂದ್ಯವಿಲ್ಲ; ಯಾಕೆ ಗೊತ್ತಾ?
ರೂಟ್ ಆಕರ್ಷಕ ಶತಕ ಬಾರಿಸಿ ಮಿಂಚಿದರು. ಆದರೆ ಶತಕದ ಬೆನ್ನಲ್ಲೆ ರೂಟ್ ಬಿರುಸಿನ ಹೊಡೆತಕ್ಕೆ ಮಾರುಹೋಗಿ ಬಲಿಯಾದರು. 104 ಎಸೆತಗಳಲ್ಲಿ 107 ರನ್ ಬಾರಿಸಿದ ರೂಟ್ ಪೆವಿಲಿಯನ್ ಹಾದಿಹಿಡಿದರು. ಇದರ ಬೆನ್ನಲ್ಲೆ ಇತ್ತ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದ ಬಟ್ಲರ್ ಕೂಡ ಸ್ಫೋಟಕ ಶತಕ ಸಿಡಿಸಿ ಎಡವಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. 76 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ನೊಂದಿಗೆ 103 ರನ್ಗೆ ಬಟ್ಲರ್ ಬ್ಯಾಟ್ ಕೆಳಗಿಟ್ಟಿದ್ದು ಇಂಗ್ಲೆಂಡ್ ಸೋಲಿನ ಸುಳಿಗೆ ಸಿಲುಕಿದೆ.
ಕೊನೆ ಹಂತದಲ್ಲಿ ಬಂದ ಬ್ಯಾಟ್ಸ್ಮನ್ಗಳು ಬಂದ ಬೆನ್ನಲ್ಲೆ ಹಿಂತಿರುಗಿದರು. ಪರಿಣಾಮ ಇಂಗ್ಲೆಂಡ್ 50 ಓವರ್ಗೆ 9 ವಿಕೆಟ್ ಕಳೆದುಕೊಂಡು 334 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಪಾಕ್ ಪರ ವಹಾಬ್ ರಿಯಾಜ್ 3 ವಿಕೆಟ್ ಕಿತ್ತು ಮಿಂಚಿದರೆ, ಶದಾಬ್ ಖಾನ್ ಹಾಗೂ ಮೊಹಮ್ಮದ್ ಅಮಿರ್ 2 ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ಓಪನರ್ಗಳಾದ ಇಮಾಮ್ ಉಲ್ ಹಖ್ ಹಾಗೂ ಫಕರ್ ಜಮಾನ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದೆ. ಮೊದಲ ವಿಕೆಟ್ಗೆ ಈ ಜೋಡಿ 82 ರನ್ಗಳ ಕಾಣಿಕೆ ನೀಡಿದರು. ಫಕರ್ 36 ರನ್ ಗಳಿಸಿ ಔಟ್ ಆದರೆ, ಚೆನ್ನಾಗಿಯೆ ಆಡುತ್ತಿದ್ದ ಇಮಾಮ್ 44 ರನ್ಗೆ ನಿರ್ಗಮಿಸಿದರು.
ಈ ಸಂದರ್ಭ ಜೊತೆಯಾದ ಬಾಬರ್ ಅಜಮ್ ಹಾಗೂ ಮೊಹಮ್ಮದ್ ಹಫೀಜ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. 88 ರನ್ಗಳ ಬೊಂಬಾಟ್ ಜೊತೆಯಾಟ ಆಡಿದ ಈ ಜೋಡಿ ತಂಡದ ಮೊತ್ತವನ್ನು 200ಕ್ಕೆ ತಂದು ನಿಲ್ಲಿಸಿತು. ಬಾಬರ್ 66 ಎಸೆತಗಳಲ್ಲಿ 63 ರನ್ ಬಾರಿಸಿ ಔಟ್ ಆದರೆ ಹಫೀಜ್ ಆಕರ್ಷಕ ಹೊಡೆತಗಳಿಂದ ಗಮನ ಸೆಳೆದು 84 ರನ್ ಚಚ್ಚಿದರು.
ಇದನ್ನೂ ಓದಿ: AB de Villiers: ಸತತ ಎರಡು ಸೋಲು; ನಿವೃತ್ತ ಆಟಗಾರನನ್ನು ಮತ್ತೆ ಕರೆಸಲಿದೆ ದಕ್ಷಿಣ ಆಫ್ರಿಕಾ?
ಅಂತಿಮ ಹಂತದಲ್ಲಿ ನಾಯಕ ಸರ್ಫರಾಜ್(55) ಬ್ಯಾಟ್ ಬೀಸಿ ತಂಡದ ರನ್ ಗತಿಯನ್ನು ಮತ್ತಷ್ಟು ಏರಿಸಿದರು. ಪರಿಣಾಮ ಪಾಕಿಸ್ತಾನ 50 ಓವರ್ಗೆ 8 ವಿಕೆಟ್ ಕಳೆದುಕೊಂಡು 348 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ಮೊಯೀನ್ ಅಲಿ ಹಾಗೂ ಕ್ರಿಸ್ ವೋಕ್ಸ್ ತಲಾ 3 ವಿಕೆಟ್ ಕಿತ್ತರೆ ಮಾರ್ಕ್ ವುಡ್ 2 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ