ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ನ್ಯೂಜಿಲೆಂಡ್ ತಂಡದ ಟ್ರಂಪ್ ಕಾರ್ಡ್ ಆಗಿದ್ದು ವೇಗಿ ಕೈಲ್ ಜೇಮಿಸನ್. ಮೊದಲ ಇನಿಂಗ್ಸ್ನಲ್ಲಿ ಭಾರತದ ಪ್ರಮುಖ 5 ವಿಕೆಟ್ ಉರುಳಿಸಿ ಮಿಂಚಿದ್ದ ಜೇಮಿಸನ್, ದ್ವಿತೀಯ ಇನಿಂಗ್ಸ್ನಲ್ಲೂ 2 ವಿಕೆಟ್ ಪಡೆದು ಟೀಮ್ ಇಂಡಿಯಾ ಪತನಕ್ಕೆ ಕಾರಣರಾದರು. ಅದರಲ್ಲೂ ಮೊದಲ ಇನಿಂಗ್ಸ್ನಲ್ಲಿ ಕೈಲ್ ಜೇಮಿಸನ್ ಉರುಳಿಸಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ನಂತಹ ಪ್ರಮುಖ ಬ್ಯಾಟ್ಸ್ಮನ್ಗಳ ವಿಕೆಟ್ಗಳನ್ನು ಎಂಬುದು ವಿಶೇಷ.
ಇನ್ನು 2ನೇ ಇನಿಂಗ್ಸ್ನಲ್ಲೂ ಜೇಮಿಸನ್ ವೇಗಕ್ಕೆ ಬಲಿಯಾಗಿದ್ದು ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ. ಅಂದರೆ ಎರಡೂ ಇನಿಂಗ್ಸ್ನಲ್ಲೂ ವಿರಾಟ್ ಕೊಹ್ಲಿಯ ವಿಕೆಟ್ ಉರುಳಿಸಿ ಜೇಮಿ ಮಿಂಚಿದ್ದರು. ಐಪಿಎಲ್ನಲ್ಲಿ ಆರ್ಸಿಬಿ ಪರ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡುತ್ತಿರುವ ಜೇಮಿಸನ್ ಅಭ್ಯಾಸದ ವೇಳೆ ಕಂಡುಕೊಂಡಿದ್ದ ಎಲ್ಲಾ ತಂತ್ರಗಳನ್ನು ನಾಯಕನ ವಿರುದ್ದವೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವೇಳೆ ಪ್ರಯೋಗಿಸಿದರು ಎಂದರೆ ತಪ್ಪಾಗಲಾರದು.
ಏಕೆಂದರೆ ಐಪಿಎಲ್ ವೇಳೆಯೇ ಕೊಹ್ಲಿ ಹಾಗೂ ಜೇಮಿಸನ್ ನಡುವೆ ಡ್ಯೂಕ್ ಬಾಲ್ ಅಭ್ಯಾಸದ ಬಗ್ಗೆ ಮಾತುಕತೆ ನಡೆದಿತ್ತು. ಐಪಿಎಲ್ ಅಭ್ಯಾಸದ ವೇಳೆ ಆರ್ಸಿಬಿ ಆಟಗಾರರಾದ ಡೇನಿಯಲ್ ಕ್ರಿಶ್ಚಿಯನ್, ಕೊಹ್ಲಿ, ಜೇಮಿಸನ್ ಜೊತೆಯಾಗಿ ಕೂತಿದ್ದರು. ಈ ವೇಳೆ ವಿರಾಟ್ ಕೊಹ್ಲಿ'ಜೇಮಿ ನೀವು ಡ್ಯೂಕ್ ಬಾಲ್ಗಳಲ್ಲಿ ಹೆಚ್ಚು ಬೌಲಿಂಗ್ ಮಾಡಿದ್ದೀರಾ? ಎಂದು ಕೇಳಿದ್ದರು. ಇದಕ್ಕೆ ಉತ್ತಮರಿಸಿದ ಜೇಮಿಸನ್, ಕೆಲ ಡ್ಯೂಕ್ ಬಾಲ್ಗಳು ನನ್ನ ಬಳಿ ಇವೆ. ಐಪಿಎಲ್ ಮುಗಿದು ಇಂಗ್ಲೆಂಡ್ಗೆ ತೆರಳುವ ಮುನ್ನ ಈ ಚೆಂಡುಗಳಲ್ಲಿ ಅಭ್ಯಾಸ ನಡೆಸುತ್ತೇನೆ ಎಂದಿದ್ದರು. ಇದೇ ವೇಳೆ ನಿನ್ನ ಬಳಿ ಡ್ಯೂಕ್ ಬಾಲ್ಗಳಿದ್ದರೆ ನೆಟ್ ಅಭ್ಯಾಸದ ವೇಳೆ ನೀನು ನನಗೆ ಬೌಲಿಂಗ್ ಮಾಡು, ನಿನ್ನ ಚೆಂಡುಗಳನ್ನು ನನಗೆ ಎದುರಿಸುವುದು ಸಂತಸದ ವಿಷಯ ಎಂದಿದ್ದರು. ಈ ವೇಳೆ ಜೇಮಿಸನ್, ನಿಮಗಂತು ನಾ ಈಗಲೇ ಬೌಲಿಂಗ್ ಮಾಡಲ್ಲ ಎಂದು ನಿರಾಕರಿಸಿದ್ದರು.
ಇದಕ್ಕೆ ಮುಖ್ಯ ಕಾರಣ ಅದಾಗಲೇ ಕೈಲ್ ಜೇಮಿಸನ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ತಯಾರಿಯಲ್ಲಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಡ್ಯೂಕ್ ಬಾಲ್ನಲ್ಲಿ ಆಡುವುದರಿಂದ ಜೇಮಿಸನ್ ಆ ಚೆಂಡಿನಲ್ಲಿ ಕೊಹ್ಲಿಗೆ ಬೌಲ್ ಮಾಡಿರಲಿಲ್ಲ. ಅಲ್ಲದೆ ನಾನು ಡ್ಯೂಕ್ ಬಾಲ್ನಲ್ಲಿ ಬೌಲಿಂಗ್ ಮಾಡಿದರೆ ಕೊಹ್ಲಿಗೆ ತನ್ನ ಬೌಲಿಂಗ್ ಪ್ಲ್ಯಾನ್ ಅರಿವಾಗುತ್ತೆ ಎಂದು ಅರಿತುಕೊಂಡಿದ್ದರು. ಹೀಗಾಗಿಯೇ ಜೇಮಿಸನ್ ಐಪಿಎಲ್ ವೇಳೆ ಡ್ಯೂಕ್ ಬಾಲ್ನಲ್ಲಿ ಕೊಹ್ಲಿಗೆ ಬೌಲಿಂಗ್ ಮಾಡಿರಲಿಲ್ಲ. ಇದೀಗ ಯೋಜನೆಯಂತೆ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಜೇಮಿಸನ್ 2 ಬಾರಿ ಕೊಹ್ಲಿಯ ವಿಕೆಟ್ ಪಡೆದಿದ್ದಾರೆ.
Wtc Final: ಭಾರತದ ಕನಸು ಭಗ್ನ: ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್..!
ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿರುವ ಜೇಮಿಸನ್, ಎರಡು ಇನಿಂಗ್ಸ್ನಲ್ಲೂ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆಯಲು ಸಾಧ್ಯವಾಗಿದ್ದು ಶ್ರೇಷ್ಠ ಅನುಭವ ಎಂದಿದ್ದಾರೆ. ಅಲ್ಲದೆ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ನ ವಿಕೆಟ್ನ್ನು ಒಂದೇ ಪಂದ್ಯದಲ್ಲಿ 2 ಬಾರಿ ಪಡೆಯುವು ನನ್ನ ಪಾಲಿಗೆ ಅದು ಶ್ರೇಷ್ಠ ಪ್ರದರ್ಶನ ಎಂದು ಭಾವಿಸುತ್ತೇನೆ ಎಂದು ಜೇಮಿಸನ್ ತಿಳಿಸಿದ್ದಾರೆ. ಅಂದಹಾಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆದ ಬೌಲರ್ ಎನಿಸಿಕೊಂಡಿರುವ ಜೇಮಿಸನ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಒಲಿದು ಬಂದಿರುವುದು ವಿಶೇಷ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ