Interesting- ಶ್ರೇಯಸ್ ಅಯ್ಯರ್ ತಂದೆ 4 ವರ್ಷದಿಂದ ವಾಟ್ಸಾಪ್ ಡಿಪಿ ಯಾಕೆ ಬದಲಿಸಿಲ್ಲ, ಕಾರಣ ಇದು

Shreyas Iyer’s Proud Father- ನಾಲ್ಕು ವರ್ಷಗಳ ಹಿಂದೆ ಶ್ರೇಯಸ್ ಅಯ್ಯರ್ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನ ಕೈಯಲ್ಲಿ ಹಿಡಿದುಕೊಂಡಾಗಿನಿಂದ ಅವರ ತಂದೆ ಸಂತೋಷ್ ತಮ್ಮ ವಾಟ್ಸಾಪ್ ಡಿಪಿಯನ್ನ ಬದಲಿಸಿಯೇ ಇಲ್ಲವಂತೆ…

ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್

  • Share this:
    ಕಾನಪುರ್: ಶ್ರೇಯಸ್ ಅಯ್ಯರ್ (Shreyas Iyer) ಅವರನ್ನ ಭಾರತದ ಭವಿಷ್ಯದ ತಾರೆ ಎಂದು ಪರಿಗಣಿಸಿ ಅನೇಕ ವರ್ಷಗಳೇ ಆಗಿವೆ. ಕ್ರಿಕೆಟ್​ನ ಸರ್ವೋತ್ಕೃಷ್ಟ ಮಾದರಿ ಎನ್ನಲಾದ ಟೆಸ್ಟ್ ಕ್ರಿಕೆಟ್​ಗೆ ಈಗ ಶ್ರೇಯಸ್ ಅಯ್ಯರ್ ಪದಾರ್ಪಣೆ ಮಾಡಿದ್ದಾರೆ. ತಮ್ಮ ಚೊಚ್ಚಲ ಪಂದ್ಯದಲ್ಲೇ ಅವರು ಶತಕ ಭಾರಿಸಿ (Test Century on debut) ತಾವೆಂಥ ಬ್ಯಾಟರ್ ಎಂಬುದನ್ನು ಹಾಗೂ ಟೆಸ್ಟ್ ಕ್ರಿಕೆಟ್​ಗೆ ಸಂಪೂರ್ಣವಾಗಿ ಸಲ್ಲುವ ಬ್ಯಾಟರ್ ಎಂಬುದನ್ನು ಅವರು ನಿರೂಪಿಸಿದ್ದಾರೆ. ಆದರೆ, ನಾಲ್ಕು ವರ್ಷಗಳ ಹಿಂದೆಯೇ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಬೇಕಿತ್ತು. ದುರದೃಷ್ಟಕ್ಕೆ ಅದು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 2017ರಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ (Border-Gavaskar Trophy) ಭಾರತ ತಂಡಕ್ಕೆ ಶ್ರೇಯಸ್ ಆಯ್ಕೆ ಆಗಿದ್ದರು. ಆದರೆ, ಯಾವುದೇ ಪಂದ್ಯದಲ್ಲೂ ಪೂರ್ಣಪ್ರಮಾಣದಲ್ಲಿ ಆಡುವ ಭಾಗ್ಯ ಸಿಕ್ಕಿರಲಿಲ್ಲ. ವಿರಾಟ್ ಕೊಹ್ಲಿಗೆ ಸ್ಟ್ಯಾಂಡ್ ಬೈ ಆಗಿ ಒಂದು ಪಂದ್ಯದಲ್ಲಿ ಅಂಗಣಕ್ಕಿಳಿದಿದ್ದರು. ಆ ಸರಣಿಯನ್ನ ಭಾರತ ಗೆದ್ದಿತು. ಕ್ಯಾಪ್ಟನ್ ಮತ್ತು ಹಿರಿಯ ಆಟಗಾರರು ಟ್ರೋಫಿ ಎತ್ತಿಹಿಡಿಯುವ ಅವಕಾಶವನ್ನು ಶ್ರೇಯಸ್ ಅಯ್ಯರ್ ಅವರಿಗೆ ನೀಡಿದ್ದರು.

    ಆ ಒಂದು ದೃಶ್ಯ ಶ್ರೇಯಸ್ ಅಯ್ಯರ್ ಅವರ ತಂದೆ ಸಂತೋಷ್ ಅಯ್ಯರ್ ಅವರ ಮನಸಿಗೆ ಗಾಢವಾಗಿ ನೆಟ್ಟಿದೆ. ತಮ್ಮ ಮಗ ಬಾರ್ಡರ್-ಗವಾಸ್ಕರ್ ಟ್ರೋಫಿ ಎತ್ತಿಹಿಡಿಯುತ್ತಿದ್ದ ಆ ದೃಶ್ಯದ ಫೋಟೋವೊಂದರನ್ನು ಸಂತೋಷ್ ಅಯ್ಯರ್ ತಮ್ಮ ವಾಟ್ಸಾಪ್ ಡಿಪಿಯಾಗಿ (Whatsapp DP) ಇರಿಸಿಕೊಂಡರು. ಆಗಿನಿಂದಲೂ ಅವರು ಆ ಡಿಪಿಯನ್ನ ಬದಲಿಸಿಯೇ ಇಲ್ಲವಂತೆ. “ಹೌದು, ಈ ಡಿಪಿ ನನ್ನ ಮನಸಿಗೆ ಬಹಳ ಇಷ್ಟವಾದುದು. ಧರ್ಮಶಾಲಾದಲ್ಲಿ ವಿರಾಟ್ ಕೊಹ್ಲಿಗೆ ಸ್ಟ್ಯಾಂಡ್ ಬೈ ಆಗಿ ನನ್ನ ಮಗ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ” ಎಂದು ಶ್ರೇಯಸ್ ಅಯ್ಯರ್ ತಂದೆ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಂದಿನಿಂದ ಸಂತೋಷ್ ಅಯ್ಯರ್ ಅವರ ವಾಟ್ಸಪ್ ಡಿಪಿಗೆ ಅದೇ ಫೋಟೋ ಇತ್ತೆನ್ನಲಾಗಿದೆ.

    ನನ್ನ ಮಗ ಟೆಸ್ಟ್ ಮ್ಯಾಚ್ ಆಡಬಾರದೇ ಎನಿಸಿತು:

    “ಆಗ ಪಂದ್ಯ ಗೆದ್ದ ನಂತರ ಸಹ-ಆಟಗಾರರು ಟ್ರೋಫಿಯನ್ನ ಹಿಡಿದುಕೊಳ್ಳಲು ಶ್ರೇಯಸ್​ಗೆ ಕೊಟ್ಟರು. ಆ ಕ್ಷಣ ನನಗೆ ಬಹಳ ಅಮೂಲ್ಯ ಎನಿಸಿತು. ಶ್ರೇಯಸ್ ಆ ಟ್ರೋಫಿಯನ್ನ ಹಿಡಿದುಕೊಂಡಿದ್ಧಾಗ, ಆತ ಭಾರತಕ್ಕೆ ಆಡಬೇಕಿತ್ತು ಎಂದು ಆ ಕ್ಷಣಕ್ಕೆ ಅನಿಸುತ್ತಿತ್ತು. ಟೆಸ್ಟ್ ಕ್ರಿಕೆಟ್​ನಲ್ಲಿ ನನ್ನ ಮಗನಿಗೆ ಟೀಮ್ ಇಂಡಿಯಾದಲ್ಲಿ ಯಾವಾಗ ಅವಕಾಶ ಸಿಗುತ್ತದೆ, ಯಾವಾಗ ಆತ ಸಾಧನೆ ತೋರುತ್ತಾನೆ ಎಂದು ಯೋಚಿಸುತ್ತಿದ್ದೆ” ಎಂದು ಸಂತೋಷ್ ಅಯ್ಯರ್ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ಧಾರೆ.

    ರಹಾನೆ ನನ್ನ ಮಗನ ಹೆಸರು ಹೇಳಿದ ಕ್ಷಣ…

    “ಅಜಿಂಕ್ಯ ರಹಾನೆ ಅವರು ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ಧಾರೆ ಎಂದು ಘೋಷಿಸಿದಾಗ ಅದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣವೆಂದು ತೋರಿತು. ಐಪಿಎಲ್ ಇರಲಿ, ಏಕದಿನ ಕ್ರಿಕೆಟ್ ಇರಲಿ ಬೇರೆ ಯಾವುದೇ ಮಾದರಿ ಕ್ರಿಕೆಟ್​ನಲ್ಲಿ ನನ್ನ ಮಗ ಆಯ್ಕೆ ಆಗಿದ್ದರೆ ಇಷ್ಟು ಖುಷಿಯಾಗುತ್ತಿರಲಿಲ್ಲ. ಟೆಸ್ಟ್ ಕ್ರಿಕೆಟ್ ನಿಜವಾದ ಮಾದರಿ ಕ್ರಿಕೆಟ್” ಎಂದು ಶ್ರೇಯಸ್ ಅಯ್ಯರ್ ತಂದೆ ಅಭಿಪ್ರಾಯಪಟ್ಟಿದ್ಧಾರೆ.

    ಇದನ್ನೂ ಓದಿ: Shreyas Iyer- ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಭಾರಿಸಿದ ಅಯ್ಯರ್; ಈ ಸಾಧನೆ ಮಾಡಿದ ಕೆಲವೇ ಆಟಗಾರರ ಪಟ್ಟಿ

    “ಕೆಲವೊಮ್ಮೆ ಆತನ ಜೊತೆ ಮಾತನಾಡುವಾಗ, ನೀನು ಟೆಸ್ಟ್ ಪಂದ್ಯ ಆಡಬೇಕು ಎಂದು ಹೇಳುತ್ತಿರುತ್ತಿದ್ದೆ. ಆಗ ಆತ ಇದು ಶೀಘ್ರದಲ್ಲೇ ಆಗುತ್ತದೆ ಎಂದು ಹೇಳುತ್ತಿದ್ದ. ಆತ ಅಂದಂತೆಯೇ ಆ ಕ್ಷಣ ಬಂದುಬಿಟ್ಟಿದೆ. ನನಗೆ ಸ್ವರ್ಗವೇ ಧರೆಗೆ ಇಳಿದಂತಾಗಿದೆ” ಎಂದು ಸಂತೋಷ್ ಅಯ್ಯರ್ ಹೇಳಿದ್ದಾರೆ.

    ಗವಾಸ್ಕರ್ ಕೈಯಿಂದ ಟೆಸ್ಟ್ ಕ್ಯಾಪ್ ಪಡೆದಾಗ…

    ಶ್ರೇಯಸ್ ಅಯ್ಯರ್ ಕಾನ್​ಪುರ್​ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕವನ್ನೂ ಭಾರಿಸಿದ್ಧಾರೆ. ಪದಾರ್ಪಣೆ ಪಂದ್ಯದಲ್ಲಿ ಟೆಸ್ಟ್ ಶತಕ ಭಾರಿಸಿದ 16ನೇ ಭಾರತೀಯ ಆಟಗಾರನಾಗಿದ್ದಾರೆ. ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರು ಈ ಪಂದ್ಯಕ್ಕೆ ಮುನ್ನ ಶ್ರೇಯಸ್ ಅಯ್ಯರ್​ಗೆ ಟೆಸ್ಟ್ ಕ್ಯಾಪ್ ಕೊಟ್ಟರು. ಆ ಕ್ಷಣವನ್ನೂ ಶ್ರೇಯಸ್ ಅಯ್ಯರ್ ತಂದೆ ಅಮೂಲ್ಯವೆಂದು ಪರಿಗಣಿಸುತ್ತಾರೆ.

    “ಸುನೀಲ್ ಗವಾಸ್ಕರ್ ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು. ಅವರು ನನ್ನ ಮಗನಿಗೆ ಟೆಸ್ಟ್ ಕ್ಯಾಪ್ ನೀಡಿದ್ದು ವಿಶೇಷ ಘಳಿಗೆ. ನನ್ನ ಖುಷಿ ವ್ಯಕ್ತಪಡಿಸಲು ಪದಗಳೇ ಬರುತ್ತಿಲ್ಲ” ಎಂದು ಸಂತೋಷ್ ಅಯ್ಯರ್ ಆನಂದತುಂದಿಲರಾದರು.
    Published by:Vijayasarthy SN
    First published: