Bhanuka Rajapaksa: ಕೇವಲ 30ರ ವಯಸ್ಸಿಗೆ ಲಂಕಾ ಕ್ರಿಕೆಟಿಗ ರಾಜಪಕ್ಸ ನಿವೃತ್ತರಾಗಲು ಏನು ಕಾರಣ

Bhanuka Rajapaksa: ಇತ್ತೀಚಿನ ಟಿ20 ವಿಶ್ವಕಪ್​ನಲ್ಲಿ ಮ್ಯಾಚ್ ವಿನ್ನಿಂಗ್ ಆಟ ಆಡಿದ್ದ ಲಂಕಾ ಬ್ಯಾಟರ್ ಭಾನುಕ ರಾಜಪಕ್ಸ ತಮ್ಮ 30ನೇ ವಯಸ್ಸಿನಲ್ಲಿ ಕ್ರಿಕೆಟ್​ಗೆ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ಧಾರೆ. ಅದಕ್ಕೆ ಕಾರಣ ಏನು?

ಭಾನುಕ ರಾಜಪಕ್ಸ

ಭಾನುಕ ರಾಜಪಕ್ಸ

 • Share this:
  ಟಿ20 ವಿಶ್ವಕಪ್​ನಲ್ಲಿ ಮಿಂಚಿದ್ದ ಭಾನುಕ ರಾಜಪಕ್ಸ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಅಚ್ಚರಿ ಎಂದರೆ ಎರಡು ವರ್ಷದ ಹಿಂದಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ರಾಜಪಕ್ಸ ಕೇವಲ 30 ವರ್ಷ ವಯಸ್ಸಿನವರು. ಇನ್ನೂ ಬಹಳ ವರ್ಷ ಕ್ರಿಕೆಟ್ ಆಡುವ ಅವಕಾಶ ಇದ್ದರೂ ಅವರು ದಿಢೀರ್ ನಿವೃತ್ತಿ ಘೋಷಿಸಿದ್ದು ಲಂಕಾ ಕ್ರಿಕೆಟ್ ವಲಯಕ್ಕೆ ಆಘಾತ ತಂದಿದೆ. ಅವರು ತಮ್ಮ ನಿವೃತ್ತಿಗೆ ವೈಯಕ್ತಿಕ ಕಾರಣ ನೀಡಿದ್ದಾರೆ.

  “ಒಬ್ಬ ಆಟಗಾರನಾಗಿ ಮತ್ತು ಒಬ್ಬ ಪತಿಯಾಗಿ ಬಹಳ ಎಚ್ಚರಿಕೆಯಿಂದ ನನ್ನ ಸ್ಥಾನವನ್ನು ಪರಿಗಣಿಸಿದ್ದೇನೆ. ಮುಂದೆ ಬರಲಿರುವ ತಂದೆಯ ಸ್ಥಾನ ಹಾಗು ಸಂಬಂಧಿತ ಕೌಟುಂಬಿಕ ಜವಾಬ್ದಾರಿಯನ್ನ ನಿರೀಕ್ಷಿಸುತ್ತಾ ಈ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ಭಾನುಕ ರಾಜಪಕ್ಸ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

  ಭಾನುಕ ರಾಜಪಕ್ಸ 2019ರಲ್ಲಿ ಟಿ20 ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಅಡಿ ಇಟ್ಟರು. ಎರಡು ವರ್ಷಗಳ ಬಳಿಕ, 2021ರಲ್ಲಿ ಅವರು ಮೊದಲ ಓಡಿಐ ಪಂದ್ಯ ಆಡಿದರು. ಇತ್ತೀಚೆಗೆ ನಡೆದ ಟಿ20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಗೆಲುವಿನಲ್ಲಿ ರಾಜಪಕ್ಸ ಪಾತ್ರ ಪ್ರಮುಖವಾಗಿತ್ತು.

  ಇದಕ್ಕಿಂತ ಹೆಚ್ಚಾಗಿ ಭಾನುಕ ರಾಜಪಕ್ಸ ಜೂನಿಯರ್ ಕ್ರಿಕೆಟರ್ ಆಗಿ ಹೆಸರುವಾಸಿಯಾದವರು. 2010ರ ಜೂನಿಯರ್ ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಅದಾದ ಬಳಿಕ ಪ್ರಥಮ ದರ್ಜೆ ಕ್ರಿಕೆಟ್​ನಲ್ಲೂ ಉತ್ತಮವಾಗಿ ಆಡಿದ್ದಾರೆ. ಹೀಗಿರುವಾಗ ಭಾನುಕ ರಾಜಪಕ್ಸ ಕ್ರಿಕೆಟ್​ನಿಂದ ನಿವೃತ್ತಿ ಆಗುವ ಪ್ರಮೇಯವೇ ಇರಲಿಲ್ಲ. ಆದರೂ ಯಾಕೆ ಅವರು ಈ ದಿಢೀರ್ ನಿರ್ಧಾರ ಕೈಗೊಂಡರು ಎಂಬುದು ಕುತೂಹಲ ಮೂಡಿಸಿದೆ.

  ಇದನ್ನೂ ಓದಿ: World Cup Team India: ಮಾರ್ಚ್​ನಿಂದ ಮಹಿಳಾ ಓಡಿಐ ವಿಶ್ವಕಪ್: ಭಾರತ ತಂಡ ಪ್ರಕಟ, ಮಿಥಾಲಿ ಕ್ಯಾಪ್ಟನ್

  ದೈಹಿಕ ಕ್ಷಮತೆ ಪರೀಕ್ಷೆಗಳೇ ಕಾರಣವಾ?

  ಶ್ರೀಲಂಕಾ ಕ್ರಿಕೆಟ್​ನಲ್ಲಿ ಇತ್ತೀಚೆಗೆ ಆಟಗಾರರ ಆಯ್ಕೆಗೆ ಕಠಿಣ ದೈಹಿಕ ಪರೀಕ್ಷೆಗಳು. ಫಿಟ್ ಇದ್ದ ಆಟಗಾರರನ್ನಷ್ಟೇ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತಿದೆ. ಸ್ಕಿನ್​ಫೋಲ್ಡ್ ಎಂದು ಕರೆಯಲಾಗುವ ಕಠಿಣ ಪರೀಕ್ಷೆಗಳೇ ಭಾನುಕ ರಾಜಪಕ್ಸ ನಿವೃತ್ತಿಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

  ಲಂಕಾ ತಂಡಕ್ಕೆ ಆಯ್ಕೆ ಆಗಬೇಕಾದರೆ ಆಟಗಾರರು 2 ಕಿಮೀ ದೂರವನ್ನು 8.1 ನಿಮಿಷದಲ್ಲಿ ಓಡಬೇಕು. ಕಳೆದ ವರ್ಷ ಫಿಟ್ನೆಸ್ ಟೆಸ್ಟ್ ಇತ್ತಾದರೂ 2 ಕಿಮೀ ದೂರವನ್ನು 8.55 ನಿಮಿಷದಲ್ಲಿ ಓಡಬೇಕೆಂಬ ನಿಯಮ ಇತ್ತು. ಈಗ ಅದನ್ನ ಇನ್ನೂ ಕಠಿಣಗೊಳಿಸಲಾಗಿದೆ. 8.1 ನಿಮಿಷದಲ್ಲಿ ಓಡುವ ಆಟಗಾರ ತಂಡಕ್ಕೆ ಆಯ್ಕೆ ಆಗಲು ಅರ್ಹನಾಗುತ್ತಾನೆ. 8.35 ನಿಮಿಷದಲ್ಲಿ ಓಡುವ ಆಟಗಾರನಿಗೆ ನೀಡಲಾಗುವ ಸಂಭಾವನೆಯಲ್ಲಿ ತುಸು ಕಡಿತ ಮಾಡಲಾಗುತ್ತದೆ.

  ಭಾನುಕ ರಾಜಪಕ್ಸ ಇದೇ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಲು ವಿಫಲರಾದ್ದರಿಂದ ತಂಡಕ್ಕೆ ಆಯ್ಕೆ ಆಗಲಿಲ್ಲ. ಫಿಟ್ನೆಸ್ ವಿಚಾರದಲ್ಲಿ ರಾಜಪಕ್ಸ ಅಸಡ್ಡೆ ತೋರುತ್ತಾರೆಂಬುದು ಲಂಕಾ ಕ್ರಿಕೆಟ್ ಮಂಡಳಿಗೆ ಅಸಮಾಧಾನಕ್ಕೂ ಕಾರಣವಾಗಿತ್ತೆನ್ನಲಾಗಿದೆ.
  Published by:Vijayasarthy SN
  First published: