ಒಂದೆಡೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಪ್ರೇಕ್ಷಕರು ಟೀಮ್ ಇಂಡಿಯಾ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿರುವುದು ದೊಡ್ಡ ಸುದ್ದಿಯಾಗಿದೆ. ಮತ್ತೊಂದೆಡೆ ದೇಶೀಯ ಕ್ರಿಕೆಟ್ನಲ್ಲೂ ಆಟಗಾರರೊಬ್ಬರು ಸಹ ಆಟಗಾರನನ್ನು ನಿಂದಿಸಿರುವ ಘಟನೆ ನಡೆದಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಆರಂಭದ ಬೆನ್ನಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ಅದು ಕೂಡ ಒಂದೇ ತಂಡದ ಇಬ್ಬರು ಆಟಗಾರರ ನಡುವೆ ಎಂಬುದು ವಿಶೇಷ.
ಈ ವಿವಾದ ಹುಟ್ಟಿಕೊಂಡಿರುವುದು ಬರೋಡಾ ತಂಡದ ನಾಯಕ ಕೃಣಾಲ್ ಪಾಂಡ್ಯ ಹಾಗೂ ಉಪನಾಯಕ ದೀಪಕ್ ಹೂಡ ನಡುವೆ. ಉತ್ತರಾಖಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ವೇಳೆ ಕೃಣಾಲ್ ತಮ್ಮನ್ನು ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ಹೂಡ ಆರೋಪಿಸಿದ್ದಾರೆ. ಇದರಿಂದ ಮನ ನೊಂದು ಟೂರ್ನಿಯಿಂದ ಹೊರ ನಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ದೀಪಕ್ ಹೂಡ ಬರೋಡಾ ಕ್ರಿಕೆಟ್ ಅಸೋಸಿಯೇಷನ್ಗೆ ಮೇಲ್ ಮಾಡಿದ್ದು, ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ನನ್ನ ಈ ನಿರ್ಧಾರಕ್ಕೆ ಕಾರಣ ತಂಡದ ನಾಯಕ ಕೃಣಾಲ್ ಪಾಂಡ್ಯ ಎಂದಿದ್ದಾರೆ. ವಡೋದರಾದ ರಿಲಯನ್ಸ್ ಕ್ರೀಡಾಂಗಣದಲ್ಲಿ ಬರೋಡಾ ತಂಡ ಅಭ್ಯಾಸ ನಡೆಸುತ್ತಿದ್ದು, ಈ ವೇಳೆ ಪಾಂಡ್ಯ ತಂಡದ ಆಟಗಾರರ ಮುಂದೆ ನನ್ನ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂದು ದೀಪಕ್ ಹೂಡಾ ತಿಳಿಸಿದ್ದಾರೆ.
ನಾನು ನೆಟ್ನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಮುಖ್ಯ ಕೋಚ್ ಪ್ರಭಾಕರ್ ಅವರ ಅನುಮತಿಯೊಂದಿಗೆ ಮುಂದಿನ ಪಂದ್ಯಕ್ಕಾಗಿ ತಯಾರಿ ಮಾಡುತ್ತಿದ್ದೆ. ಈ ವೇಳೆ ಬಂದ ಕೃಣಾಲ್ ಪಾಂಡ್ಯ ನನ್ನೊಂದಿಗೆ ಅಶ್ಲೀಲ ಭಾಷೆ ಪ್ರಯೋಗಿಸಿದ್ದಾರೆ. ಇದೇ ವೇಳೆ ನಾನು ಕೋಚ್ ಅನುಮತಿಯೊಂದಿಗೆ ಅಭ್ಯಾಸ ನಡೆಸುತ್ತಿರುವುದಾಗಿ ತಿಳಿಸಿದ್ದೇನೆ. 'ನಾನು ತಂಡದ ಕ್ಯಾಪ್ಟನ್, ಮುಖ್ಯ ಕೋಚ್ ಯಾರು? ಬರೋಡಾ ತಂಡ ನಾ ಹೇಳಿದಂತೆ ಕೇಳಬೇಕು ಎಂದು ಪಾಂಡ್ಯ ತಮ್ಮ ದಾದಾಗಿರಿ ತೋರಿಸಿ, ನನ್ನ ಅಭ್ಯಾಸವನ್ನು ನಿಲ್ಲಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ