ಕ್ರಿಕೆಟ್ ಅಂಗಳದಲ್ಲಿ ಇದೀಗ ಅಂಪೈರ್ ನೀಡುತ್ತಿರುವ ತೀರ್ಪುಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ನಡೆದ ಭಾರತ-ಇಂಗ್ಲೆಂಡ್ ನಡುವಣ 4ನೇ ಟಿ20 ಪಂದ್ಯದಲ್ಲಿ ಡೇವಿಡ್ ಮಲಾನ್ ಹಿಡಿದ ಕ್ಯಾಚ್ನ ಅಂಪೈರ್ ತೀರ್ಪು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸೂರ್ಯಕುಮಾರ್ ಬಾರಿಸಿದ ಚೆಂಡನ್ನು ಓಡಿ ಬಂದು ಹಿಡಿಯತ್ನಿಸಿದ ಮಲಾನ್ ಚೆಂಡನ್ನು ನೆಲಕ್ಕೆ ತಾಗಿಸಿದ್ದರು. ಇದಾಗ್ಯೂ ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್ನಲ್ಲಿ ಔಟ್ ಎಂದು ತೀರ್ಪು ನೀಡಿದ್ದರು. ಇದನ್ನು ಪರಿಶೀಲಿಸಿದ ಬಳಿಕ ಮೂರನೇ ಅಂಪೈರ್ ಔಟ್ ಕೂಡ ಔಟ್ ಎಂದಿದ್ದರು. ಇದರ ಬೆನ್ನಲ್ಲೇ ವಾಷಿಂಗ್ಟನ್ ಸುಂದರ್ ಬಾರಿಸಿದ ಚೆಂಡನ್ನು ಬೌಂಡರಿ ಲೈನ್ನಲ್ಲಿ ಆದಿಲ್ ರಶೀದ್ ಕ್ಯಾಚ್ ಹಿಡಿದಿದ್ದರು. ಆದರೆ ರೀಪ್ಲೇನಲ್ಲಿ ರಶೀದ್ ಕಾಲು ಬೌಂಡರಿ ಲೈನ್ಗೆ ತಾಗಿರುವುದು ಸ್ಪಷ್ಟವಾಗಿತ್ತು. ಇದಾಗ್ಯೂ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
ಈ ಎರಡು ವಿವಾದಾತ್ಮಕ ತೀರ್ಪಿನ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಣ 2ನೇ ಏಕದಿನ ಪಂದ್ಯದಲ್ಲಿ ನೀಡಲಾದ ತೀರ್ಪು ಎಲ್ಲರ ಗಮನ ಸೆಳೆಯುತ್ತಿದೆ. ಪಂದ್ಯದ 15ನೇ ಓವರ್ನಲ್ಲಿ ಕೈಲ್ ಜೇಮಿಸನ್ ಎಸೆತವನ್ನು ಬಾಂಗ್ಲಾದೇಶ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ನೇರವಾಗಿ ಬಾರಿಸಿದ್ದರು. ಅಷ್ಟೇ ವೇಗದಲ್ಲಿ ಡೈವ್ ಹೊಡೆಯುವ ಮೂಲಕ ಜೇಮಿಸನ್ ಚೆಂಡನ್ನು ಅತ್ಯುತ್ತಮವಾಗಿ ಕೈಯಲ್ಲಿ ಬಂಧಿಸಿದ್ದರು. ಇದೇ ವೇಳೆ ಫೀಲ್ಡ್ ಅಂಪೈರ್ ಔಟ್ ನೀಡಿದ್ದಾರೆ.
ಆದರೆ ಕ್ಯಾಚ್ನ್ನು ಪರಿಶೀಲಿಸಿದ ಮೂರನೇ ಅಂಪೈರ್ ತೀರ್ಪನ್ನು ತಡೆ ಹಿಡಿದಿದ್ದಾರೆ. ಹಲವಾರು ಬಾರಿ ಝೂಮ್ ಮಾಡಿ ವೀಕ್ಷಿಸಿದ ಬಳಿಕ ಟಿವಿ ಅಂಪೈರ್ ಚೆಂಡು ನೆಲಕ್ಕೆ ತಾಗಿದೆ ಎಂದು ತೀರ್ಪು ನೀಡಿದ್ದಾರೆ. ಅಲ್ಲದೆ ಆನ್-ಫೀಲ್ಡ್ ಅಂಪೈರ್ಗೆ ತಮ್ಮ ನಿರ್ಧಾರವನ್ನು ಬದಲಿಸುವಂತೆ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದೇ ಮಾದರಿಯಲ್ಲೇ ಸೂರ್ಯಕುಮಾರ್ ಕೂಡ ಔಟ್ ಆಗಿದ್ದರು.
ಡೇವಿಡ್ ಮಲಾನ್ ಕ್ಯಾಚ್ ಹಿಡಿದಾಗ ಚೆಂಡು ನೆಲಕ್ಕೆ ತಾಗಿರುವುದು ಟಿವಿ ಅಂಪೈರ್ಗೆ ಸ್ಪಷ್ಟವಾಗಿ ಗೋಚರಿಸಿತ್ತು. ಆದರೆ ಆನ್-ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್ ಔಟ್ ನೀಡಿದ್ದರಿಂದ ಅದೇ ತೀರ್ಪನ್ನು ಮೂರನೇ ಅಂಪೈರ್ ಮುಂದುವರೆಸಿದ್ದರು. ಆದರೆ ನ್ಯೂಜಿಲೆಂಡ್-ಬಾಂಗ್ಲಾದೇಶ ನಡುವಣ ಪಂದ್ಯದಲ್ಲಿ ಕೈಲ್ ಜೇಮಿಸನ್ ಕ್ಯಾಚ್ ಹಿಡಿದ ಸಂಧರ್ಭದಲ್ಲಿ ಚೆಂಡಿನ ಕೆಲ ಭಾಗ ನೆಲಕ್ಕೆ ತಾಗಿದೆ ಎಂದು ಮೂರನೇ ಅಂಪೈರ್ ನಾಟೌಟ್ ಎಂದಿದ್ದಾರೆ. ಅಲ್ಲದೆ ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್ ತೀರ್ಪನ್ನು ಬದಲಿಸುವಂತೆ ತಿಳಿಸಿದ್ದಾರೆ.
Controversy in New Zealand with this effort from Kyle Jamieson called 'no catch' #NZvBAN pic.twitter.com/XgMeWabC0x
— cricket.com.au (@cricketcomau) March 23, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ