ಕ್ಲೀನ್ ಬೌಲ್ಡ್ ಆದರೂ ರಿವ್ಯೂ ಕೊಟ್ಟು ಪೇಚಿಗೆ ಸಿಕ್ಕ ಆರ್ ಅಶ್ವಿನ್; ಕಾರಣ ಇದಿರಬಹುದು

IND vs NZ, R Ashwin hilarious review- ಎಜಾಜ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಔಟ್ ಆದರೂ ಆರ್ ಅಶ್ವಿನ್ ಅಂಪೈರ್ ತೀರ್ಪು ರಿವ್ಯೂಗೆ ಕೊಟ್ಟ ಘಟನೆ ಭಾರತ-ನ್ಯೂಜಿಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ನಡೆಯಿತು.

ಆರ್ ಅಶ್ವಿನ್ ಬೌಲ್ಡ್ ಆಗಿರುವುದು

ಆರ್ ಅಶ್ವಿನ್ ಬೌಲ್ಡ್ ಆಗಿರುವುದು

 • Share this:
  ಮುಂಬೈ, ಡಿ. 4: ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಬ್ಲಾಕ್ ಬಸ್ಟರ್ ಸಿನಿಮಾದ ಥ್ರಿಲ್ಲರ್ ಅಂಶಗಳನ್ನ ಒಳಗೊಂಡಿತ್ತು. ಎಜಾಜ್ ಪಟೇಲ್ ಅವರ 10 ವಿಕೆಟ್, ಮಯಂಕ್ ಅಗರ್ವಾಲ್ ಅವರ ಅಮೋಘ ಬ್ಯಾಟಿಂಗ್, ನ್ಯೂಜಿಲೆಂಡ್ ತಂಡದ 62 ರನ್​ಗಳ ಚುಟುಕು ಇನ್ನಿಂಗ್ಸ್, ಹ್ಯಾಟ್ರಿಕ್ ಸನಿಹಕ್ಕೆ ಬಂದ ಸಿರಾಜ್, ಹೀಗೆ ಹಲವು ರೋಚಕ ಸಂಗತಿಗಳು ಎರಡನೇ ದಿನ ಅಡಕವಾಗಿದ್ದವು. ಅದರಲ್ಲಿ ನಗೆಯುಕ್ಕಿಸುವ ಘಟನೆ ಆರ್ ಅಶ್ವಿನ್ ಅವರಿಂದ ಸಿಕ್ಕಿತ್ತು.

  ಇಂದು ಬೆಳಗ್ಗೆ ಭಾರತ ತಂಡ ಬ್ಯಾಟಿಂಗ್ ಮುಂದುವರಿಸುವಾಗ ಎಜಾಜ್ ಪಟೇಲ್ ಬೌಲಿಂಗ್​ನ ಎಸೆತವೊಂದಕ್ಕೆ ಆರ್ ಅಶ್ವಿನ್ ಕ್ಲೀನ್ ಬೌಲ್ಡ್ ಆದರು. ಅಂಪೈರ್ ಔಟೆಂದು ಬೆರಳೆತ್ತಿದರು. ನೋಡನೋಡುತ್ತಿದ್ದಂತೆಯೇ ಆರ್ ಅಶ್ವಿನ್ ಕಣ್ಣೆತ್ತಿದ್ದವರೇ ಅಂಪೈರ್​ಗೆ ರಿವ್ಯೂ ಹೇಳಿದರು. ಬೌಲ್ಡ್ ಆದರೂ ಅಶ್ವಿನ್ ರಿವ್ಯೂಗೆ ಸೂಚಿಸಿದ್ದು ಕಾಮೆಂಟೇಟರ್​ಗಳನ್ನೂ ಸೋಜಿಗೊಳಿಸಿತು. ಆರ್ ಅಶ್ವಿನ್ ಬಳಿಕ ತಮ್ಮ ರಿವ್ಯೂ ವಾಪಸ್ ಪಡೆದುಕೊಂಡು ಪೆವಿಲಿಯನ್​ಗೆ ಮರಳಿದರು.

  ಅರ್ ಅಶ್ವಿನ್ ರಿವ್ಯೂ ಕೊಟ್ಟ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಒಳ್ಳೆಯ ಮೀಮ್​ಗಳಿಗೆ ಸರಕಾಯಿತು. ಕ್ಲೀನ್ ಬೌಲ್ಡ್ ಆದರೂ ರಿವ್ಯೂ ಕೊಟ್ಟು ಆರ್ ಅಶ್ವಿನ್ ಇತಿಹಾಸ ನಿರ್ಮಿಸಿದರು ಎಂದು ಒಬ್ಬರು ಕಾಮೆಂಟ್ ಕೊಟ್ಟಿದ್ದಾರೆ. ಕ್ಕೀನ್ ಬೌಲ್ಡ್ ಆದರೂ ಔಟ್ ತೀರ್ಪು ರಿವ್ಯೂ ಮಾಡಲು ಗಂಡೆದೆ ಬೇಕೇ ಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೂ ಹಲವರು ವಿವಿಧ ರೀತಿಯಲ್ಲಿ ಹಾಸ್ಯ ಮಾಡಿ ಟ್ವೀಟ್ ಹಾಕಿದ್ದಾರೆ.


  ಕ್ಯಾಚೆಂದು ತಪ್ಪಾಗಿ ಔಟ್ ಕೊಟ್ಟಿರಬೇಕೆಂದು ಭಾವಿಸಿದರಾ ಅಶ್ವಿನ್?

  ಬ್ಯಾಟರ್ ಕ್ಲೀನ್ ಬೌಲ್ಡ್ ಆದರೂ ನಾಟೌಟ್ ಆಗಲು ಒಂದೇ ಸಾಧ್ಯತೆ ಇದೆ. ಅದು ನೋಬಾಲ್. ನೋಬಾಲ್ ಎಸೆತದಲ್ಲಿ ಬ್ಯಾಟರ್ ಬೌಲ್ಡ್ ಅಥವಾ ಕ್ಯಾಚಿತ್ತು ಔಟಾದರೆ ಅದು ನಾಟೌಟ್ ಆಗುತ್ತದೆ. ಆದರೆ, ಅಶ್ವಿನ್ ವಿಚಾರದಲ್ಲಿ ಅದರ ಪ್ರಶ್ನೆಯೇ ಇಲ್ಲ. ಹಾಗಾದರೆ, ಅಶ್ವಿನ್ ಅವರು ಅಂಪೈರ್ ರಿವ್ಯೂಗೆ ಕೊಡಲು ಮುಂದಾಗಿದ್ದು ಯಾಕೆ?

  ಇದನ್ನೂ ಓದಿ: Records- ಕಿವೀಸ್ 62 ರನ್​ಗೆ ಆಲೌಟ್; ಭಾರತ-ನ್ಯೂಜಿಲೆಂಡ್ ಪಂದ್ಯದಲ್ಲಿ ಬಂದ ದಾಖಲೆಗಳಿವು

  ಆರ್ ಅಶ್ವಿನ್ ಅವರಿಗೆ ತಾನು ಕ್ಲೀನ್ ಬೌಲ್ಡ್ ಆಗಿರುವುದು ಗೊತ್ತೇ ಆಗಿರಲಿಲ್ಲ ಎಂಬುದು ಅವರ ಬಾಡಿ ಲಾಂಗ್ವೇಜ್​ನಿಂದ ಗೊತ್ತಾಗುತ್ತದೆ. ಕ್ಯಾಚ್ ಔಟೆಂದು ಅಂಪೈರ್ ಔಟ್ ತೀರ್ಪು ಕೊಟ್ಟಿರಬಹುದು. ತಮ್ಮ ಬ್ಯಾಟ್​ಗೆ ಚೆಂಡು ತಾಕಿಲ್ಲ ಎಂಬುದಷ್ಟೇ ಅವರ ಮನಸಿಗೆ ಹೊಳೆದಿದ್ದಿರಬಹುದು. ಹೀಗಾಗಿ, ತತ್​ಕ್ಷಣವೇ ಅವರು ರಿವ್ಯೂ ಕೊಟ್ಟಿದ್ದಿರಬಹುದು. ಒಂದರೆ ಕ್ಷಣದ ಬಳಿಕ ಅವರು ಹಿಂದಿರುಗಿ ನೋಡಿದಾಗ ತಾನು ಕ್ಲೀನ್ ಬೌಲ್ಡ್ ಆಗಿರುವುದು ಖಚಿತವಾಗುತ್ತದೆ. ರಿವ್ಯೂ ವಾಪಸ್ ಪಡೆದು ಅವರು ಪೆವಿಲಿಯನ್​ಗೆ ಮರಳುತ್ತಾರೆ.

  ಭಾರತ ತನ್ನ ಮೊದಲ ಇನ್ನಿಂಗ್ಸಲ್ಲಿ 325 ರನ್ ಗಳಿಸಿತು. ಆದರೆ, ಭಾರತದ ಎಲ್ಲಾ 10 ವಿಕೆಟ್​ಗಳನ್ನ ನ್ಯೂಜಿಲೆಂಡ್ ಬೌಲರ್ ಎಜಾಜ್ ಪಟೇಲ್ ಪಡೆದಿದ್ಧಾರೆ. ಕ್ರಿಕೆಟ್ ಇತಿಹಾಸದಲ್ಲಿ ಇಂಥ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಎಜಾಜ್ ಪಟೇಲ್ ಅವರಾಗಿದ್ದಾರೆ. ಭಾರತದ ಇನ್ನಿಂಗ್ಸಲ್ಲಿ ಹೈಲೈಟ್ ಎನಿಸಿದ್ದು ಮಯಂಕ್ ಅಗರ್ವಾಲ್ ಅವರು ಗಳಿಸಿದ 150 ರನ್​ಗಳ ಇನ್ನಿಂಗ್ಸ್. ಅದು ಬಿಟ್ಟರೆ ಅಕ್ಷರ್ ಪಟೇಲ್ ಅರ್ಧಶತಕ ಭಾರಿಸಿದರು.

  ಇದನ್ನೂ ಓದಿ: IND vs NZ- ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ಎಜಾಜ್ ಪಟೇಲ್

  ಇದಾದ ಬಳಿಕ ನ್ಯೂಜಿಲೆಂಡ್ ಇನ್ನಿಂಗ್ಸ್ ಮತ್ತೊಂದು ಹೈಡ್ರಾಮಗೆ ಸಾಕ್ಷಿಯಾಯಿತು. ಕಿವೀಸ್ ಪಡೆ ಕೇವಲ 62 ರನ್​ಗೆ ಆಲೌಟ್ ಆಯಿತು. ಆರ್ ಅಶ್ವಿನ್ 8 ಓವರ್ ಬೌಲ್ ಮಾಡಿ 8 ರನ್ನಿತ್ತು 4 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದು ಕಿವೀಸ್ ಪಡೆಯ ಆರಂಭಿಕ ಪತನಕ್ಕೆ ಕಾರಣರಾದರು. ಭಾರತ ತನ್ನ ಎರಡನೇ ಇನ್ನಿಂಗ್ಸಲ್ಲಿ ವಿಕೆಟ್ ನಷ್ಟ ಇಲ್ಲದೆ 69 ರನ್ ಗಳಿಸಿ ಒಟ್ಟಾರೆ 332 ರನ್ ಮುನ್ನಡೆ ಪಡೆದುಕೊಂಡಿದೆ.
  Published by:Vijayasarthy SN
  First published: