Virat Kohli: ರೋಹಿತ್ ಶರ್ಮಾ ಬಗ್ಗೆ ಹೇಳಿಕೆ: ಟೀಕೆಗೊಳಗಾದ ವಿರಾಟ್ ಕೊಹ್ಲಿ

ರೋಹಿತ್ ಶರ್ಮಾ ಗಾಯದ ವಿಚಾರದಲ್ಲಿ ಸ್ಪಷ್ಟತೆಯ ಕೊರತೆಯಿತ್ತು. ಅದರೊಂದಿಗೆ ಗೊಂದಲ ಇತ್ತು. ಈ ಕಾರಣದಿಂದ ಸರಣಿಗೆ ಅವರ ಲಭ್ಯತೆಯನ್ನು ಕಾದು ನೋಡುವಂತೆ ಮಾಡಿತ್ತು.

Kohlit_Rohit

Kohlit_Rohit

  • Share this:
    ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ರೋಹಿತ್ ಶರ್ಮಾ ಅವರ ಆಯ್ಕೆಯಾಗದಿರುವ ಚರ್ಚೆ ಸದ್ಯಕ್ಕಂತು ಮುಗಿಯುವಂತೆ ಕಾಣುತ್ತಿಲ್ಲ. ಏಕೆಂದರೆ ಐಪಿಎಲ್ ಟೂರ್ನಿ ವೇಳೆ ಆಸೀಸ್ ವಿರುದ್ದದ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿತ್ತು. ಈ ವೇಳೆ ಮೂರು ಸ್ವರೂಪದ ತಂಡದಲ್ಲೂ ಹಿಟ್​ಮ್ಯಾನ್ ಹೆಸರು ಇರಲಿಲ್ಲ. ಇದಕ್ಕೆ ಮುಖ್ಯ ಕಾರಣ ರೋಹಿತ್ ಶರ್ಮಾ ಅವರು ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಐಪಿಎಲ್​ನ ಅಂತಿಮ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ ನಾಯಕ ಅಚ್ಚರಿ ಮೂಡಿಸಿದ್ದರು.

    ಇದಾದ ಬಳಿಕ ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಏಕದಿನ ಹಾಗೂ ಟಿ20 ತಂಡದಿಂದ ಹಿಟ್​ಮ್ಯಾನ್ ಅವರನ್ನು ಕೈ ಬಿಡಲು ಕಾರಣವೇನು ಎಂಬ ಪ್ರಶ್ನೆಗೆ ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ. ಆದರೆ ಕೊಹ್ಲಿ ಅವರ ಹೇಳಿಕೆಯು  ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

    ಹೌದು, ರೋಹಿತ್ ಶರ್ಮಾ ಗಾಯದ ವಿಚಾರದಲ್ಲಿ ಸ್ಪಷ್ಟತೆಯ ಕೊರತೆಯಿತ್ತು. ಅದರೊಂದಿಗೆ ಗೊಂದಲ ಇತ್ತು. ಈ ಕಾರಣದಿಂದ ಸರಣಿಗೆ ಅವರ ಲಭ್ಯತೆಯನ್ನು ಕಾದು ನೋಡುವಂತೆ ಮಾಡಿತ್ತು. ಹೀಗಾಗಿ ಹಿಟ್​ಮ್ಯಾನ್​ಗೆ ಅವಕಾಶ ನೀಡಲಾಗಿರಲಿಲ್ಲ ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ಕೊಹ್ಲಿ.

    ತಂಡದ ಆಯ್ಕೆಯ ಒಂದು ತಿಂಗಳ ಮುನ್ನ ನಡೆದಿದ್ದ ಆಯ್ಕೆ ಸಮಿತಿ ಸಭೆ ವೇಳೆ ಶರ್ಮಾ ತಾನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಲಭ್ಯನಾಗಲಿದ್ದೇನೆ ಎಂದು ತಿಳಿಸಿದ್ದರು. ಸರಣಿಗೆ ಅಲಭ್ಯರಾಗಲಿದ್ದಾರೆ ಎಂಬ ಮೇಲ್ ಕಳುಹಿಸಿದ್ದರು. ಐಪಿಎಲ್ ವೇಳೆ ಗಾಯಗೊಂಡಿದ್ದರಿಂದ ರೋಹಿತ್ ಶರ್ಮಾ ಅವರು ಈ ನಿರ್ಧಾರ ತೆಗೆದುಕೊಂಡಿದ್ದರು. ಅವರಿಗೆ ಅವರ ಗಾಯದ ಸ್ಥಿತಿಗತಿ ಬಗ್ಗೆ ಮನದಟ್ಟು ಮಾಡಲಾಗಿತ್ತು. ಹೀಗಾಗಿ ಅವರು ಸರಣಿಗೆ ಆಡಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದರು ಎಂದು ಕೊಹ್ಲಿ ತಿಳಿಸಿದರು.

    ಆದರೆ ಗಾಯದ ಬಗ್ಗೆ ಮತ್ತು ಚೇತರಿಸಿಕೊಂಡಿರುವ ಬಗ್ಗೆ ಸ್ಪಷ್ಟತೆ ಇರಲಿಲ್ಲ ಎಂಬ ಕೊಹ್ಲಿ ಹೇಳಿಕೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಒಂದೆಡೆ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್​ಮ್ಯಾನ್ ಅಭಿಮಾನಿಗಳು ಟೀಕಾಸ್ತ್ರ ಮುಂದುವರೆಸಿದರೆ, ಮತ್ತೊಂದೆಡೆ ಮಾಜಿ ಕ್ರಿಕೆಟಿಗರು ಕೂಡ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಐಪಿಎಲ್​ ಫೈನಲ್​ನಲ್ಲಿ ರೋಹಿತ್ ಶರ್ಮಾ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಹೀಗಾಗಿ ಅವರಿಗೆ ಸ್ಪಷ್ಟತೆ ಇರಲಿಲ್ಲ ಎನ್ನಲಾಗುವುದಿಲ್ಲ. ನಿರ್ದಿಷ್ಟ ಆಟಗಾರನು ಯಾವ ಮಟ್ಟದಲ್ಲಿ ಫಿಟ್‌ನೆಸ್ ಆಗಿರಬೇಕೆಂದು ನೀವು ಬಯಸುತ್ತೀರಿ ಎಂಬುದನ್ನು ನೋಡುವುದಾದರೆ ಪ್ರತಿಯೊಂದು ಪ್ರಕರಣವೂ ವಿಭಿನ್ನ ಪ್ರಕರಣವಾಗಿರಲಿದೆ ಎಂದಿದ್ದಾರೆ ಟೀಮ್ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ವೇಗಿ ಆಶಿಷ್ ನೆಹ್ರಾ, ರೋಹಿತ್ ಮತ್ತು ಕೊಹ್ಲಿ ನಡುವೆ ಸಂವಹನ ಕೊರತೆಯಿರುವುದು ಬೇಸರದ ಸಂಗತಿ ಎಂದಿದ್ದಾರೆ. ಇನ್ನೊಂದೆಡೆ ಮಾಜಿ ಟೀಮ್ ಇಂಡಿಯಾ ಆಟಗಾರ ಮನೋಜ್ ತಿವಾರಿ, ಎರಡು ವಿಭಿನ್ನ ವ್ಯಕ್ತಿಗಳ ಬಾಯಿಂದ ಹೊರಬರುವ ಮಾತುಗಳ ಸ್ಪಷ್ಟತೆಯು ವಿಭಿನ್ನ ಅರ್ಥವನ್ನು ಹೊಂದಿರುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಕೊಹ್ಲಿಗೆ ತಿವಿದಿದ್ದಾರೆ. ಒಟ್ಟಿನಲ್ಲಿ ರೋಹಿತ್ ಶರ್ಮಾ ಅವರ ಅಲಭ್ಯತೆ ಬಗ್ಗೆ ಕೊಹ್ಲಿ ನೀಡಿದ ಹೇಳಿಕೆಯು ಈಗ ಟೀಮ್ ಇಂಡಿಯಾ ನಾಯಕ ಹಾಗೂ ಹಿಟ್​ಮ್ಯಾನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

    ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
    Published by:zahir
    First published: