‘ತಂಡಕ್ಕೆ ಈ ಗುಣ ಇರಬೇಕು’- ಕ್ಯಾಪ್ಟನ್ಸಿ ಬಗ್ಗೆ ರೋಹಿತ್ ಶರ್ಮಾದ್ದು ವಿಭಿನ್ನ ದೃಷ್ಟಿಕೋನ

Rohit Sharma on Captaincy Role- ಟೀಮ್ ಇಂಡಿಯಾದ ಟಿ20, ಓಡಿಐ ತಂಡಗಳಿಗೆ ನೂತನ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ, ನಾಯಕನಾಗಿ ತಮ್ಮ ಪಾತ್ರ ಏನು, ತಂಡದ ಕಾರ್ಯತಂತ್ರ ಹೇಗಿರಬೇಕು ಇತ್ಯಾದಿ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

 • Share this:
  ಮುಂಬೈ: ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ತ್ಯಜಿಸುವುದಾಗಿ ಹೇಳಿದಾಗ ಮುಂದೆ ಯಾರು ನಾಯಕರಾಗಬಹುದು ಎಂಬ ಪ್ರಶ್ನೆಗೆ ಬಹುತೇಕ ಎಲ್ಲರ ಮನಸಿಗೆ ಬಂದ ಉತ್ತರ ರೋಹಿತ್ ಶರ್ಮಾ. ನಾಯಕ ಸ್ಥಾನಕ್ಕೆ ಅವರ ಹೆಸರು ಬಹಳ ಸಹಜವಾಗಿಯೇ ಕೇಳಿಬಂದಿತ್ತು. ವಿರಾಟ್ ಕೊಹ್ಲಿ ಅನುಪಸ್ಥಿತರಿದ್ದಾಗೆಲ್ಲಾ ಬಹುತೇಕವಾಗಿ ಟೀಮ್ ಇಂಡಿಯಾವನ್ನ ಮುನ್ನಡೆಸಿದವರು ರೋಹಿತ್ ಶರ್ಮಾ. ಅದರಲ್ಲಿ ಯಶಸ್ವಿಯೂ ಆಗಿದ್ದರು. ಅಲ್ಲದೇ ತಮ್ಮ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದವರು ರೋಹಿತ್ ಶರ್ಮಾ. ಹೀಗಾಗಿ, ಮುಂದಿನ ಕೆಲ ವರ್ಷಗಳ ಅವಧಿಯನ್ನ ದೃಷ್ಟಿಯಲ್ಲಿಟ್ಟುಕೊಂಡರೆ ರೋಹಿತ್ ಅವರೇ ನಾಯಕತ್ವಕ್ಕೆ ಸೂಕ್ತ ವ್ಯಕ್ತಿ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದರು. ಆ ನಿರೀಕ್ಷೆಗೆ ತಕ್ಕಂತೆ ಬಿಸಿಸಿಐ ಟಿ20 ಮತ್ತು ಓಡಿಐ ತಂಡಗಳಿಗೆ ರೋಹಿತ್ ಶರ್ಮಾ ಅವರನ್ನ ನಾಯಕನಾಗಿ ಆಯ್ಕೆ ಮಾಡಿದೆ.

  ಇದೇ ವೇಳೆ ಒಬ್ಬ ನಾಯಕನಿಗೆ ಇರಬೇಕಾದ ಸಮತೂಕದ ವ್ಯಕ್ತಿತ್ವ ರೋಹಿತ್ ಅವರಲ್ಲಿ ಇದೆ. ಇದಕ್ಕೆ ಒಳ್ಳೆ ಉದಾಹರಣೆ, ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿನಲ್ಲಿ ತಮ್ಮ ನಾಯಕತ್ವದ ಪಾತ್ರ ಎಷ್ಟಿದೆ ಎಂಬ ಬಗ್ಗೆ ರೋಹಿತ್ ಶರ್ಮಾ ವ್ಯಾಖ್ಯಾನಿಸದ ರೀತಿ ಗಮನಿಸಿದರೆ ಅವರು ನಾಯಕನಿಗಿರಬೇಕಾದ ಪರಿಪಕ್ವತೆ ಹೊಂದಿದವರಂತೆ ತೋರುತ್ತಾರೆ.

  ರೋಹಿತ್ ಹೇಳಿದ್ಧೇನು?

  ಮುಂಬೈ ಇಂಡಿಯನ್ಸ್ ತಂಡದ ಐಪಿಎಲ್ ಟ್ರೋಫಿ ಗೆಲ್ಲಲು ನನ್ನ ನಾಯಕತ್ವ ಪ್ರಮುಖ ಕಾರಣವಲ್ಲ. ತಂಡದ ಸೆಟಪ್ ಅಷ್ಟು ಗುಣಮಟ್ಟದ್ದಾಗಿದೆ. ನಾಯಕನಾಗಿ ತಂಡಕ್ಕೆ ನನ್ನ ಕೊಡುಗೆಯಲ್ಲಿ ವಿಶೇಷತೆ ಏನಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದರು. ಇದು ಅವರ ಸಮಚಿತ್ತ ಸ್ವಭಾವಕ್ಕೆ ಹಿಡಿದ ಕನ್ನಡಿ.

  ಇದನ್ನೂ ಓದಿ: ರೆಬೆಲ್ ಕೊಹ್ಲಿ; ಬೇಡ ಅಂದ್ರೂ ಟಿ20 ಕ್ಯಾಪ್ಟನ್ಸಿ ಬಿಟ್ರು; ಬಿಡಿ ಎಂದ್ರೂ ಓಡಿಐ ಕ್ಯಾಪ್ಟನ್ಸಿ ಬಿಡಲಿಲ್ಲವಂತೆ

  ತಂಡದಷ್ಟೇ ನಾಯಕನ ಶಕ್ತಿ:

  ಒಬ್ಬ ನಾಯಕನ ಶಕ್ತಿ ಇರುವುದೇ ಆತ ಮುನ್ನಡೆಸುವ ತಂಡದಲ್ಲಿ. ತಂಡ ಬಲಿಷ್ಠವಾಗಿದ್ದರೆ ನಾಯಕ ಬಲಿಷ್ಠವಾಗಿರುತ್ತಾನೆ. ತಂಡ ದುರ್ಬಲವಾಗಿದ್ದರೆ ಅದರ ನಾಯಕನೂ ದುರ್ಬಲ ಆಗಿರುತ್ತಾನೆ ಎಂಬುದು ರೋಹಿತ್ ಶರ್ಮಾ ಅಭಿಪ್ರಾಯ.

  ನಾಯಕನಿಗೆ ಏನು ಕೆಲಸ?

  “ಒಬ್ಬ ನಾಯಕನಾಗಿ ತಂಡಕ್ಕೆ ಒಳಗಿನಿಂದ ಶಕ್ತಿ ತುಂಬುವುದಕ್ಕಿಂತ ಹೆಚ್ಚಾಗಿ ಹೊರಗಿನಿಂದ ಪುಷ್ಟಿ ಕೊಡುವುದು ನನ್ನ ಜವಾಬ್ದಾರಿ ಇರುತ್ತದೆ. ಆಡುವ ಆಟಗಾರರಿ ನಿರ್ದಿಷ್ಟ ಜವಾಬ್ದಾರಿಗಳನ್ನ ನೀಡಬೇಕು. ನೀವು ಮೈದಾನಕ್ಕಿಳಿದರೆ ನಿಮಗೆ ಮೂರು ಗಂಟೆ ಮಾತ್ರ ಇರುತ್ತದೆ. ಆ ಅವಧಿಯಲ್ಲಿ ಆಟಗಾರರಲ್ಲಿ ಹೆಚ್ಚು ಬದಲಾವಣೆ ತರಲಾಗದು. ಹನ್ನೊಂದು ಮಂದಿ ಆಟಗಾರರು ಆಡುತ್ತಿರುತ್ತಾರೆ. ನೀವು ಎಲ್ಲರನ್ನೂ ಗಮನಿಸಬೇಕು” ಎಂದು ರೋಹಿತ್ ಶರ್ಮಾ ಹೇಳುತ್ತಾರೆ.

  ಇದನ್ನೂ ಓದಿ: ಉಮೇಶ್ ಯಾದವ್ ಲೆಕ್ಕಕ್ಕುಂಟು ಆಟಕ್ಕಿಲ್ಲದಂತಾಗಿದ್ಧಾರೆ: ಮಾಜಿ ಆಟಗಾರ ಆಕ್ರೋಶ

  ಒಬ್ಬ ನಾಯಕನಿಗೆ ಆನ್​ಫೀಲ್ಡ್​ನಲ್ಲಿ ಕೆಲಸ ಇರುವುದು ಶೇ. 20 ಮಾತ್ರ. ಆದರೆ, ಮೈದಾನದಾಚೆ ಅವನ ಬಹುಪಾಲು ಪಾತ್ರ ಇರುತ್ತದೆ… ಪಂದ್ಯದಲ್ಲಿ ಸರಿಯಾದ ಆಟಗಾರರು, ಸರಿಯಾದ ಕಾಂಬಿನೇಶನ್ ಆಡುತ್ತಿದ್ದಾರಾ ಎಂಬುದನ್ನು ನಾಯಕನಾದವನು ನೋಡಿಕೊಳ್ಳಬೇಕು. ಪಂದ್ಯಕ್ಕೆ ಪೂರ್ವಸಿದ್ಧತೆಯಾಗಿ ಕೆಲ ರಣತಂತ್ರಗಳನ್ನ ರೂಪಿಸುವುದರಲ್ಲಿ ನಾಯಕನ ಪಾತ್ರ ಇರುತ್ತದೆ ಎಂದು ರೋಹಿತ್ ಶರ್ಮಾ ತಿಳಿಸುತ್ತಾರೆ.

  ‘ಬ್ಯಾಕ್​ಸ್ಟೇಜ್ ವಿತ್ ಬೋರಿಯಾ’ ಎಂಬ ಯೂಟ್ಯೂಬ್ ಶೋನಲ್ಲಿ ಮಾತನಾಡಿರುವ ರೋಹಿತ್ ಶರ್ಮಾ, ಒಬ್ಬ ನಾಯಕ ಮೈದಾನಕ್ಕೆ ಅಡಿ ಇಟ್ಟರೆ ತನ್ನ ಆಟದ ಮೂಲಕ ಇತರ ಆಟಗಾರರಿಗೆ ನಿದರ್ಶನವಾಗಿರಬೇಕು. ಆನ್​ಫೀಲ್ಡ್​ನಲ್ಲಿಲ್ಲದಿದ್ದರೆ ಆಟಗಾರರ ಹೆಗಲ ಮೇಲೆ ಕೈ ಇಟ್ಟು ಹುರಿದುಂಬಿಸಬೇಕು ಎನ್ನುತ್ತಾರೆ.

  ಪ್ರತಿಹೋರಾಟದ ಗುಣ:

  ಕಳೆದ ಮೂರು ಐಸಿಸಿ ಪಂದ್ಯಾವಳಿಗಳಾದ 2017ರ ಚಾಂಪಿಯನ್ಸ್ ಟ್ರೋಫಿ, 2019ರ ವಿಶ್ವಕಪ್ ಸೆಮಿಫೈನಲ್ ಮತ್ತು 2021ರ ಟಿ20 ವಿಶ್ವಕಪ್​ನಲ್ಲಿ ಭಾರತ ಯಾಕೆ ಸೋಲನುಭವಿಸಿತು ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, ಒಂದು ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡರು.

  “ಆ ಟೂರ್ನಿಗಳಲ್ಲಿ ನಮ್ಮ ಸೋಲಿಗೆ ನಿಖರ ಕಾರಣ ಗುರುತಿಸಲು ನನಗೆ ಆಗುವುದಿಲ್ಲ. ಆ ಪಂದ್ಯಗಳಲ್ಲಿ ನಾವು ಆರಂಭಿಕ ಹಂತದಲ್ಲಿ ಸೋತೆವು… ಈ ಪಂದ್ಯಗಳಲ್ಲಿ ಬೌಲಿಂಗ್ ಗುಣಮಟ್ಟ ಉಚ್ಚತಮವಾಗಿತ್ತು. ಮೂರು ಬಾರಿ ಆ ಹೊಡೆತ ಬಿದ್ದಿದೆ. ನಾಲ್ಕನೇ ಬಾರಿ ನಾವು ಆ ಸ್ಥಿತಿಗೆ ಸಿಲುಕುವುದಿಲ್ಲ ಎಂದು ಭಾವಿಸದ್ದೇನೆ.

  ಇದನ್ನೂ ಓದಿ: PKL 8- ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಬೆಂಗಳೂರು ಬುಲ್ಸ್; ಇಲ್ಲಿದೆ ಅದರ ಬಲಾಬಲ

  “10 ರನ್​ಗೆ 3 ವಿಕೆಟ್ ಬಿದ್ದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಆಡುವುದಕ್ಕೆ ನಾವು ಸರಿಯಾಗಿ ಸಜ್ಜಾಗಬೇಕಿದೆ. ನಾಯಕನಾಗಿ ನನ್ನ ಹೆಚ್ಚಿನ ಗಮನ ಇರುವುದು ಆ ಬಗ್ಗೆಯೇ. 3ರಿಂದ 6ನೇ ಕ್ರಮಾಂಕದ ಬ್ಯಾಟುಗಾರರು ಸಂಕಷ್ಟದ ಸ್ಥಿತಿಯಿಂದ ಹೋರಾಡುವುದಕ್ಕೆ ಅಣಿಗೊಳ್ಳಬೇಕು. 10 ರನ್​ಗೆ 3 ವಿಕೆಟ್ ಬಿದ್ದಾಗ ತಂಡ 190 ರನ್ ಗಳಿಸಬಾರದು ಎಂದು ಎಲ್ಲಿಯೂ ಬರೆದಿಲ್ಲ” ಎಂದು ರೋಹಿತ್ ಶರ್ಮಾ ತಿಳಿಸುತ್ತಾರೆ.

  “ಮೊದಲ ಎರಡು ಓವರ್​ನಲ್ಲಿ 10 ರನ್​ಗೆ 2 ವಿಕೆಟ್ ಕಳೆದುಕೊಳ್ಳುತ್ತೇವೆ ಎಂದಿಟ್ಟುಕೊಳ್ಳಿ. ಆಗ ಏನು ಮಾಡಬೇಕು? ಏನು ಪ್ಲಾನ್ ಇರಬೇಕು? ನಮ್ಮನ್ನ ಆ ಸ್ಥಿತಿಗೆ ಒಡ್ಡಿ ಪರೀಕ್ಷಿಸಿಕೊಳ್ಳಬೇಕಿದೆ. ಟಿ20 ವಿಶ್ವಕಪ್​ಗೆ ಮುನ್ನ ಕೆಲ ಪಂದ್ಯಗಳು ನಮಗೆ ಸಿಗುತ್ತವೆ. ಅದರಲ್ಲಿ ನಾವು ಪ್ರಯೋಗ ಮಾಡಬಹುದು” ಎಂದು ರೋಹಿತ್ ಶರ್ಮಾ ಅಭಿಪ್ರಾಯಪಡುತ್ತಾರೆ.
  Published by:Vijayasarthy SN
  First published: