Rahul Dravid- ಕಾನಪುರ್ ಸ್ಟೇಡಿಯಂನ ಗ್ರೌಂಡ್ಸ್​ಮೆನ್​ಗೆ ಹಣ ಕೊಟ್ಟ ರಾಹುಲ್ ದ್ರಾವಿಡ್; ಕಾರಣ ಇದು

Kanpur Pitch Groundsmen- ಉತ್ತರ ಪ್ರದೇಶದ ಕಾನಪುರ್ ನಗರದ ಗ್ರೀನ್ ಪಾರ್ಕ್ ಸ್ಟೇಡಿಯಂನ ಗ್ರೌಂಡ್ಸ್​ಮೆನ್​ಗೆ ರಾಹುಲ್ ದ್ರಾವಿಡ್ ತಮ್ಮ ಸ್ವಂತ ಜೇಬಿನಿಂದ 35,000 ರೂ ಹಣ ನೀಡಿದ್ದಾರೆ.

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

 • Share this:
  ಕಾನಪುರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೂ ಬಹಳ ರೋಚಕವಂತೂ ಆಗಿತ್ತು. ನ್ಯೂಜಿಲೆಂಡ್ ತಂಡ ತಾನು ಯಾಕೆ ವಿಶ್ವ ಟೆಸ್ಟ್ ಚಾಂಪಿಯನ್ ಎಂಬುದನ್ನು ಈ ಪಂದ್ಯದಲ್ಲಿ ತೋರಿಸಿಕೊಟ್ಟಿತು. ಪಂದ್ಯದ ಕೊನೆಯ ಎಸೆತದವರೆಗೂ ಕಿವೀಸ್ ಪಡೆ ವೀರೋಚಿತವಾಗಿ ಹೋರಾಡಿ ಸೋಲಿನಿಂದ ತಪ್ಪಿಸಿಕೊಂಡಿತು. ತಂಡದ ಬಾಲಂಗೋಚಿ ಆಟಗಾರನೂ ಸಾಧ್ಯವಾದಷ್ಟೂ ಎಸೆತಗಳನ್ನು ಎದುರಿಸಿ ಪಂದ್ಯ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಅದರಲ್ಲೂ ಭಾರತೀಯ ಮೂಲದ ಆಟಗಾರರಾದ ರಚಿನ್ ರವೀಂದ್ರ ಮತ್ತು ಅಜಾಜ್ ಅವರು ಮಂದ ಬೆಳಕಿನ ನಡುವೆ ಕೊನೆಕೊನೆಯಲ್ಲಿ ಭಾರತದ ಬೌಲರ್​ಗಳು ನಡೆಸಿದ ಸಕಲ ಪ್ರಯತ್ನಗಳನ್ನ ವಿಫಲಗೊಳಿಸುವಲ್ಲಿ ಯಶಸ್ವಿಯಾದರು.

  ಆದರೆ, ಹೆಚ್ಚು ಅಚ್ಚರಿ ಮೂಡಿಸಿದ್ದು ಉತ್ತರ ಪ್ರದೇಶದ ಕಾನಪುರ ನಗರದ ಗ್ರೀನ್​ಪಾರ್ಕ್ ಸ್ಟೇಡಿಯಂನ ಪಿಚ್. ಒಂದೆರಡು ದಿನದ ಬಳಿಕ ಪಿಚ್ ಡೆಡ್ ಆಗಬಹುದು, ಪಂದ್ಯ ಮೂರ್ನಾಲ್ಕು ದಿನದೊಳಗೆ ಅಂತ್ಯಗೊಳ್ಳಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಐದು ದಿನವೂ ಪಿಚ್ ಜೀವಂತವಾಗಿದ್ದದು ವಿಶೇಷ. ಪಂದ್ಯ ಬಳಿಕ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಪಿಚ್ ಸಿದ್ಧಪಡಿಸಿದ ಗ್ರೌಂಡ್ಸ್​ಮೆನ್​ಗೆ ಹಣ ನೀಡಿದ ಘಟನೆ ನಡೆಯಿತು. ಡೆಡ್ ಪಿಚ್ ಆಗಿದ್ದರೆ ಬಹುಶಃ ಭಾರತ ಗೆಂದ್ಯವನ್ನು ಸುಲಭವಾಗಿ ಗೆಲ್ಲುತ್ತಿತ್ತೇನೋ… ಆದರೂ ರಾಹುಲ್ ದ್ರಾವಿಡ್ ಅವರು ತೋರಿದ ಈ ನಡೆ ಬಹಳಷ್ಟು ಪ್ರಶಂಸೆಗೆ ಪಾತ್ರವಾಗಿದೆ. ದ್ರಾವಿಡ್ ಯಾಕೆ ಯಾವಾಗಲೂ ವಿಭಿನ್ನ ಎಂಬುದು ಮತ್ತೊಮ್ಮೆ ವೇದ್ಯವಾಗಿದೆ.

  ನಿನ್ನೆ ಸಂಜೆ ಪಂದ್ಯದ ಬಳಿಕ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ಈ ವಿಚಾರವನ್ನು ಪ್ರಕಟಿಸಿತು. “ನಾವು ಅಧಿಕೃತವಾಗಿ ಪ್ರಕಟಿಸಲು ಬಯಸುತ್ತೇವೆ. ರಾಹುಲ್ ದ್ರಾವಿಡ್ ಅವರು ನಮ್ಮ ಗ್ರೌಂಡ್ಸ್​ಮೆನ್​ಗೆ ವೈಯಕ್ತಿಕವಾಗಿ 35 ಸಾವಿರ ರೂ ಕೊಟ್ಟಿದ್ದಾರೆ” ಎಂದು ಕ್ರಿಕೆಟ್ ಸಂಸ್ಥೆ ಹೇಳಿತು.

  ಇದನ್ನೂ ಓದಿ: ನಿಮ್ಮ ಬಾಲ್ ಎಡ್ಜ್ ಆಗುತ್ತದೆ, ನನಗೆ ಯಾಕೆ ಆಗಲ್ಲ ಎಂದು ಅಕ್ಷರ್ ಪಟೇಲ್​ರನ್ನು ಅಶ್ವಿನ್ ಕೇಳಿದಾಗ…

  ಐದು ದಿನವೂ ಜೀವಂತವಿರುವ ಪಿಚ್ ಅನ್ನು ತಯಾರಿಸಿದ್ದಕ್ಕೆ ಖುಷಿಯಾಗಿ ರಾಹುಲ್ ದ್ರಾವಿಡ್ ತಮ್ಮ ಸ್ವಂತ ಜೇಬಿನಿಂದ 35,000 ರೂ ಕೊಟ್ಟಿದ್ದರು. ಬ್ಯಾಟುಗಾರ ಮತ್ತು ಬೌಲರ್ ಇಬ್ಬರಿಗೂ ಪಿಚ್ ಸಹಕಾರಿಯಾಗಿತ್ತು. ಶ್ರೇಯಸ್ ಅಯ್ಯರ್, ವಿಲ್ ಯಂಗ್ ಮೊದಲಾದ ಬ್ಯಾಟುಗಾರರು ಬಹಳ ಸಂಯಮದಿಂದ ಆಡಿ ರನ್ ಗಳಿಸಿದ್ದರು. ನ್ಯೂಜಿಲೆಂಡ್​ನ ವೇಗದ ಬೌಲರ್​ಗಳಾದ ಟಿಮ್ ಸೌದಿ ಮತ್ತು ಕೈಲೆ ಜೇಮಿಸನ್ ಅವರು ಯಶಸ್ಸು ಕಂಡರೆ, ಭಾರತದ ಸ್ಪಿನ್ನರ್​ಗಳು ವಿಜೃಂಬಿಸಿದರು.

  ಪಂದ್ಯ ರೋಚಕ ಡ್ರಾ:

  ನಿನ್ನೆ ಮುಕ್ತಾಯಗೊಂಡ ಪಂದ್ಯದಲ್ಲಿ ಗೆಲ್ಲಲು 284 ರನ್ ಗುರಿ ಪಡೆದ ನ್ಯೂಜಿಲೆಂಡ್ ಕೊನೆಯ ದಿನಾಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 165 ರನ್​ಗಳನ್ನ ಗಳಿಸಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಟಾಮ್ ಲೇತಮ್, ವಿಲಿಯಮ್ ಸೋಮರ್​ವಿಲೆ, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ ಅವರು ಭಾರತದ ಸ್ಪಿನ್ ದಾಳಿಯನ್ನ ಸಮರ್ಥವಾಗಿ ಎದುರಿಸಿದರು. ಆರ್ ಅಶ್ವಿನ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಅವರ ಸ್ಪಿನ್ ತಂತ್ರಕ್ಕೆ ಬೇಗ ಸೊಪ್ಪು ಹಾಕಲಿಲ್ಲ.

  ಇದನ್ನೂ ಓದಿ: IPL 2022- ರೀಟೈನ್ ಆಗಲಿರುವ ಆಟಗಾರರು; ಹಣ ಎಷ್ಟು, ಹರಾಜು ಯಾವಾಗ, ಎಲ್ಲಾ ಮಾಹಿತಿ

  ಅಜಾಜ್ ಪಟೇಲ್ ಮತ್ತು ರಚಿನ್ ರವೀಂದ್ರ ಇಬ್ಬರೂ 10ನೇ ವಿಕೆಟ್​ಗೆ ಹೆಚ್ಚೂಕಡಿಮೆ 9 ಓವರ್​ಗಳನ್ನ ಎದುರಿಸಿದರು. ಈ 9 ಓವರ್​ಗಳದಲ್ಲಿ 10ನೇ ವಿಕೆಟ್ ಜೊತೆಯಾಟವನ್ನು ಅಂತ್ಯಗೊಳಿಸಲು ಭಾರತದ ಬೌಲರ್​ಗಳು ಹರಸಾಹಸ ಮಾಡಿದರು. ಅಶ್ವಿನ್ ಅವರಂತೂ ತಮಗೆ ಗೊತ್ತಿರುವ ಎಲ್ಲಾ ವೇರಿಯೇಶನ್​ಗಳನ್ನೂ ಬಳಸಿ ನೋಡಿದರು. ಆದರೆ, ಜೊತೆಯಾಟ ಮುರಿಯಲು ಸಾಧ್ಯವಾಗಲಿಲ್ಲ.

  ಸ್ಕೋರು ವಿವರ:

  ಭಾರತ ಮೊದಲ ಇನ್ನಿಂಗ್ಸ್ 111.1 ಓವರ್ 345/10

  ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 142.3 296/10

  ಭಾರತ ಎರಡನೇ ಇನಿಂಗ್ಸ್ 81 ಓವರ್ 234/7 (ಡಿಕ್ಲೇರ್)

  ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ 98 ಓವರ್ 165/9
  Published by:Vijayasarthy SN
  First published: