ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕರ್ನಾಟಕ ವೇಗಿ ಪ್ರಸಿದ್ಧ್ ಕೃಷ್ಣ ಹಾಗೂ ಬರೋಡಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಪದಾರ್ಪಣೆ ಮಾಡಿದರು. ಇತ್ತೀಚೆಗೆ ಮುಕ್ತಾಯಗೊಂಡ ದೇಶೀಯ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡಿದರು. ಇದರ ಆಧಾರದ ಮೇಲೆ ಇಬ್ಬರೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದರು.
ಇನ್ನು ಚೊಚ್ಚಲ ಬಾರಿ ಏಕದಿನ ತಂಡದಲ್ಲಿ ಸ್ಥಾನ ಪಡೆದ ಕೃನಾಲ್ ಪಾಂಡ್ಯಗೆ ಕಿರಿಯ ಸಹೋದರ ಹಾರ್ದಿಕ್ ಕ್ಯಾಪ್ ಹಸ್ತಾಂತರಿಸಿದರು. ತನ್ನ ಸಹೋದರನಿಂದ ಕ್ಯಾಪ್ ಪಡೆದ ನಂತರ, ಕೃನಾಲ್ ಭಾವುಕರಾದರು. ಅಲ್ಲದೆ ಆಕಾಶದತ್ತ ಕ್ಯಾಪ್ ತೋರಿಸಿ ತಂದೆಯನ್ನು ನೆನಪಿಸಿಕೊಂಡರು. ಜನವರಿ ತಿಂಗಳಲ್ಲಿ ಪಾಂಡ್ಯ ಸಹೋದರರ ತಂದೆ ಹಿಮಾಂಶು ಪಾಂಡ್ಯ ನಿಧನರಾಗಿದ್ದರು.
ವಿಜಯ್ ಹಜಾರೆ ಟ್ರೋಫಿಯಲ್ಲಿ ತ್ರಿಪುರ ವಿರುದ್ಧ ಕೃನಾಲ್ 97 ಎಸೆತಗಳಲ್ಲಿ 127 ರನ್ ಬಾರಿಸಿ ಆ ಶತಕವನ್ನು ತಂದೆಗೆ ಅರ್ಪಿಸಿದ್ದರು. ಇದು ಲೀಸ್ಟ್-ಎ ಕ್ರಿಕೆಟ್‌ನಲ್ಲಿ ಕೃನಾಲ್ ಅವರ ಮೊದಲ ಶತಕ ಎಂಬುದು ವಿಶೇಷ. ಈ ಪಂದ್ಯದ ಬಳಿಕ ನನ್ನ ಮೊದಲ ಶತಕ ವೀಕ್ಷಿಸಲು ತಂದೆಯಿರಲಿಲ್ವಲ್ಲಾ ಎಂಬ ನೋವಿದೆ ಎಂದು ಕೃನಾಲ್ ಪಾಂಡ್ಯ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ODI debut for @krunalpandya24 👌
International debut for @prasidh43 👍#TeamIndia @Paytm #INDvENG pic.twitter.com/Hm9abtwW0g
— BCCI (@BCCI) March 23, 2021
ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಬರೋಡ ಪರ ಭರ್ಜರಿ ಪ್ರದರ್ಶನ ನೀಡಿದ್ದ ಕೃನಾಲ್ ಪಾಂಡ್ಯ, ಐದು ಪಂದ್ಯಗಳಲ್ಲಿ 388 ರನ್ ಗಳಿಸಿ ಐದು ವಿಕೆಟ್ ಪಡೆದಿದ್ದರು. ಇದರ ಫಲವಾಗಿ ಇದೀಗ ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಆಲ್‌ರೌಂಡರ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ತಮ್ಮನಿಂದಲೇ ಚೊಚ್ಚಲ ಪಂದ್ಯ ಕ್ಯಾಪ್ ಸ್ವೀಕರಿಸಿ, ತಂದೆಯನ್ನು ಸ್ಮರಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ