ಬೆಂಗಳೂರು (ಆ. 24): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ನ 15ನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ಪರ ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ಕೃಷ್ಣಪ್ಪ ಗೌತಮ್ ಟಿ-20 ಕ್ರಿಕೆಟ್ನಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಕೃಷ್ಣಪ್ಪ ಗೌತಮ್ ಆಲ್ರೌಂಡರ್ ಪ್ರದರ್ಶನದಿಂದ ಬಳ್ಳಾರಿ ತಂಡ ಶಿವಮೊಗ್ಗ ಲಯನ್ಸ್ ವಿರುದ್ಧ ವಿಜೆಡಿ ನಿಯಮದ ಅನ್ವಯ 70 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದ ನಡುವೆ ಮಳೆ ಅಡ್ಡಿಯಾಗಿದ್ದರಿಂದ ಓವರ್ಗಳ ಸಂಖ್ಯೆಯನ್ನು 17ಕ್ಕೆ ಇಳಿಕೆಗೊಳಿಸಲಾಗಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಳ್ಳಾರಿ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತಾದರು, ಬಳಿಕ ಕೃಷ್ಣಪ್ಪ ಗೌತಮ್ ಮಿಂಚಿನ ಪ್ರದರ್ಶನ ನೀಡಿದರು. ಬೌಂಡರಿ-ಸಿಕ್ಸರ್ಗಳ ಮಳೆ ಸುರಿಸಿದ ಗೌತಮ್ ಎದುರಾಳಿ ಬೌಲರ್ಗಳ ಬೆವರಿಳಿಸಿ ಬಿಟ್ಟರು. ಕೇವಲ 56 ಎಸೆತಗಳಲ್ಲಿ 7 ಬೌಂಡರಿ ಹಾಗೂ 13 ಅಮೋಘ ಸಿಕ್ಸ್ ಸಿಡಿಸಿ ಅಜೇಯ 134 ರನ್ ಚಚ್ಚಿದರು. ಇವರ ಈ ಸ್ಫೋಟಕ ಆಟದ ನೆರವಿನಿಂದ ಬಳ್ಳಾರಿ ನಿಗದಿತ 17 ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡು 203 ರನ್ ಬಾರಿಸಿತು.
IND vs WI: ಇಶಾಂತ್ ಮಾರಕ ಬೌಲಿಂಗ್ ದಾಳಿ; ಆಲೌಟ್ ಭೀತಿಯಲ್ಲಿ ವೆಸ್ಟ್ ಇಂಡೀಸ್
ಈ ದೊಡ್ಡ ಟಾರ್ಗೆಟ್ ಬೆನ್ನಟ್ಟಿದ ಶಿವಮೊಗ್ಗಕ್ಕೆ ಬೌಲಿಂಗ್ನಲ್ಲೂ ಗೌತಮ್ ಮಾರಕವಾಗಿ ಪರಿಣಮಿಸಿದರು. ತನ್ನ ಮೊದಲ ಓವರ್ನಲ್ಲೇ ವಿಕೆಟ್ ಕೀಳಲು ಶುರು ಮಾಡಿದ ಗೌತಮ್ 4 ಓವರ್ನಲ್ಲಿ 15 ರನ್ ನೀಡಿದ 8 ವಿಕೆಟ್ ಕಿತ್ತರು.
ಶಿವಮೊಗ್ಗ ಪರ ಅಕ್ಷಯ್ ಬಲ್ಲಾಳ್ 40 ಹಾಗೂ ಪವನ್ ದೇಶ್ಪಾಂಡೆ 46 ರನ್ ಬಾರಿಸಿದ್ದು ಬಿಟ್ಟರೆ ಉಳಿದವರು ಸೊನ್ನೆ ಸುತ್ತಿದ್ದೇ ಹೆಚ್ಚು. ಪರಿಣಾಮ ಶಿವಮೊಗ್ಗ 16.3 ಓವರ್ನಲ್ಲಿ 133 ರನ್ಗಳಿಗೆ ಆಲೌಟ್ ಆಯಿತು.
ಬ್ಯಾಟಿಂಗ್-ಬೌಲಿಂಗ್ನಲ್ಲಿ ಸಿಡಿದ ಗೌತಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಅಲ್ಲದೆ ಶತಕದೊಂದಿಗೆ ಟಿ-20 ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದರು.
ಕರ್ನಾಟಕ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತಿ ವೇಗದ ಶತಕ ಸಿಡಿಸಿದ (39 ಎಸೆತ) ದಾಖಲೆ ಮಾಡಿದ್ದಾರೆ. ಅಲ್ಲದೆ ಅತಿ ಹೆಚ್ಚು ಸಿಕ್ಸರ್ (13 ಸಿಕ್ಸ್), ವೈಯಕ್ತಿಕ ಗರಿಷ್ಠ ಮೊತ್ತ (134*) ಎಂಬ ಸಾಧನೆ ಮಾಡಿದ್ದಾರೆ.
70 ರನ್ಗಳ ಗೆಲುವಿನೊಂದಿಗೆ ಬಳ್ಳಾರಿ ಟಸ್ಕರ್ಸ್ ತಂಡ 8 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದೆ. ಅಲ್ಲದೆ ಆಡಿದ 5 ಪಂದ್ಯಗಳ ಪೈಕಿ ಕೇವಲ 1 ರಲ್ಲಿ ಮಾತ್ರ ಸೋಲುಂಡಿದೆಯಷ್ಟೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಲು ಇಲ್ಲಿ ಕ್ಲಿಕ್ ಮಾಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ