ಬೆಂಗಳೂರು (ಸೆ. 01): ಕರ್ನಾಟಕ ಪ್ರೀಮಿಯರ್ ಲೀಗ್ 8ನೇ ಆವೃತ್ತಿಗೆ ಭರ್ಜರಿ ತೆರೆಬಿದ್ದಿದ್ದು ಹುಬ್ಳಿ ಟೈಗರ್ಸ್ ತಂಡ ಚೊಚ್ಚಲ ಬಾರಿಗೆ ಕಪ್ ಎತ್ತಿ ಹಿಡಿದಿದೆ. ಬಳ್ಳಾರಿ ಟಸ್ಕರ್ಸ್ ವಿರುದ್ಧ ನಡೆದ ರೋಚಕ ಫೈನಲ್ ಕದನದಲ್ಲಿ ಬೌಲರ್ಗಳ ಅದ್ಭುತ ಪ್ರದರ್ಶನದಿಂದ ಹುಬ್ಳಿ 8 ರನ್ಗಳಿಂದ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿದೆ.
ಮೈಸೂರಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಳಿ ಟೈಗರ್ಸ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ, ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿತು.
ಮೊಹಮ್ಮದ್ ತಾಹ(9) ಹಾಗೂ ನಾಯಕ ವಿನಯ್ ಕುಮಾರ್(4) ಬೇಗನೆ ಪೆವಿಲಿಯನ್ ಸೇರಿಕೊಂಡರು. ಆದರೆ, ಆದಿತ್ಯ ಸೋಮಣ್ಣ ಹಾಗೂ ಲವ್ನಿತ್ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ 10 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 70ರ ಗಡಿ ದಾಟಿಸಿದರು.
IND vs WI: ವಿಹಾರಿ ಚೊಚ್ಚಲ ಶತಕ, ಬುಮ್ರಾ ಹ್ಯಾಟ್ರಿಕ್ ಮ್ಯಾಜಿಕ್; ಭಾರತ ಸೇಫ್!
ಲವ್ನಿತ್ 29 ಎಸೆತಗಳಲ್ಲಿ 29 ರನ್ ಗಳಿಸಿ ಔಟ್ ಆದರೆ, ಆದಿತ್ಯ 38 ಎಸೆತಗಳಲ್ಲಿ 47 ರನ್ ಗಳಿಸಿದರು. ಕೊನೆಯಲ್ಲಿ ಪ್ರವೀಣ್ ದುಬೆ (ಅಜೇಯ 26) ಬ್ಯಾಟ್ ಬೀಸಿದ ಪರಿಣಾಮ 20 ಓವರ್ಗೆ ಹುಬ್ಳಿ 6 ವಿಕೆಟ್ ಕಳೆದುಕೊಂಡು 152 ರನ್ ಕಲೆಹಾಕಿತು. ಬಳ್ಳಾರಿ ಪರ ಕೆಪಿ ಅಣ್ಣಪ್ಪ 2, ಪ್ರಸಿದ್ಧ್ ಕೃಷ್ಣ, ಕೃಷ್ಣಪ್ಪ ಗೌತಮ್, ಅಬರ್ ಹಾಗೂ ಕಾರ್ತಿಕ್ ತಲಾ 1 ವಿಕೆಟ್ ಪಡೆದರು.
157 ರನ್ಗಳ ಗುರಿ ಬೆನ್ನಟ್ಟಿದ ಬಳ್ಳಾರಿ 25 ರನ್ಗೆ 3 ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಒಂದಾದ ಸಿಎಂ ಗೌತಮ್ ಹಾಗೂ ದೇವದತ್ ಪಡಿಕ್ಕಲ್ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದರು. ಅದರಂತೆ ಈ ಜೋಡಿಯ ಖಾತೆಯಿಂದ 75 ರನ್ಗಳ ಜೊತೆಯಾಟ ಮೂಡಿಬಂತು. ಆದರೆ, ಗೌತಮ್ 29 ರನ್ ಗಳಿಸಿದ್ದಾಗ ಔಟ್ ಆಗಿದ್ದೆ ತಡ ದಿಢೀರ್ ಕುಸಿತ ಕಂಡಿತು.
ದೇವದತ್ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರಾದರು ಇವರಿಗೆ ಯಾವೊಬ್ಬ ಬ್ಯಾಟ್ಸ್ಮನ್ಗಳು ಸಾತ್ ನೀಡಲಿಲ್ಲ. 48 ಎಸೆತಗಳಲ್ಲಿ 68 ರನ್ ಸಿಡಿಸಿ ದೇವದತ್ ಕೂಡ ಔಟ್ ಆಗುವ ಮೂಲಕ ಬಳ್ಳಾರಿ ಗೆಲುವಿನ ಆಸೆ ಅಂತ್ಯವಾಯಿತು.
ಅಂತಿಮವಾಗಿ ಬಳ್ಳಾರಿ ಟಸ್ಕರ್ಸ್ 20 ಓವರ್ಗೆ 144 ರನ್ಗೆ ಆಲೌಟ್ ಆಯಿತು. ಹುಬ್ಳಿ ಪರ ಅಭಿಲಾಶ್ ಶೆಟ್ಟಿ ಹಾಗೂ ಆದಿತ್ಯ ಸೋಮಣ್ಣ ತಲಾ 3 ವಿಕೆಟ್ ಕಿತ್ತರೆ, ಮಿತ್ರಕಾಂತ್, ಡೇವಿಡ್ ಮ್ಯಾಥ್ಯೂಸ್ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
8 ರನ್ಗಳ ರೋಚಕ ಗೆಲುವಿನೊಂದಿಗೆ ಹುಬ್ಳಿ ತಂಡ ಚೊಚ್ಚಲ ಬಾರಿ 8ನೇ ಆವೃತ್ತಿಯ ಕೆಪಿಎಲ್ ಪ್ರಶಸ್ತಿಯನ್ನು ಬಾಜಿಕೊಂಡಿದೆ. ಆದಿತ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಕೃಷ್ಣಪ್ಪ ಗೌತಮ್ ಸರಣಿಶ್ರೇಷ್ಠ ತಮ್ಮದಾಗಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ